News Karnataka Kannada
Tuesday, April 30 2024
ಮಂಗಳೂರು

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ “ನವಜೀವನ ಸಮಾವೇಶ”

"Navajivan Sammelan" under the auspices of Akhila Karnataka Janajagruti Vedike
Photo Credit : News Kannada

ಬೆಳ್ತಂಗಡಿ: ಸ್ವಸ್ಥ ಸಮಾಜ ಆರ್ಥಿಕ ಪ್ರಗತಿಗೆ ಪೂರಕ. ಮುಂದಿನ 25 ವರ್ಷಗಳಲ್ಲಿ ಭಾರತವು 3 ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಇದು ಸಾಧ್ಯವಾಗಬೇಕಾದರೆ ಆರೋಗ್ಯವಂತ ಸಮಾಜವೂ ಅಗತ್ಯ ಎಂದು ಕರ್ನಾಟಕದ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ “ನವಜೀವನ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡಿದರು.

“ಎಲ್ಲರಿಗೂ ನಮಸ್ಕಾರ, ತಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು” ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳವು ಇಂದು ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳಿಂದ ವಿಶ್ವವಿಖ್ಯಾತವಾಗಿದೆ. ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ವಿಶೇಷವಾಗಿ ಮಹಿಳಾ ಸಬಲೀಕರಣ ಹಾಗೂ ಉಚಿತ ಆರೋಗ್ಯಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮದ್ಯವ್ಯಸನದ ಚಟಕ್ಕೆ ಬಲಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕುಟುಂಬದೊಳಗೆ ಪ್ರೀತಿ-ವಿಶ್ವಾಸ ಕಡಿಮೆಯಾಗಿ ಮಾನವೀಯ ಸಂಬಂಧಗಳು ಕೆಟ್ಟು ವ್ಯಕ್ತಿತ್ವವೇ ನಾಶವಾಗುತ್ತದೆ. ಆದುದರಿಂದ ವ್ಯಸನ ಮುಕ್ತ ಮನೆ, ಸಮಾಜ ಹಾಗೂ ತನ್ಮೂಲಕ ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಮಾಡುತ್ತಿರುವ ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಶ್ರೇಷ್ಠವಾದ ಪುಣ್ಯದ ಕಾಯಕವಾಗಿದೆ ಎಂದರು.
ತಾನು ಕೇಂದ್ರ ಸಚಿವನಾಗಿದ್ದಾಗ ವ್ಯಸನಮುಕ್ತ ಸಮಾಜ ರೂಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೆ. ಮದ್ಯ ಉತ್ಪಾದನೆ, ಮಾರಾಟ ಹಾಗೂ ವ್ಯಸನ ತಡೆಗಟ್ಟಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮದ್ಯವ್ಯಸನಮುಕ್ತರು ತಮ್ಮ ಪರಿಸರದದವರೂ ಮದ್ಯಪಾನಕ್ಕೆ ಬಲಿಯಾಗದಂತೆ ತಡೆಯಬೇಕು. ಯುವಜನತೆ ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಅರಿವು, ಜಾಗೃತಿ ಮೂಡಿಸಬೇಕು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂದು ಭಾರತ “ವಿಶ್ವ ಗುರು”ವಿನ ಮಾನ್ಯತೆಗೆ ಪಾತ್ರವಾಗಿದೆ. ವ್ಯಸನಮುಕ್ತ ರಾಷ್ಟ್ರವಾಗಿ ಆರೋಗ್ಯಪೂರ್ಣ ಸಮಾಜ ರೂಪಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವ್ಯಸನಮುಕ್ತ ಭಾರತ ನಿರ್ಮಾಣದ ಮೂಲಕ ಎಲ್ಲರ ಭಾಗ್ಯದ ಬಾಗಿಲು ತೆರೆದು ಸರ್ವರೂ ಸುಖ-ಶಾಂತಿ, ನೆಮ್ಮದಿಯ ಜೀವನದೊಂದಿಗೆ ಲೋಕಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದುಶ್ಚಟ ಇರುವವರೆಲ್ಲ ದುಷ್ಟರು. ಮದ್ಯಪಾನದಿಂದ ವ್ಯಕ್ತಿತ್ವದ ಸರ್ವನಾಶವಾಗಿ ಗೌರವಯುತ ಜೀವನ ಸಾಧ್ಯವಾಗುವುದಿಲ್ಲ. ಮದ್ಯವ್ಯಸನ ಮುಕ್ತರು ಪರಿಶುದ್ಧರಾದ ಪವಿತ್ರಾತ್ಮರಾಗಿದ್ದೀರಿ. ಇಂದು ದೇವರ ದರ್ಶನದಿಂದ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹ ನಿಮಗೆ ದೊರಕಿದೆ ಎಂದು ವ್ಯಸನ ಮುಕ್ತರನ್ನು ಅಭಿನಂದಿಸಿದರು.

ಮಹಿಳೆಯರು ಸಂತೋಷ ಮತ್ತು ನೆಮ್ಮದಿಯಿಂದ ಇದ್ದರೆ ಮನೆಯಲ್ಲಿ, ಸಮಾಜದಲ್ಲಿ ಹಾಗೂ ದೇಶದಲ್ಲಿ ಸುಖ-ಶಾಂತಿ ನೆಮ್ಮದಿ ಇರುತ್ತದೆ. ವ್ಯಸನಮುಕ್ತರು ದೃಢ ಸಂಕಲ್ಪದಿಂದ ಪ್ರಜ್ಞಾವಂತ ನಾಗರಿಕರಾಗಿ ಎಲ್ಲಾ ದುರ್ಗುಣಗಳ ನಾಶ ಮಾಡಿ ಸದಾಚಾರ ಸಂಪನ್ನರಾಗಿ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.

ಉಡುಪಿಯ ಡಾ. ವಿರೂಪಾಕ್ಷ ದೇವರಮನೆ ಬರೆದ ನಿನಗೆ ನೀನೇ ಗೆಳಯ ಎಂಬ ಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಹೇಮಾವತಿ ವೀ. ಹೆಗ್ಗಡೆ ಅವರು ಮಾತನಾಡಿ, ಮನುಷ್ಯ ದೃಢಸಂಕಲ್ಪದೊಂದಿಗೆ ಯಾವುದೇ ವಿಕಲ್ಪಗಳಿಗೆ ಬಲಿಯಾಗದೆ ಸಾರ್ಥಕ ಜಿವನ ನಡೆಸಬೇಕು. ಯಾವುದೇ ಔಷಧಿ ಇಲ್ಲದೆ, 8 ದಿನಗಳ ಮದ್ಯವರ್ಜನ ಶಿಬಿರದಲ್ಲಿ ಮನಪರಿವರ್ತನೆ ಮೂಲಕ ವ್ಯಸನ ಮುಕ್ತರಾದವರು ಮರುಜನ್ಮ ಪಡೆದಂತೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವದಿಂದ ಶಾಂತಿಯುತ ಜೀವನ ಮಾಡಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಮದ್ಯಪಾನದಿಂದ ಧನಹಾನಿ, ಮಾನಹಾನಿ ಮತ್ತು ಪ್ರಾಣಹಾನಿ ಮೊದಲಾದ ದುರಂತಗಳು ಸಂಭವಿಸುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.
ವ್ಯಸನಮುಕ್ತರ ಪರವಾಗಿ ತೀರ್ಥಹಳ್ಳಿಯ ಮಂಜುನಾಥ್ ಧನ್ಯತಾಭಾವದಿಂದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಂಗಳೂರಿನ ಖ್ಯಾತ ಸಮಾಜಸೇವಕ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಥೋಮಸ್ ಸ್ಕರಿಯಾ ಅವರಿಗೆ “ಜನಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು. ವ್ಯಸನಮುಕ್ತ ಸಾಧಕರಿಗೆ “ಜಾಗೃತಿಅಣ್ಣ” ಮತ್ತು “ಜಾಗೃತಿಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿ. ಹರ್ಷೇಂದ್ರ ಕುಮಾರ್ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮೋನಪ್ಪ ಗೌಡ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವೀ. ಪಾೈಸ್ ಧನ್ಯವಾದವಿತ್ತರು.

ಪ್ರಸ್ತಾವನೆಗೈದ ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ 31 ಜಿಲ್ಲಾ ವೇದಿಕೆ, 8 ತಾಲೂಕು ವೇದಿಕೆ, 112 ವಲಯ ವೇದಿಕೆಗಳು ಮತ್ತು 273 ಗ್ರಾಮ ಸಮಿತಿಗಳಾಗಿ ರಾಜ್ಯಾಧ್ಯಂತ ಕಾರ್ಯನಿರ್ವಹಿಸುತ್ತಿದೆ. 7000 ಕ್ಕೂ ಮಿಕ್ಕಿದ ಸಕ್ರೀಯ ಕಾರ್ಯಕರ್ತರು, 458 ಪದಾಧಿಕಾರಿಗಳು ಸಂಘಟನೆ ನಡೆಯುತ್ತಿದೆ‌. ಇದುವರೆಗೆ 1475 ಮದ್ಯವರ್ಜನ ಶಿಬಿರಗಳ ಮೂಲಕ 1.25 ಲಕ್ಷ ಮಂದಿ ಶಿಬಿರ ಮತ್ತು ಸ್ವ ಪ್ರೇರಣೆಯಿಂದ ಪಾನಮುಕ್ತರಾಗಿದ್ದಾರೆ. ಪಾನಮುಕ್ತರ 3116 ನವಜೀವನ ಸಮಿತಿ ರಚನೆಯಾಗಿದ್ದು, 217 ರಿಗೆ ಸ್ವ ಉದ್ಯೊಗ ತರಬೇತಿ, 2000 ಸದಸ್ಯರಿಗೆ ಸಂವಾದ, 110 ಮಂದಿಗೆ ಜಾಗೃತಿ ಅಣ್ಣ ಮತ್ತು ಮಿತ್ರ ಪ್ರಶಸ್ತಿ ನೀಡಲಾಗಿದೆ. ಜನಜಾಗೃತಿ ವೇದಿಕೆಯ ಕಾರ್ಯಕ್ರಮದಿಂದ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಿ ಕಳ್ಳಭಟ್ಟಿ, ಅನಧಿಕೃತ ಮದ್ಯಮಾರಾಟ, ಕೋಳಿ ಅಂಕ, ಜೂಜು ಮತ್ತಿತರದಂಧೆ ಗಣನೀಯವಾಗಿ ಕಡಿಮೆಯಾಗಿದೆ. ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 2000 ಮಂದಿಗೆ ಗೌಪ್ಯವಾಗಿ ವ್ಯಸನ ಬಿಡುವ ಮನಪರಿವರ್ತನೆಯ ಚಿಕಿತ್ಸೆ ನೀಡಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು