ಮಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾದಂತೆಯೇ ಮಂಗಳೂರು ದಸರಾದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ವಿ. ಸುನಿಲ್ ಕುಮಾರ್ ಅವರು ಸೆ.5 ರಂದು ನಡೆಯಲಿರುವ ಕುದ್ರೋಳಿ ದಸರಾ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖ್ಯಾತಿ ಗಳಿಸಿರುವ ಆಕರ್ಷಣೀಯ ಜನಪದ ಕಲಾ ತಂಡಗಳನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ದಿಸೆಯಲ್ಲಿ ಪ್ರಖ್ಯಾತಿ ಪಡೆದಿರುವ ನಂದಿದ್ವಜ ಕುಣಿತ, ಕರಡಿಮಜಲು, ಭಜನೆ ಕುಣಿತ, ಹಲಗಿ ಮಜಲು, ಕಂಸಾಳೆ, ಪಟಾಕುಣಿತ, ಗೊರವರ ಕುಣಿತ, ಪುರವಂತಿಕೆ, ಹಗಲುವೇಷ, ಜಗ್ಗಲಿಗೆ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಲಂಬಾಣಿ ನೃತ್ಯ, ಸಂಬಳಾವಾಸನ, ಸೋಮನ ಕುಣಿತ, ಝಂಜ್ ಮೇಳ, 50 ಜನರ ಭಜನಾ ತಂಡ, ಕೊರಗರ ಡೋಲು ಕುಣಿತ, ಕಂಗಿಲು, ಚಂಡೆ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವೈಶಿಷ್ಟ್ಯತೆಯನ್ನು ಸಾರುವ, ಅಲ್ಲಿನ ಸಂಸ್ಕೃತಿ ಬಿಂಬಿಸುವ ವಿವಿಧ ಜನಪದ ಕಲಾತಂಡಗಳನ್ನು ಅಕ್ಟೋಬರ್ 5 ರಂದು ನಡೆಯುವ ಕುದ್ರೋಳಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಯನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.