News Karnataka Kannada
Tuesday, April 30 2024
ಮಂಗಳೂರು

ಉಜಿರೆ: ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ತೆರೆ

Ujire: Literary conference opens with cultural programme
Photo Credit : By Author

ಉಜಿರೆ: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ಸಂಪನ್ನಗೊಂಡ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿತು.

ಸಂಜೆ ಸಮ್ಮೇಳನದ ಸಮಾರೋಪದ ಬಳಿಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಮುಂಚೂಣಿಯಲ್ಲಿ ಮಂಗಳೂರು ಮತ್ತು ಉಜಿರೆಯ ವಿಶೇಷಚೇತನ ಮಕ್ಕಳ ಶಾಲೆ ‘ಸಾನಿಧ್ಯ’ದ ಮಕ್ಕಳಿಂದ ನಾಲ್ಕು ಕಾರ್ಯಕ್ರಮಗಳು ನಡೆದವು.

ಮೊದಲಿಗೆ ಮೂಡಿಬಂದ ‘ಭಕ್ತ ಪ್ರಹ್ಲಾದ’ ಯಕ್ಷಗಾನ ಪ್ರದರ್ಶನದಲ್ಲಿ ಮಕ್ಕಳು ನುರಿತ ಕಲಾವಿದರಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಪ್ರಸಂಗ ಪ್ರದರ್ಶಿಸಿ ಸೈ ಎನಿಸಿಕೊಂಡರು. ಬಳಿಕ ಮಂಗಳೂರಿನ ‘ಸಾನಿಧ್ಯ’ ಶಾಲಾ ವಿದ್ಯಾರ್ಥಿನಿ ಪೂಜಾ ಅವರ ಗಾಯನ, ಉಜಿರೆಯ ಶಾಲಾ ವಿದ್ಯಾರ್ಥಿನಿಗಳಿಂದ “ಘಲ್ಲು ಘಲ್ಲೆನುತಾವ್ ಗೆಜ್ಜೆ” ಹಾಡಿಗೆ ಸಾಮೂಹಿಕ ನೃತ್ಯ ನಡೆಯಿತು. ಬಳಿಕ, ಸುಮಾರು 50 ಕಡೆಗಳಲ್ಲಿ ಯಶಸ್ವಿ ಪ್ರದರ್ಶನಗೊಂಡ ‘ಅಮರ್ ಜವಾನ್’ ಎಂಬ ಸೈನಿಕರ ಜೀವನಾಧಾರಿತ ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಸಾಕ್ಷಿಯಾಯಿತು. ಸಾನಿಧ್ಯದ ಸಂಸ್ಥಾಪಕ ನಿರ್ದೇಶಕ ಡಾ. ವಸಂತ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಏಕವ್ಯಕ್ತಿ ಭರತನಾಟ್ಯ

ಬಳಿಕ, ಪದ್ಯಾಣದ ವಿದುಷಿ ಪ್ರಣತಿ ಚೈತನ್ಯ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನಗೊಂಡಿತು. ಶ್ರೀಕೃಷ್ಣನ ಬಾಲಲೀಲೆ, ಶ್ರೀರಾಮ- ಶೂರ್ಪನಖಿಯರ ಸಂಭಾಷಣೆ, ರಾಮನ ಬಗೆಗೆ ಶಬರಿಯ ಭಕ್ತಿಪರಾಕಾಷ್ಠೆಯನ್ನು ನೃತ್ಯದ ಮೂಲಕ ಸಾದರಪಡಿಸಿದರು. ಸುಮಾರು 45 ನಿಮಿಷಗಳ ಕಾಲ ಕಲಾಪ್ರೇಮಿಗಳನ್ನು ರಂಜಿಸಿದರು.

ಕೊನೆಯಲ್ಲಿ ‘ಸ ರಿ ಗ ಮ ಪ’ ಖ್ಯಾತಿಯ ರಜತ್ ಮಯ್ಯ ಅವರ ತಂಡದಿಂದ ಸುಮಧುರ ಗೀತೆಗಳ ಗಾಯನ ನಡೆಯಿತು.

ವರದಿ: ಭಾರತಿ ಹೆಗಡೆ,
ಚಿತ್ರಗಳು: ಶಶಿಧರ ನಾಯ್ಕ,

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು