News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ನಗರ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

Mangalore
Photo Credit : News Kannada

ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡದ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದರು. ಅವರು ಇಂದು ( ತಾರೀಕು 16-09-2022 ) ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಆಗ್ರಹಿಸಿ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗೀ ಲಾಭಿಗೆ ಮಣಿದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ನಗರ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇನ್ನು ಸ್ಮಾರ್ಟ್ ಸಿಟಿ ಹೆಸರಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಗೆದು ಕಾಂಕ್ರೀಟಿಕರಣ ನಡೆಸಿ ಕಮಿಷನ್ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಬಿಜೆಪಿ ಆಡಳಿತ ಮತ್ತು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಗೆ ನಗರ ಆರೋಗ್ಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೆ?. ಕಳೆದ ಒಂದು ದಶಕಗಳಿಂದ ಖಾಲಿ ಬಿದ್ದಿರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಎಂದಾದರು ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆಯೇ ? ಎಂದು ಟೀಕಿಸಿದರು.‌

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕುಮಾರ್ ಬಜಾಲ್ ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಅದರದೇ ಆದ ಹಿನ್ನಲೆ ಇದೆ. ಹಿಂದೆ ಇದು ಸರಕಾರಿ ಹೆರಿಗೆ ಆಸ್ಪತ್ರೆಯಾಗಿ ಹೆಸರುವಾಸಿಯಾಗಿತ್ತು ಆದರೆ ಇವತ್ತು ಈ ನಗರ ಆರೋಗ್ಯ ಕೇಂದ್ರದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆಗಳು ಸರಿಯಾಗಿ ಸಿಗದಂತಾಗಿದೆ. ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ಸಂಪೂರ್ಣವಾಗಿ ಕಡೆಗಣಿಸಿವೆ. ನಗರ ಪಾಲಿಕೆ ಅಡಿಯಲ್ಲಿರುವ 5 ಆರೋಗ್ಯ ಕೇಂದ್ರವನ್ನು ನಗರದ ವಿವಿಧ ಖಾಸಗೀ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗೀ ಮೆಡಿಕಲ್ ಲಾಭಿಗೆ ಬಲಿಯಾಗಿದೆ. ಇನ್ನು ರಾಷ್ಟೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ನಡೆಸುವ 10 ನಗರ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಸಹಿತ ಹಲವಾರು ಗಂಭೀರ ಸಮಸ್ಯೆಗಳಿವೆ. ಇವುಗಳನ್ನೆಲ್ಲ ಸರಿಪಡಿಸದೆ ಈಗ ಮತ್ತೆ ನಮ್ಮ ಕ್ಲಿನಿಕ್ ಹೆಸರಲ್ಲಿ 7 ನಗರ ಆರೋಗ್ಯ ಕೇಂದ್ರಗಳು ನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ಬರಲಿದ್ದು ಅದನ್ನೂ ನಡೆಸುವಲ್ಲಿ ಸರಕಾರಗಳು ವಿಫಲವಾದಲ್ಲಿ ನಮ್ಮ ಹೋರಾಟವನ್ನು ತೀವೃ ರೀತಿಗೆ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಲೇಡಿಹಿಲ್ ವೃತ್ತ ನಾರಾಯಣ ಗುರು ವೃತ್ತ ಆಗಬೇಕೆಂಬ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸುನಿಲ್ ಕುಮಾರ್ ಸಹಿತ ಎಲ್ಲಾ ಶಾಸಸಕರು ಈ ಪ್ರದೇಶಕ್ಕೆ ಭೇಟಿ ನೀಡುವಾಗ ಅವ್ಯವಸ್ಥೆಯಿಂದ ಕೂಡಿರುವ ಈ ಆರೋಗ್ಯ ಕೇಂದ್ರ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಪ್ರತಿಭಟನೆಯನ್ನು ಬೆಂಬಲಿಸಿ ಸಾಮರಸ್ಯ ‌ಮಂಗಳೂರು ಇದರ ಸಂಚಾಲಕರಾದ ಮಂಜುಳಾ ನಾಯಕ್ ಮಾತನಾಡಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪಾಲಿಕೆ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಅರುಣ್ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದರು. ಇರುವ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದೆಂಬ ಭರವಸೆಯನ್ನಿತ್ತರು. ಪ್ರತಿಭಟನೆಯಲ್ಲಿ ಸಿಪಿಐಎಂ ನಗರ ಸಮಿತಿ ಮುಖಂಡರಾದ ಲೋಕೇಶ್ ಎಂ, ಭಾರತೀ ಬೋಳಾರ, ಸಾಧಿಕ್ ಕಣ್ಣೂರು, ನೌಶದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಡಿವೈಎಫ್ಐ ಮುಖಂಡರಾದ ಜಗದೀಶ್ ಬಜಾಲ್, ಮಾಧುರಿ ಬೋಳಾರ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ಶಾಹಿದ್, ಸಮಝ್ ಮುಂತಾದವರು ಉಪಸ್ಥಿತರಿದ್ದರು. ಸಿಪಿಐಎಂ ನಗರ ಸಮಿತಿ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು