News Karnataka Kannada
Sunday, April 28 2024
ಮಂಗಳೂರು

ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನ: ಮೇ 20-22: ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Urudai Sri Mukhyaprana Swamy Temple: May 20-22: Punarpratishtha Brahmakalashotsava
Photo Credit : News Kannada

ಬಂಟ್ವಾಳ: ಬಂಟ್ವಾಳ ತಾ. ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನ ಸುಮಾರು 1.50 ಕೋ.ರೂ.ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಉಡುಪಿ ಸೋದೆ ವಾದಿರಾಜ ಮಠ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ಪೌರೋಹಿತ್ಯದಲ್ಲಿ ಮೇ 20ರಿಂದ ಮೇ 22ರವರೆಗೆವ ಶ್ರೀ ಮುಖ್ಯಪ್ರಾಣ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.

ಕ್ಷೇತ್ರದ ಹಿನ್ನೆಲೆ: ತುಳುನಾಡಿನ, ಪ್ರಕೃತಿಯ ರಮಣೀಯ ಮಡಿಲಲ್ಲಿ, ಸುಮಾರು ಐದು ಶತಮಾನಗಳಿಂದ ಮೂಲ ಕುಂಞ ಕಾಯರ ವಂಶಸ್ಥರಿಂದ ಪೂಜಿಸಿಕೊಂಡು ಬಂದಿರುವ ಉರಾಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿಯ ಸನ್ನಿಧಿಯು ಭಕ್ತರ ಪಾಲಿಗೆ ನಿಜಕ್ಕೂ ಅಭಯದಾಯಕ, ಈ ಪುಣ್ಯಕ್ಷೇತ್ರವು ವಗ್ಗ, ಕಾಡಬೆಟ್ಟು ರಸ್ತೆಯಿಂದ ಸುಮಾರು 3.7 ಕಿ.ಮೀ ದೂರದಲ್ಲಿ, ವಾಮದಪದವಿನಿಂದ 3 ಕಿ.ಮೀ ದೂರದಲ್ಲಿದೆ.

ಊರ ಪರವೂರ ಭಕ್ತರೆಲ್ಲರೂ ಸೇರಿಕೊಂಡು ಅನೂಚಾನವಾಗಿ ಶ್ರೀ ದೇವರ ಆರಾಧನೆಯು ವಿದ್ಯುಕ್ತವಾಗಿ, ನಿರಂತರ ನಡೆದುಕೊಂಡು ಬಂದಿರುತ್ತದೆ. ಊರ-ಪರವೂರ ದಾನಿಗಳ ಸಹಕಾರದಿಂದ ನಿತ್ಯಪೂಜೆ-ಪುನಸ್ಕಾರ ವಾರ್ಷಿಕ ಜಾತ್ರಾ ಮಹೋತ್ಸವಗಳು ಸಾಂಗವಾಗಿ, ನಡೆಯುತ್ತಿರುವುದು. ಶ್ರೀ ಮುಖ್ಯಪ್ರಾಣ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ಭಕ್ತಿಪೂರ್ವಕವಾಗಿ ರಂಗಪೂಜೆಯ ಸೇವೆಯನ್ನು ಭಕ್ತರು ನಡೆಸಿಕೊಂಡಲ್ಲಿ, ಶ್ರೀ ದೇವರು ವಿಶೇಷ ಅನುಗ್ರಹವನ್ನು ನೀಡಿ ಅವರ ಇಷ್ಟಾರ್ಥಗಳನ್ನು ನೇರವೇರಿಸಿದ ಪ್ರತೀತಿ ಈ ಪುಣ್ಯಕ್ಷೇತ್ರಕ್ಕಿದೆ. ಅದಲ್ಲದೆ ಶ್ರೀ ಮುಖ್ಯಪ್ರಾಣ ಸ್ವಾಮಿಗೆ ಅತ್ಯಂತ ಪ್ರಿಯವಾದ ಸೀಯಾಳಾಭಿಷೇಕದ ಸೇವೆಯು ಪ್ರತೀ ಶನಿವಾರದಂದು ವಿಶೇಷವಾಗಿ ನಡೆಯುತ್ತಿದೆ, ಕಾರಣಿಕಕ್ಕೆ ಮನೆಮಾತಾಗಿರುವ ಶ್ರೀ ಮುಖ್ಯಪ್ರಾಣ ಸ್ವಾಮಿಯು ನಯನ ಮನೋಹರ ದಿವ್ಯಮೂರ್ತಿಯು ಉರುಡಾಯಿಯಲ್ಲಿ, ಶಾಂತಾಕಾರವಾಗಿ ನೆಲೆಗೊಂಡು ಭಕ್ತಾದಿಗಳ ಮನಸ್ಸಿಗೆ ಮುದವನ್ನು ನೀಡುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷತೆ.

ಅತ್ಯಂತ ಪ್ರಾಚೀನವಾದ ಈ ದೇವಸ್ಥಾನವು ಜೀರ್ಣಾವಸ್ಥೆಯಲ್ಲಿದ್ದಾಗ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಬೇಕೆಂದು ಭಕ್ತಾದಿಗಳು ನಿಶ್ಚಯಿಸಿದಂತೆ, ಬಲೂರು ಮುರಳೀಧರ ತಂತ್ರಿಅವರ ನೇತೃತ್ವದಲ್ಲಿ ನಡೆದ ಆರೂಢಪ್ರಶ್ನಾ ಚಿಂತನೆಯ ಪ್ರಕಾರ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ. ದೇವಸ್ಥಾನದ ಶಿಲಾಮಯ ಗರ್ಭಗುಡಿ, ಕೂಡು ಮಂಟಪದ ಮೇಲ್ಛಾವಣಿಯ ತಾಮ್ರದ ಹೊದಿಕೆ, ಸುತ್ತು ಪೌಳಿ, ಸಾನಿಧ್ಯ ದೈವಗಳಿಗೆ ಪ್ರತ್ಯೇಕ ಕಟ್ಟೆಗಳು, ಪಾಕಶಾಲೆ, ತೀರ್ಥ ಬಾವಿ, ನಾಗನಕಟ್ಟೆ, ಅರ್ಚಕರ ಕೊಠಡಿ, ತಡೆಗೋಡೆ, ಶೌಚಾಲಯದ ವ್ಯವಸ್ಥೆ ಮತ್ತು ದೇವಸ್ಥಾನಕ್ಕೆ ಬರುವ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಊರ-ಪರವೂರ ಭಕ್ತಾಭಿಮಾನಿಗಳ ಉದಾರ ದೇಣಿಗೆಯ ಜೊತೆಜೊತೆಗೆ ಜಾಗದಾನ, ಶ್ರಮದಾನ, ಹೀಗೆ ಹಲವು ಬಗೆಯ ಸಹಕಾರಗಳೊಂದಿಗೆ ಶ್ರೀ ಮುಖ್ಯಪ್ರಾಣ ಸ್ವಾಮಿಯ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ನಡೆದಿದ್ದು, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.

ಮೇ 20ರಂದು ಬೆಳಗ್ಗೆ ತೋರಣ ಮುಹೂರ್ತ, ವಿವಿಧ ವೈದಿಕ ಕಾರ್ಯಕ್ರಮಗಳುಮಧ್ಯಾಹ್ನ ೩ ಗಂಟೆಯಿಂದ ವಿವಿಧೆಡೆಯಿಂದ ಸಂಗ್ರಹಿಸಿದ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಮೆರವಣಿಗೆ ರಾಮೊಟ್ಟು ಮೈದಾನದಿಂದ ದೇವಸ್ಥಾನಕ್ಕೆ ಆಗಮಿಸಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯನ್ನು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿರುವರು.ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತಿತರರು ಭಾಗವಹಿಸಲಿರುವರು.

ಬಳಿಕ ತಾಂಬೂಲ ಕಲಾವಿದರಿಂದ ಪರಿಮಳ ಕಾಲೊನಿ ನಾಟಕ ನಡೆಯಲಿದೆ. ಮೇ 21ರಂದು ಬೆಳಗ್ಗೆ 9.10ರ ಮಿಥುನ ಲಗ್ನದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠೆ, ನಾಗದೇವರ ಪ್ರತಿಷ್ಠೆ, ಹಾಗೂ ದೈವಗಳ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಭಜನೆ, ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ನಾಟ್ಯ ವೈಭವ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿರುವರು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಮತ್ತಿತರರು ಭಾಗವಹಿಸಲಿರುವರು. ಬಳಿಕ ಶಾರದಾ ಆರ್ಟ್ಸ್ ಕಲಾವಿದರಿಂದ ಯಾನ್ ಉಲ್ಲೆತ್ತಾ ತುಳು ನಾಟಕ ನಡೆಯಲಿದೆ. ಮೇ 22ರಂದು ಬೆಳಗ್ಗೆ 10.30 ಕ್ಕೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿರುವರು. ಬಳಿಕ ವಿಟ್ಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಂಗ ಪೂಜೆ, ರಾತ್ರಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ವೀರೇಂದ್ರ ಅಮೀನ್ ವಗ್ಗ, ಕೋಶಾಽಕಾರಿ ಜಯರಾಮ ಕುಲಾಲ್ , ಸಂತೋಷ್ ಕುಮಾರ್ ಜೈನ್ ಮೇಗಿನ ಕಾಡಬೆಟ್ಟು , ದಯಾನಂದ ಕುಲಾಲ್, ಸುರೇಶ್ ಉರುಡಾಯಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು