ಕಡಬ: ಹಲ್ಲಿನ ಚಿಕಿತ್ಸೆಗೆಂದು ಸುಬ್ರಹ್ಮಣ್ಯದ ಆಸ್ಪತ್ರೆಯೊಂದಕ್ಕೆ ತೆರಳಿದ್ದ ವಿವಾಹಿತ ಯುವತಿ ಕಾಣೆಯಾಗಿದ್ದಾಳೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ವಿವಾಹಿತ ಯುವತಿ.
ಈಕೆ ಗದಗ ಮೂಲದ ಮುಂಡರಗಿಯ ಶಿವರಾಜ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಕಳೆದ ಕೆಲ ಸಮಯದಿಂದ ತವರು ಮನೆಯಲ್ಲಿಯೇ ವಾಸವಿದ್ದ ಈಕೆ, ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯದಲ್ಲಿರುವ ಆಸ್ಪತ್ರೆಯೊಂದಕ್ಕೆ ಹಲ್ಲಿನ ಚಿಕಿತ್ಸೆಗಾಗಿ ತೆರಳಿ ಬಳಿಕ ಮನೆಗೆ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿಕೊಂಡು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.