News Karnataka Kannada
Friday, May 03 2024
ಮಂಗಳೂರು

ಪುತ್ತೂರು: ದಿವ್ಯಾಂಗ ಚೇತನರ ಉದ್ಯೋಗ ಮೇಳ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

MLA Sanjeeva Mathandur inaugurated a job fair for divyang chetanas
Photo Credit : News Kannada

ಪುತ್ತೂರು: ಈಗಾಗಲೇ ಶಾಸಕರ ನಿಧಿಯನ್ನು ಬಳಸಿಕೊಂಡು ದಿವ್ಯಾಂಗಚೇತನರಿಗೆ ಕೃತಕ ಕಾಲು ಸೇರಿದಂತೆ ಅನೇಕ ಪರಿಕರಗಳನ್ನು ನೀಡುವ ಕೆಲಸ ಆಗಿದೆ. ತಾಲೂಕು ಪಂಚಾಯತ್ ನಿಧಿಯಿಂದ ಸ್ಕೂಟರ್ ಅನ್ನು ನೀಡಲಾಗಿದೆ. ದಿವ್ಯಾಂಗಚೇತನರಿಗೆ ಸರಕಾರದ ಮೀಸಲಾತಿ ಕಡಿಮೆ ಇದ್ದರೂ, ಇರುವ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಲು ನಾವು ಶ್ರಮಿಸಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇದರ ನೇತೃತ್ವದಲ್ಲಿ ರೋಟರ್ಯಾಕ್ಟ್ ಜಿಲ್ಲೆ 3181, ಮಂಗಳೂರು ಸರ್ವಮಂಗಳ ಟ್ರಸ್ಟ್, ಪುತ್ತೂರು ದಿವ್ಯಾಂಗಜನ್ಸ್ ಫೌಂಡೇಶನ್ ಸಂಯೋಜನೆಯಲ್ಲಿ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಯುವ, ಉಜಿರೆ ರುಡ್ ಸೆಟ್ ಸಂಸ್ಥೆ, ಕೊಂಬೆಟ್ಟು ಪ.ಪೂ. ಕಾಲೇಜು ಸಹಕಾರದಲ್ಲಿ ಭಾನುವಾರ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ದ.ಕ. ಜಿಲ್ಲೆಯ ಅರ್ಹ ವಿದ್ಯಾವಂತ ದಿವ್ಯಾಂಗ ಚೇತನರ ಉದ್ಯೋಗ ಮೇಳ 2023ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಭಿಮಾನಿ, ಸ್ವಾವಲಂಭಿ ಜೀವನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅರ್ಹ ವಿದ್ಯಾವಂತ ದಿವ್ಯಾಂಗಚೇತನರ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿದೆ. ಮೊಳಹಳ್ಳಿ ಶಿವರಾಯರ ಹೆಸರಿನ ಶಿವಸದನ ಸಭಾಂಗಣದಲ್ಲಿ ನಡೆಯುತ್ತಿರುವ ದಿವ್ಯಾಂಗಚೇತನರ ಉದ್ಯೋಗ ಮೇಳ ಇತಿಹಾಸ ನಿರ್ಮಿಸಿದೆ ಎಂದರು.

ದಿವ್ಯಾಂಗಚೇತನರು ಇತರರಂತೆ ಬದುಕಬೇಕು. ಈ ನಿಟ್ಟಿನಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಸಂದೇಶವನ್ನು ಈ ಉದ್ಯೋಗ ಮೇಳ ನೀಡುತ್ತಿದೆ. ದಿವ್ಯಾಂಗ ಚೇತನರ ಆರೋಗ್ಯ, ಜೀವನದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಅವರಿಗೆ ಉದ್ಯೋಗ ನೀಡಿ, ಸ್ವಾವಲಂಭಿ ಬದುಕು ಕಲ್ಪಿಸಿಕೊಡುವತ್ತಲೂ ಆಲೋಚನೆ ಮಾಡಿರುವುದು ಉತ್ತಮ ವಿಚಾರ ಎಂದು ಶ್ಲಾಘಿಸಿದರು.

ದಿವ್ಯಾಂಗಚೇತನರ ಉದ್ಯೋಗಮೇಳ ಇದೇ ಮೊದಲು: ದಿವ್ಯಪ್ರಭಾ ಗೌಡ ಚಿಲ್ತಡ್ಕ

ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ಕೆಲವರಿಗೆ ದೇವರು ಅಂಗವಿಕಲತೆಯನ್ನು ನೀಡಿದ್ದರೂ, ವಿಶೇಷ ವರವನ್ನು ನೀಡಿರುತ್ತಾನೆ. ಅವರ ಕೈಚಳಕದಿಂದ ಉತ್ತಮ ಕರಕುಶಲ ಕಲೆಗಳು ಮೂಡಿಬರುತ್ತಿರುವುದನ್ನು ನಾವು ಕಾಣಬಹುದು. ಆದ್ದರಿಂದ ದಿವ್ಯಾಂಗಚೇತನರಿಗೆ ತಾನು ಕೂಡ ಸಾಧಿಸಬಲ್ಲೇ ಎನ್ನುವ ಮನೋಧೈರ್ಯವನ್ನು ತುಂಬುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ದಿವ್ಯಾಂಗಚೇತನರಿಗಾಗಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಬಹುಶಃ ದಿವ್ಯಾಂಗಚೇತನರ ಉದ್ಯೋಗಮೇಳ ಇದೇ ಮೊದಲು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಅಂಗವಿಕಲರ ಕಲ್ಯಾಣ ಇಲಾಖೆಗೆ ಬಹಳ ಕಡಿಮೆ ಅನುದಾನ ಬರುತ್ತದೆ. ಇದರಿಂದಾಗಿ ದಿವ್ಯಾಂಗಚೇತನರು ಬಹಳ ಕಷ್ಟಪಡುವ ಪರಿಸ್ಥಿತಿ ಇದೆ. ಆದ್ದರಿಂದ ಈ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ಪ್ರಯತ್ನ ಆಗಬೇಕು. ಇದರೊಂದಿಗೆ ಹೆಚ್ಚಿನ ಮಾಸಾಶನ ಹಾಗೂ ಸಣ್ಣ ಉದ್ಯೋಗ ನೀಡುವ ದೃಷ್ಟಿಯಿಂದ ತಾನೂ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಯುಡಿಐಡಿ ಕಾರ್ಡ್ ಕಡ್ಡಾಯ: ಭಾರತಿ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಭಾರತಿ ಮಾತನಾಡಿ, ವಿಕಲಚೇತನರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ, ಸರಕಾರದ ಸೌಲಭ್ಯ ಪಡೆದುಕೊಳ್ಳುವ ಪ್ರಕ್ರಿಯೆ ವಿಳಂಬವಾಗಬಹುದು. ವಿಕಲಚೇತನರ ಹೆತ್ತವರ ನೋವು, ಅವರಿಗೆ ಮಾತ್ರ ಗೊತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಮಾಜದಿಂದಲೂ ಸ್ಪಂದನೆ ಸಿಗಬೇಕು ಎಂದರು.

ಕೆಲಸದಲ್ಲಿ ಕೀಳರಿಮೆ ಬೇಡ: ಉಮಾನಾಥ್ ಪಿ.ಬಿ.

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ. ಮಾತನಾಡಿ, ಪ್ರಾರಂಭದಲ್ಲಿ ತಾನು ಕೆಲಸ ಹುಡುಕಲು ಪಟ್ಟ ಶ್ರಮವನ್ನು ವಿವರಿಸುತ್ತಾ, ಸ್ವ ಉದ್ಯೋಗದತ್ತ ಹೆಚ್ಚಿನ ಗಮನ ನೀಡಬೇಕು. ಹಾಗೆಂದು ಯಾವ ಕೆಲಸವೂ ಕೀಳಲ್ಲ. ನಾವು ಮಾಡುವ ಕೆಲಸ ಅಥವಾ ಉದ್ಯೋಗದ ಬಗ್ಗೆ ಯಾರೂ ಕೀಳರಿಮೆ ಇಟ್ಟುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಹಾಗೂ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಡಿ.ಆರ್.ಸಿ.ಸಿ. ರತ್ನಾಕರ್ ರೈ, ರೋಟರಿ ಕ್ಲಬ್ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್, ರೋಟರ್ಯಾಕ್ಟ್ ಜಿಲ್ಲೆ 3181 ಇದರ ಜಿಲ್ಲಾ ಪ್ರತಿನಿಧಿ ನಿಖಿಲ್ ಆರ್.ಕೆ. ಶುಭಹಾರೈಸಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದಯಾನಂದ್, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ರೋಟರ್ಯಾಕ್ಟ್ ದಿವ್ಯಾಂಗಚೇತನರ ಅಭಿವೃದ್ಧಿ ವಿಭಾಗದ ಜಿಲ್ಲಾ ನಿರ್ದೇಶಕ ಹಾಗೂ ದಿವ್ಯಾಂಗಜನ್ಸ್ ಫೌಂಡೇಶನ್ ಸ್ಥಾಪಕ ಪಿ.ವಿ. ಸುಬ್ರಮಣಿ, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಧರ್ಣಪ್ಪ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಸಂತ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಐಎಎಸ್-ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರದ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ಹಾಗೂ ದಿವ್ಯಾಂಗ ಚೇತನರಿಗೆ ಲಭ್ಯವಿರುವ ಸ್ವ ಉದ್ಯೋಗ ತರಬೇತಿ ಕುರಿತು ಉಜಿರೆ ರುಡ್ ಸೆಟ್ ಸಂಸ್ಥೆ ನಿರ್ದೇಶಕ ಸುರೇಶ್ ಅವರು ಮಾಹಿತಿ ನೀಡಿದರು. ಉದ್ಯೋಗದಾತರಾಗಿ ಆಗಮಿಸಿದ ಕಂಪೆನಿಗಳ ಪ್ರತಿನಿಧಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಿಂದ ಅರ್ಹ ಫಲಾನುಭವಿಯೋರ್ವರಿಗೆ ಎಲ್ಬೋ ಕ್ರಚ್ಚರ್ಸ್ ಸಾಧನವನ್ನು ಈ ಸಂದರ್ಭ ನೀಡಲಾಯಿತು.

ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷೆ ರಾಜೇಶ್ವರಿ ವಂದಿಸಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಾಮಾಜಿಕ ಸೇವಾ ನಿರ್ದೇಶಕ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.

ದಿವ್ಯಾಂಗಚೇತನರ ಉದ್ಯೋಗಮೇಳ:

ಜಿಲ್ಲಾ ಮಟ್ಟದ ದಿವ್ಯಾಂಗಚೇತನರ ಉದ್ಯೋಗಮೇಳದಿಂದ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 150ಕ್ಕೂ ಅಧಿಕ ದಿವ್ಯಾಂಗಚೇತನರು ಭಾಗವಹಿಸಿದ್ದರು. ಇದರಲ್ಲಿ 25ಕ್ಕೂ ಅಧಿಕ ಮಂದಿ ಅರ್ಹ ಅಭ್ಯರ್ಥಿಗಳನ್ನು ಕಂಪೆನಿಗಳು ಆಯ್ಕೆ ಮಾಡಿಕೊಂಡಿದೆ. ಉದ್ಯೋಗಮೇಳದಲ್ಲಿ ಭಾಗವಹಿಸಲು ಅನಾನುಕೂಲವಾದ ಕಂಪೆನಿಗಳು, ಅಭ್ಯರ್ಥಿಗಳ ಸ್ವವಿವರವನ್ನು ಕಳುಹಿಸಿಕೊಡಲು ಕೇಳಿಕೊಂಡಿದ್ದು, ಇನ್ನಷ್ಟು ಮಂದಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು