News Karnataka Kannada
Monday, April 29 2024
ಮಂಗಳೂರು

ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ

Puttur: BJP youth leader Praveen Nettaru hacked to death
Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯನೊಬ್ಬನನ್ನು ದುಷ್ಕರ್ಮಿಗಳ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು(29) ಎಂಬ ಯುವಕನನ್ನು ನಗರದ ಬೆಳ್ಳಾರೆ ಪೇಟೆಯಲ್ಲಿ ಹತ್ಯೆ ಮಾಡಲಾಗಿದೆ. ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಬೈಕ್‌ನಲ್ಲಿ ಬಂದಂತಹ ಅಪರಿಚಿತ ದುಷ್ಕರ್ಮಿಗಳು ಪ್ರವೀಣ್ ಮೇಲೆ ಮನಸೋ ಇಚ್ಛೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದರು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪೆರುವಾಜೆ ಕ್ರಾಸ್‌ ಬಳಿ ಪ್ರವೀಣ್‌ ಅವರು ಕೋಳಿ ಅಂಗಡಿ ಹೊಂದಿದ್ದು, ರಾತ್ರಿ ಅಂಗಡಿ ಮುಚ್ಚುತ್ತಿರುವ ವೇಳೆ ಬೈಕ್‌ನಲ್ಲಿ ಬಂದಂತಹ ಮೂವರು ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಪ್ರವೀಣ್ ತಪ್ಪಿಸಿಕೊಳ್ಳಲು ಓಡಿದರಾದರೂ ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಶಾಂತಿ ಕಾಪಾಡುವಂತೆ ಸಿಎಂ ಬೊಮ್ಮಾಯಿ ಮನವಿ:

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆ ಶಾಂತಿ ಕಾಪಾಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತು ನಾನು ಗೃಹ ಸಚಿವರ ಜೊತೆಗೂ ಮಾತಾಡಿದ್ದೇನೆ. ಸಂಪೂರ್ಣ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇಂಥ ಕೃತ್ಯ ಎಸಗುವವರನ್ನ ಮಟ್ಟಹಾಕುವ ಕೆಲಸ ಮಾಡುತ್ತೇವೆ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಅಮಾಯಕ ಕೊಲೆಯಾದಗ ಆಕ್ರೋಶವಿರುತ್ತೆ. ಎಲ್ಲರಿಗೂ ಶಾಂತಿ ಸಹನೆಯಿಂದ ಇರಲು ಸೂಚಿಸಿದ್ದೇನೆ. ಹೋಮ್ ಮಿನಿಸ್ಟರ್, ಎಸ್​ಪಿಗೆ ಎಲ್ಲಾ ಸೂಚನೆ ನೀಡಿದ್ದಾರೆ. ಅದಷ್ಟು ಬೇಗ ಕೊಲೆಗಡಕರನ್ನ ಬಂಧಿಸಲು ಸೂಚನೆ ನೀಡಲಾಗಿದೆ. ಕೇರಳ ಬಾರ್ಡರ್ ಆಗಿರೋದ್ರಿಂದ ಕೇರಳಕ್ಕೆ ಹೋಗಿಯಾದ್ರೂ ಕಾರ್ಯಚರಣೆ ಮಾಡಲು ಸೂಚಿಸಿದೆ. ಕೆಲವೊಂದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ‌.

ಹಿಂದಿನಿಂದ ಬಂದು ಮೋಸ ಮಾಡಿ ಕೊಲೆ ಮಾಡಿದ್ದಾರೆ. ಅದನ್ನ ದಸ್ತಗಿರಿ ಮಾಡಿ ಉಗ್ರವಾದ ಶಿಕ್ಷೆಯನ್ನ ಕೊಡುತ್ತೇವೆ. ಇದೊಂದು ವ್ಯವಸ್ಥಿತ ಸಂಚು. ಇದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಎಸ್​ಪಿ ಋಷಿಕೇಷ್ ಸೋನಾವಣೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆಗೆ ನಾಲ್ಕು ಪ್ರತ್ಯೇಕ ತಂಡ ರಚಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನ ನಡೆಸಲಾಗುತ್ತಿದೆ ಎಂದು ಬೆಳ್ಳಾರೆಯಲ್ಲಿ ಟಿವಿ9ಗೆ ದಕ್ಷಿಣ ಕನ್ನಡ ಎಸ್​ಪಿ ಪ್ರತಿಕ್ರಿಯೆ ನೀಡಿದರು. ಇನ್ನೂ ಪುತ್ತೂರು, ಸುಳ್ಯ, ಕಡಬಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಿ, ಪುತ್ತೂರು ಉಪವಿಭಾಗ ಅಧಿಕಾರಿ ಗಿರೀಶ್​ರಿಂದ ಆದೇಶ.

ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತೆ. ಶಾಂತಿ ಕಾಪಾಡುವಂತೆ ಅಲ್ಲಿನ ಜನರಿಗೆ ಮನವಿ ಮಾಡುತ್ತೇನೆ. ಪ್ರಕರಣ ಸಂಬಂಧ ಪೊಲೀಸರೂ ತನಿಖೆ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಸಿಎಂ ಜೊತೆ ನಾನು ಮಾತಾಡಿದ್ದೇನೆ. ಪ್ರವೀಣ್ ಹತ್ಯೆ ದುರದೃಷ್ಟಕರ ಸಂಗತಿ. ಹಿಜಾಬ್​ನಿಂದ ಹಿಡಿದು ಅಲ್ಲಿ ನಡೆಯುವ ಕೆಲಸಗಳ ಹಿಂದೆ ಕೆಲವು ಶಕ್ತಿಗಳ ಕೈವಾಡ ಇದೆ. ಇಂಥ ಸಂಘಟನೆಗಳಿಗೆ ಭವಿಷ್ಯ ಇಲ್ಲ. ಬಹಳ ಗಂಭೀರವಾಗಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಶ್ರೀ ಪ್ರವೀಣ್ ನೆಟ್ಟಾರು ಅವರ ಮೇಲಿನ ಹತ್ಯೆ ನಿಜಕ್ಕೂ ಖೇದಕರ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಈ ದುಷ್ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಮುಲಾಜಿಲ್ಲದೆ ನಮ್ಮ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಚಿವ ಮುರುಗೇಶ್​ ನಿರಾಣಿ ಸಂತಾಪ ಸೂಚಿಸಿದ್ದಾರೆ.

ಹತ್ಯೆಗೆ ಸಂಬಂಧ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು ಮುಲಾಜಿಲ್ಲದೇ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದರು. ಕೊಲೆಗಡುಕರಿಗೆ ಪಾಠವಾಗುವಂತ ಶಿಕ್ಷೆ ನೀಡಬೇಕು ಎಂದು ಟ್ವೀಟ್​ ಮೂಲಕ ರಾಜ್ಯ ಸರ್ಕಾರಕ್ಕೆ ಜೋಶಿ ಒತ್ತಾಯಿಸಿದರು.

ಹತ್ಯೆ ಪ್ರಕರಣ ಹಿನ್ನೆಲೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಹೇಳಿಕ್ಕೆ ನೀಡಿದ್ದು, ವಾರದ ಹಿಂದೆ ನಡೆದ ಕೊಲೆಯ ಸೇಡಿಗೆ ಹತ್ಯೆ ಎನ್ನಲಾಗ್ತಿದೆ. ಪ್ರವೀಣ್ ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳ್ತಿದ್ದಾರೆ. ಇಂಥ ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡುವ ಕೆಲಸವಾಗಬೇಕು. ಇಲ್ಲದೇ ಹೋದಲ್ಲಿ ಮತ್ತಷ್ಟು ಹಿಂದೂಗಳ ಬಲಿಯಾಗುತ್ತದೆ. ಮುಲ್ಲಾ, ಮೌಲ್ವಿಗಳು SDPI, PFI ಹದ್ದುಬಸ್ತಿನಲ್ಲಿಡಬೇಕು. ಶಾಂತಿ-ಸೌಹಾರ್ದತೆ ಬೇಕಾದ್ರೆ ಸಂಘಟನೆಗಳನ್ನ ಹದ್ದುಬಸ್ತಿನಲ್ಲಿಡಿ. ಇಲ್ಲವಾದರೆ ಹಿಂದೂ ಸಮಾಜ ತಿರುಗಿ ಬೀಳುತ್ತೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ. ಸರ್ಕಾರ ಕೂಡಲೇ SDPI, ಪಿಎಫ್ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಮುಕ್ತಾಯವಾಯಿತು. ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಖ್ಯಾತ ಫೊರೆನ್ಸಿಕ್ ತಜ್ಞ ಡಾ. ಮಹಾಬಲೇಶ್ವರ ಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಸಿದರು. ಪುತ್ತೂರು ಸರಕಾರಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಬ್ಯಾರಿಕೇಡ್​ಗಳನ್ನು ಹಾಕಿ ಆಸ್ಪತ್ರೆ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದರು. ರೋಗಿಗಳು ಮತ್ತು ಸಂಬಂಧಿಗಳ ಹೊರತಾಗಿ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮೃತದೇಹ ಹಸ್ತಾಂತರ ಮಾಡಲು ಕುಟುಂಬಸ್ಥರ ಜೊತೆ ಪೊಲೀಸರ ಮಾತುಕತೆ ನಡೆಸಿದರು.

ಪ್ರವೀಣ್ ಹತ್ಯೆ ಖಂಡಿಸಿ ಪುತ್ತೂರಿನ 2 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರಿ‌ನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿವೆ.

ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಶವಯಾತ್ರೆ: ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೊರಟಿತು.

ಪುಷ್ಪಾಲಂಕೃತ ಆಂಬುಲೆನ್ಸ್‌ನಲ್ಲಿ ಪ್ರವೀಣ್ ನೆಟ್ಟಾರು ಅವರ ಮೃತದೇಹ ಸಾಗುತ್ತಿದ್ದರೆ, ಹಿಂಬದಿಯಿಂದ ಸಂಘಟನೆ ವತಿಯಿಂದ ಕೊಡುಗೆಯಾಗಿ ನೀಡಿದ ಇನ್ನೆರಡು ಆಂಬುಲೆನ್ಸ್‌ಗಳು ಹಿಂಬಾಲಿಸಿದವು. ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು ಶವಯಾತ್ರೆಯ ಜೊತೆಗೆ ಪಾದಯಾತ್ರೆಯಲ್ಲಿ ಸಾಗಿದರು.

ದರ್ಬೆ ವೃತ್ತದ ಬಳಿ ಅಂತಿಮ ದರ್ಶನ:                                                                                                                               ದರ್ಬೆ ವೃತ್ತದ ಬಳಿ ಸಾವಿರಾರು ಮಂದಿ ಮೃತದೇಹದ ಅಂತಿಮ ದರ್ಶನ ಪಡೆದರು. ಬಳಿಕ ಸವಣೂರು-ಪೆರುವಾಜೆ ಮಾರ್ಗವಾಗಿ ಬೆಳ್ಳಾರೆಗೆ ಬೀಳ್ಕೊಡಲಾಯಿತು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು