News Karnataka Kannada
Sunday, April 28 2024
ಮಂಗಳೂರು

ಗಾಳಿ ಮಳೆ ಅವಾಂತರ: ಮಲ್ಲಾರಿನಲ್ಲಿ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಸಾವು

Two killed after tree falls on auto in Mallar
Photo Credit : News Kannada

ಕಾಪು, ಮೇ.೧೧ : ಗಾಳಿ ಮಳೆಯ ಪರಿಣಾಮ ಕಾಪು – ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ನಡೆದಿದೆ.

ಕಾಪುವಿನಿಂದ ಪಾದೂರಿಗೆ ತೆರಳುತ್ತಿದ್ದ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಾದೂರು ಕೂರಾಲು ರೈಸ್‌ಮಿಲ್ ಬಳಿಯ ನಿವಾಸಿ ಪುಷ್ಪ ಕುಲಾಲ್ ಮತ್ತು ಕಳತ್ತೂರು ನಿವಾಸಿ ಕೃಷ್ಣ ಮುಖಾರಿ ಮೃತಪಟ್ಟಿದ್ದು ರಿಕ್ಷಾ ಚಾಲಕ ಶರೀಫ್‌ ಎಂಬಾತ ಪವಾಡ ಸಧೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಂದೇ ರಿಕ್ಷಾದಲ್ಲಿ ಪ್ರಯಾಣಿಕರಾಗಿ ಕಾಪುವಿನಿಂದ ಮನೆಗೆ ತೆರಳುತ್ತಿದ್ದ ಪುಷ್ಪಾ ಕುಲಾಲ್ ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯಲ್ಲಿ ಶಾಶ್ವತ ಅಂಗೈವಕಲ್ಯದಿಂದ ಬಳಲುತ್ತಿರುವ ಸಹೋದರಿಯೊಬ್ಬರಿದ್ದು ಅವರ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಪುಷ್ಪಾ ಅವರೇ ನಿರ್ವಹಿಸುತ್ತಿದ್ದರು. ತಾಯಿಯಂತೆ ಆರೈಕೆ ಮಾಡುತ್ತಿದ್ದ ಸಹೋದರಿಯನ್ನು ಕಳೆದುಕೊಂಡ ಅವರ ಆಕ್ರಂಧನ ಮುಗಿಲು ಮುಟ್ಟಿದೆ. ಮೃತ ಕೃಷ್ಣ ಮುಖಾರಿ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ರಿಕ್ಷಾದ ಮೇಲಿನಿಂದ ಮರವನ್ನು ತೆರವು ಗೊಳಿಸಲು ಭಾರೀ ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಒಂದೂವರೆ ಗಂಟೆಗಳ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು. ಆದರೆ ರಿಕ್ಷಾದೊಳಗೆ ಸಿಲುಕಿದ್ದ ಪ್ರಯಾಣಿಕರು ಅಷ್ಟರಲ್ಲೇ ಮೃತ ಪಟ್ಟಿದ್ದು ಮೃತದೇಹಗಳನ್ನು ಹೊರಗೆ ತೆಗೆದು, ಅಂಬುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು ಜನರನ್ನು ನಿಯಂತ್ರಿಸಲು ಕಾಪು ಎಸ್ಸೈ ಸುಮಾ ಬಿ., ಕ್ರೈಂ ಎಸ್ಸೈ ಭರತೇಶ ಕಂಕಣವಾಡಿ ಸಹಿತ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳು ಪರದಾಡುವಂತಾಯಿತು. ಜನ ಮತ್ತೆ ಮತ್ತೆ ಘಟನಾ ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ನಡೆಸಲೂ ತೊಂದರೆಯಾಗಿದ್ದು, ಜನರನ್ನು ನಿಯಂತ್ರಿಸಲು ಸ್ಥಳೀಯರು ಪೊಲೀಸರೊಂದಿಗೆ ಕೈ ಜೋಡಿಸಿದ್ದರು. ರಸ್ತೆ ಸಂಚಾರವೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ವಾಹನಗಳಿಗೆ ಪಾದೂರು-ಮಜೂರು ರಸ್ತೆ ಮೂಲಕ ಸಂಚರಿಸಳು ಅನುವು ಮಾಡಿಕೊಡಲಾಯಿತು.

ಸ್ವಲ್ಪದರಲ್ಲೇ ಪಾರಾದ ಮತ್ತೊಂದು ರಿಕ್ಷಾ : ಮರ ಉರುಳಿ ಬೀಳುವಾಗ ಮತ್ತೊಂದು ರಿಕ್ಷಾ ಸ್ಪಲ್ಪದರಲ್ಲೇ ಪಾರಾಗಿದ್ದು ರಿಕ್ಷಾ ಚಾಲಕ ಗಟ್ಟಿ ಧೈರ್ಯ ತೋರಿದ ಪರಿಣಾಮ ಚಾಲಕ ಮತ್ತು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗುವಂತಾಗಿದೆ. ಮರ ಬೀಳುತ್ತಿರುವುದನ್ನು ಗಮನಿಸಿದ ರಿಕ್ಷಾ ಚಾಲಕ ಕೂಡಲೇ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದ್ದು ಮಳೆ ಕಾರಣ ರಿಕ್ಷಾ ಅಲ್ಲೇ ಮಗುಚಿ ಬಿದ್ದಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಾತಿ ಮತ ಬೇದ ಮರೆತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ ಜನ : ರಿಕ್ಷಾದ ಮೇಲೆ ಮರ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಪರಿಹಾರ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಜಾತಿ, ಮತ, ಭೇದವಿಲ್ಲದೇ ಕೈ ಜೋಡಿಸಿದರು. ಮರ ತೆರವುಗೊಳಿಸಲು ಜೀವದ ಹಂಗು ತೊರೆದು ಜನ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಕಾಪು ಎಸ್ಸೈ ಸುಮಾ ಜನರನ್ನು ನಿಯಂತ್ರಿಸಲು ಶ್ರಮಿಸಿದರೆ, ಕ್ರೈಂ ಎಸ್ಸೈ ಜೆಸಿಬಿ ಆಪರೇಟರ್ ಜತೆಗಿದ್ದ ಜೆಸಿಬಿ ಚಲಾಯಿಸಲು ಮಾರ್ಗದರ್ಶನ ನೀಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೃತದೇಹ ಸಾಗಾಟಕ್ಕೆ ಕಾಪು ಸರಕಾರಿ ಆಸ್ಪತ್ರೆಯ ಅಂಬುಲೆನ್ಸ್ ಜತೆಗೆ ಎಸ್‌ಡಿಪಿಐ ಆಂಬ್ಯುಲೆನ್ಸ್‌ನ್ನು ಬಳಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು