ಮೂಡುಬಿದಿರೆ: ಕರಾವಳಿ ಭಾಗದಲ್ಲಿ ಭಾವನಾತ್ಮಕವಾಗಿ ಜನರನ್ನು ವಿಭಜಿಸಿ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಬಿಜೆಪಿಯ ಬಾಲ ಕತ್ತರಿಸುವ ಕೆಲಸ ಮತದಾರರು ಮಾಡಬೇಕು. ಮೂಡುಬಿದಿರೆ ಸೇರಿದಂತೆ ಜಿಲ್ಲೆಯಲ್ಲಿ ಈ ಬದಲಾವಣೆಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮದು ಬಂಗಾರಪ್ಪ ಹೇಳಿದರು.
ಮೂಡುಬಿದಿರೆ ಸ್ವರ್ಣಮಂದಿರದಲ್ಲಿ ಸೋಮವಾರ ಸಾಯಂಕಾಲ ಕಾಂಗ್ರೆಸ್ ಕರಾವಳಿ ಪ್ರಜಾ ಧ್ವನಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು.
ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಕೋಮುದಳ್ಳುರಿಯಿಂದ ನಲುಗುತ್ತಿರುವ ದ.ಕ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಿ ಬೆಂಗಳೂರು ಮಾದರಿಯಂತೆ ಮಾಹಿತಿ ತಂತ್ರಜ್ಞಾನದ ನಗರವನ್ನಾಗಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸಂಕಲ್ಪ ತೊಟ್ಟಿದೆ ಎಂದರು.
ಕೇರಳ ಶಾಸಕ ರೋಹಿ ಜಾನ್ಸ್, ಎಂಎಲ್ಸಿ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್ಗಳಾದ ಮಮತ ಗಟ್ಟಿ, ಕವಿತಾ ಸನಿಲ್, ಮಹಿಳಾ ಕಾಂಗ್ರೆಸ್ ನಾಯಕಿ ಅಪ್ಪಿ, ಸುಪ್ರಿಯಾ ಡಿ. ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ರಾಜ್ಶೇಖರ್ ಕೋಟ್ಯಾನ್, ಮಿಥುನ್ ರೈ, ಚಂದ್ರಹಾಸ್ ಸನಿಲ್, ರಾಜೇಶ್ ಕಡಲಕೆರೆ ಮತ್ತಿತರರು ಉಪಸ್ಥಿತರಿದ್ದರು.