News Karnataka Kannada
Saturday, May 04 2024
ಮಂಗಳೂರು

ಉಜಿರೆ: ಸಾಹಿತ್ಯ ವೇದಿಕೆಯಲ್ಲಿ ‘ಗಮಕ’ ವೈಭವ

'Gamaka' glory on literary platform
Photo Credit : By Author

ಉಜಿರೆ: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ಗಮಕ ವಾಚನ ನಡೆಯಿತು.

ಮಂಗಳೂರಿನಲ್ಲಿ ಗಮಕಕ್ಕೆ ಹೆಚ್ಚು ಮನ್ನಣೆ ನೀಡಿದ ಯಜ್ಞೇಶ್‌ ಎಸ್. ಸುರತ್ಕಲ್‌ ಅವರು ಗಮಕ ವಾಚನ ನಡೆಸಿದರು. ‘ಆದಿನಾಥನ ಪೂರ್ವವೃತ್ತಾಂತ’ದಿಂದ ಪ್ರಾರಂಭಗೊಂಡು ದುರ್ಯೋಧನ ವಿಲಾಪದ ವಿಚಾರಗಳನ್ನು ಗಮಕ ರೂಪದಲ್ಲಿ ವೇದಿಕೆಯ ಮೇಲೆ ಪ್ರಸ್ತುತ ಪಡಿಸಿ ಎಲ್ಲರ ಗಮನ ಸೆಳೆದರು.

ದಾಸಪದಗಳನ್ನು ಹಾಡುತ್ತ ರಂಗೋಲಿ ದಾಸ ಎಂದೇ ಖ್ಯಾತರಾಗಿರುವ ಜಗನ್ನಾಥ ದಾಸ ಅವರ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಹರಿಸ್ಮರಣೆಯ ಮಹತ್ವವನ್ನು ಸಾರುವಂತೆ ಮೂಡಿಬಂದ ‘ಹರಿಕಥಾಮೃತ ಸಾರದ’ ಎರಡು ಪದ್ಯಗಳನ್ನು ಗಮಕದ ರೂಪದಲ್ಲಿ ಪ್ರಸ್ತುತಪಡಿಸಿದ ರೀತಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿತು. ಯಾವ ದೇವರಿಗೆ ಕೈಮುಗಿದು ನಮಿಸಿದರೂ ಅದು ಹರಿಯನ್ನು ತಲುಪುತ್ತದೆ ಎಂಬ ವಿಚಾರವನ್ನು ಗಮಕದ ಮೂಲಕ ವಿವರಿಸಿದರು.

ರಾಘವಾಂಕನ ಹರಿಶ್ಚಂದ್ರ ಕಾವ್ಯದ ಚಂದ್ರಮತಿ ಪ್ರಲಾಪದ ರಗಳೆ ಕಾವ್ಯವನ್ನು ಗಮಕ ರೂಪದಲ್ಲಿ ಪ್ರಸ್ತುತಪಡಿಸಲಾಯಿತು. ಕುಮಾರವ್ಯಾಸನ ಮಂಗಳ ಹಾಡಿನೊಂದಿಗೆ ಕೃಷ್ಣನ ಕತೆಯನ್ನು ವಿವರಿಸಿ ಕಾರ್ಯಕ್ರಮವನ್ನು ಕೊನೆಗೊಳಿಸಿದರು.

ರಾಮಕೃಷ್ಣ ಭಟ್ ನಿನ್ನಿಕಲ್ಲು ಕಾರ್ಯಕ್ರಮ ನಿರ್ವಹಿಸಿದರು. “ಹಳೆಗನ್ನಡ, ನಡುಗನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಜೊತೆಗೆ ಸಾಹಿತ್ಯವನ್ನು ಉಳಿಸುವ ಕಾರ್ಯವನ್ನು ಗಮಕ ಸಾಹಿತ್ಯ ಮಾಡುತ್ತಿದೆ. ಅರವತ್ತನಾಲ್ಕು ವಿದ್ಯೆಗಳಲ್ಲಿ ಗಮಕವು ಪ್ರಮುಖವಾದದ್ದು. ಸಂಸ್ಕೃತ ಮೂಲದ ಗಮಕವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಕಾಣಲು ಸಾಧ್ಯ” ಎಂದು ಅವರು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಸಂಘಟಕರು ಹಾಗೂ ಕಲಾಪೋಷಕರಾದ ಭುಜಬಲಿ ಅವರು ಯಜ್ಞೇಶ್ ಸುರತ್ಕಲ್‌ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ವರದಿ: ಜ್ಯೋತಿ ಜಿ.

ಚಿತ್ರ: ಸಮರ್ಥ್ ಭಟ್

ಪತ್ರಿಕೋದ್ಯಮ ಮತ್ತು ಸಮೂಹದ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು