News Karnataka Kannada
Sunday, April 28 2024
ಮಂಗಳೂರು

ಸುಳ್ಯ: ಹರಿವು ನಿಲ್ಲಿಸಿದ ಪಯಸ್ವಿನಿ, ಏಳು ವರ್ಷಗಳ ಬಳಿಕ ಮತ್ತೆ ಬರಗಾಲದ ಕರಿಛಾಯೆ

Payaswini stops flow, after seven years, drought casts shadow again
Photo Credit : News Kannada

ಸುಳ್ಯ: ವಿಪರೀತ ಬಿಸಿಲು ಹಾಗೂ ಸುರಿಯದ ಬೇಸಿಗೆ ಮಳೆಯಿಂದಾಗಿ ಸುಳ್ಯದ ಜೀವನದಿ ಪಯಸ್ವಿನಿ ಹರಿವು ನಿಲ್ಲಿಸಿದೆ. ಏಳು ವರ್ಷಗಳ ಬಳಿಕ ಮತ್ತೆ ತಾಲೂಕಿನ ಹಲವೆಡೆ ನೀರಿಗೆ ತತ್ವಾರ ಎದುರಾಗಿದ್ದು, ಮಳೆ ಸುರಿಯದಿದ್ದರೆ‌ ಜಲಮೂಲಗಳು ಸಂಪೂರ್ಣ ಬರಿದಾಗಲಿವೆ.

ಭೂಮಿ ಬೆಂದು ಬರಡಾಗಿ ಬಸವಳಿಯುತ್ತಿದ್ದಂತೆ ಜಲಮೂಲಗಳು ಆವಿಯಾಗಿ ಬತ್ತಿ ಬರಡಾಗುತಿವೆ. ಬರಗಾಲದ ಮತ್ತು ನೀರಿಗೆ ಹಾಹಾಕಾರದ ಮುನ್ಸೂಚನೆ ನೀಡಿ ಸುಳ್ಯದ ಜೀವ ನದಿ ಪಯಸ್ವಿನಿ ಬತ್ತಿ ಹೋಗಿದೆ. ವಿಶಾಲ ನದಿ ಒಡಲಲ್ಲಿ‌ ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ನಿಂತಿದೆ‌. ಈಗಾಗಲೇ ಸುಳ್ಯ ತಾಲೂಕಿನ ಕೆಲವು ಕಡೆ ನೀರಿನ ಸಮಸ್ಯೆ ಉದ್ಭವಿಸಿದೆ. ಇನ್ನೂ ಹತ್ತು ದಿನ ಮಳೆ ಬರದಿದ್ದರೆ ಬರಗಾಲದ ಕರಿ ಛಾಯೆ ಆವರಿಸಿ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ಜೀವನದಿ ಪಯಸ್ವನಿಯಲ್ಲಿ ನೀರಿನ ಹರಿವು ನಿಂತು ಹೋಗಿ ಹಲವು ಕಡೆ ನೀರು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಕೆಲವು ಕಡೆ ಮೀನುಗಳು ಮತ್ತಿತರ ಜಲಚರಗಳು ಸಾಯುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉತ್ತಮ ಮಳೆ ಸುರಿದ‌ ಕಾರಣ ಪಯಸ್ವಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿರಲಿಲ್ಲ. ಕುಡಿಯುವ ನೀರಿಗೂ ಅಷ್ಟಾಗಿ ಸಮಸ್ಯೆ ಎದುರಾಗಲಿಲ್ಲ. ಆದರೆ ಈ ಬಾರಿ ಮಾರ್ಚ್‌ನಲ್ಲಿ‌ ಮಳೆ‌ಯೇ ಸುರಿಯಲಿಲ್ಲ, ಏಪ್ರಿಲ್ ಅರ್ಧವಾದರೂ ವರುಣನ ಸುಳಿವಿಲ್ಲ.

2016ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಭೀಕರ ಬರಗಾಲದ ಲಕ್ಷಣ ಕಂಡು ಬಂದಿದೆ. 7 ವರ್ಷದ ಹಿಂದೆ ಪಯಸ್ವಿನಿ ನದಿ ಸಂಪೂರ್ಣ ಬತ್ತಿ ಹೋಗಿ ನೀರಿಗೆ ಹಾಹಾಕಾರ ಉಂಟಾಗಿದೆ. ಹಿಂದೆಲ್ಲಾ ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು, ಗಯಗಳು ಇದ್ದವು. ಇವು ನದಿಯ ಜಲಸಂಗ್ರಹದ ಹೊಂಡಗಳಾಗಿತ್ತು.‌ ಎಷ್ಟೇ ಕಠಿಣ ಬೇಸಿಗೆ ಬಂದರೂ ಆ ಹೊಂಡಗಳು ಬತ್ತುತ್ತಿರಲಿಲ್ಲ. ಅಲ್ಲಿ ಸಂಗ್ರಹವಾಗುವ ನೀರಿದು ನದಿಯನ್ನು ಸದಾ ಜಲ‌ಸಮೃದ್ಧವಾಗಿ ಇರಿಸಿತ್ತು. ಆದರೆ ಇಂದು ಅಂತಹ ಹೊಂಡಗಳೇ ಮರೆಯಾಗಿದೆ. ಹೂಳು, ಮರಳು ತುಂಬಿ ಆ ಹೊಂಡಗಳು ಭರ್ತಿಯಾಗಿ ನೀರು ನಿಲ್ಲದಂತಾಗಿದೆ.

2018ರಲ್ಲಿ ಜೋಡುಪಾಲದಲ್ಲಿ ಉಂಟಾದ ಜಲಪ್ರಳಯದಿಂದ ರಾಶಿಗಟ್ಟಲೆ ಮಣ್ಣು, ಮರಳು, ಹೂಳು ಬಂದು ಗಯಗಳು ಮುಚ್ಚಿ ಹೋದವು. ನದಿಯಲ್ಲಿ ನೀರು ಸರಾಗ ಹರಿದು ಸಮುದ್ರ ಸೇರುತ್ತದೆ. ಬೇಸಿಗೆ ಆರಂಭದಲ್ಲೇ ನೀರಿನ ಹರಿವು ನಿಂತು ಹೋಗಿ ಬತ್ತಲು ಆರಂಭಿಸುತ್ತದೆ. ನದಿಯಲ್ಲಿನ ಮರಳು, ಹೂಳು ತೆಗೆಯದ‌ ಕಾರಣ ಬೇಸಿಗೆಯಲ್ಲಿ ಬೇಗನೆ ಬತ್ತಿ ಹೋಗಿ ಬರಗಾಲ, ಮಳೆಗಾಲದಲ್ಲಿ ತುಂಬಿ ಹರಿದು ಜಲ ಪ್ರಳಯ ಉಂಟಾಗುವ ಆತಂಕ‌ ಎದುರಾಗಿದೆ.

ಇದಲ್ಲದೆ ನದಿತೀರದಲ್ಲಿ ವ್ಯಾಪಕ ಬೋರ್ ವೆಲ್ ಕೊರೆತ ಹಾಗೂ ಕೃಷಿಗಾಗಿ‌ ಯಥೇಚ್ಛವಾಗಿ ನದಿನೀರಿನ ಬಳಕೆಯೂ ಪಯಸ್ವಿನಿ ಬತ್ತಲು ಕಾರಣವಾಗಿದೆ. ಸುಳ್ಯ ನಗರಕ್ಕೆ ಸದ್ಯಕ್ಕೆ ನೀರಿನ ಆತಂಕ‌ ಇಲ್ಲದಿದ್ದರೂ ವಾರದೊಳಗೆ ಮಳೆಯಾಗದಿದ್ದರೆ ನೀರಿನ ಕೊರತೆ ಕಾಣಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು