News Karnataka Kannada
Wednesday, May 08 2024
ಮಂಗಳೂರು

ಮಂಗಳೂರು: ಜೀವಸವೆಸಿದ ಪಕ್ಷ, ಸ್ವಕ್ಷೇತ್ರದಲ್ಲಿಯೇ ನ್ಯಾಯ ಸಿಗಬೇಕು- ಸತ್ಯಜಿತ್‌

Mangaluru: The party that has given life should get justice in his own constituency: Satyajit
Photo Credit : Twitter

ಮಂಗಳೂರು: ಹಿಂದು ಸಂಘಟನೆ, ಬಿಜೆಪಿಯ ಮುಂಚೂಣಿ ನಾಯಕರಾಗಿದ್ದ ಸತ್ಯಜಿತ್‌ ಸುರತ್ಕಲ್‌ ಪ್ರಸ್ತುತ ಕವಲುಹಾದಿಯಲ್ಲಿದ್ದಾರೆ. ಬಿಜೆಪಿ, ಹಿಂದು ಸಂಘಟನೆಯ ದೌರ್ಬಲ್ಯ ಆಂತರಿಕ ಬೇಗುದಿಯನ್ನು ಕಳೆದ ಕೆಲ ಸಮಯದಿಂದ ಹೊರಹಾಕುತ್ತಿರುವ ಸತ್ಯಜಿತ್‌ ಸಂಘಟನೆಯಲ್ಲಿರುವ ಹುಳುಕುಗಳು ಸರಿಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ತಾನು ಜೀವ ಸವೆಸಿದ ಪಕ್ಷ, ಸಂಘಟನೆಯಲ್ಲಿಯೇ ನನಗೆ ನ್ಯಾಯ ದೊರಕಬೇಕು ಎಂಬುದು ಅವರ ಅಪೇಕ್ಷೆ. ಬಿಲ್ಲವ ಸಮಾಜಕ್ಕೆ ಕರಾವಳಿಯ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರಕಿಲ್ಲ ಎಂಬುದು ಆಕ್ಷೇಪ. ಕಳೆದ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಈ ಕುರಿತು ತಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಮಾಜ ನಿರ್ಧರಿಸಬೇಕು ಎಂದು ತಿಳಿಸಿದ್ದರು. ಚುನಾವಣೆಯ ಈ ಸರಿಹೊತ್ತಿನಲ್ಲಿ ಅವರ ರಾಜಕೀಯ ಆಕಾಂಕ್ಷೆ ಮುಂದಿನ ನಡೆಯ ಕುರಿತು ನ್ಯೂಸ್‌ ಕನ್ನಡ ಪ್ರತಿನಿಧಿ ನಡೆಸಿದ ಮಾತುಕತೆ ವಿವರ ಇಲ್ಲಿದೆ.

ಕಾಂಗ್ರೆಸ್‌, ಬಿಜೆಪಿ ಯಾವುದೇ ಪಕ್ಷದಿಂದಲೂ ಟಿಕೇಟ್‌ ದೊರೆತಲ್ಲಿ ಸ್ಪರ್ಧೆ ಮಾಡಲು ತಯಾರಿದ್ದೀರಾ?

ಕಾಂಗ್ರೆಸ್‌, ಜೆಡಿಎಸ್‌, ಆಮ್‌ಆದ್ಮಿ ಪಕ್ಷದಿಂದಲೂ ನನಗೆ ಆಫರ್‌ ಇದೆ. ಆದರೆ ಇದುವರೆಗೂ ಬೇರೆ ಪಕ್ಷಕ್ಕೆ ಹೋಗುವ ಚುನಾವಣೆಯಲ್ಲಿ ನಿಲ್ಲುವ ಚಿಂತನೆಯನ್ನೇ ಮಾಡಿಲ್ಲ. ನಾನು ಬಿಜೆಪಿಗಾಗಿ ಜೀವಸವೆಸಿದ್ದೇನೆ. ಹಾಗಾಗಿ ನನಗೆ ಇಲ್ಲಿಯೇ ನನಗೆ ನ್ಯಾಯ ಸಿಗಬೇಕಿದೆ. ಅದೇ ರೀತಿ ಬಿಲ್ಲವ ಸಮಾಜದ ನಾರಾಯಣ ಗುರುವಿಚಾರ ವೇದಿಕೆಯಲ್ಲಿ ಕೆಲಸ ಮಾಡುತ್ತಿರುವುದು ರಾಜಕೀಯ ಉದ್ದೇಶದಿಂದ ಅಲ್ಲ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಿಮ್ಮನ್ನು ಹೊರತು ಪಡಿಸಿ ಬೇರೆ ಬಿಲ್ಲವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದಲ್ಲಿ ಬೆಂಬಲಿಸುವಿರಾ ?

ಈ ಬಗ್ಗೆ ಚಿಂತಿಸಬೇಕಿದೆ. ಪ್ರಸ್ತುತ ಈ ಬಗ್ಗೆ ಮಾತನಾಡುವುದಿಲ್ಲ.

ನೀವು ಯಾವ ಕ್ಷೇತ್ರದಿಂದ ಟಿಕೇಟ್‌ ಆಕಾಂಕ್ಷಿ?, ಉಳ್ಳಾದಂತಹ ಹಿಂದುಗಳ ಮತ ಕಡಿಮೆ ಇರುವ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ಧವಿದ್ದೀರಾ?

ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವ ಅನಿವಾರ್ಯತೆ ನನಗೇನಿದೆ. ಸ್ಪರ್ಧಿಸುವುದಾದಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಇದು ನೂರಕ್ಕೆ ನೂರು ಸತ್ಯ. ಕಳೆದ ಬಾರಿ ಈ ಬಗ್ಗೆ ಚರ್ಚೆ ನಡೆದಾಗ ನನ್ನಲ್ಲಿ ಟಿಕೇಟ್‌ ಕುರಿತು ಚರ್ಚಿಸಬೇಕು, ಬಳಿಕ ಟಿಕೇಟ್‌ ಬಗ್ಗೆ ನಿರ್ಧಾರ ಮಾಡುವುದಾಗಿ ಸಂಘದ ಹಿರಿಯರಲ್ಲಿ, ಪಕ್ಷದ ಮುಖಂಡರಲ್ಲಿ ತಿಳಿಸಿದ್ದೇ. ಆ ವೇಳೆ ನನ್ನ ವಿರೋಧಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದು, ನಾನು ಟಿಕೇಟ್‌ ನಿರಾಕರಿಸಿದ್ದೇನೆ ಎಂದು ಅಪಪ್ರಚಾರ ಮಾಡಿದ್ದರು. ವಾಸ್ತವದಲ್ಲಿ ನನ್ನಲ್ಲಿ ಟಿಕೇಟ್‌ ಹಂಚಿಕೆ ಕುರಿತು ಮಾತನಾಡಿರಲಿಲ್ಲ. ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಯಲ್ಲಿದ್ದಿದ್ದನ್ನುಗಮನಿಸಿ ನಾನು ಬಿಜೆಪಿ ಪ್ರಮುಖರಲ್ಲಿ ಕೇಳಿದ್ದರೂ ಯಾವುದೇ ಉತ್ತರ ದೊರಕಿರಲಿಲ್ಲ.

ಅವಕಾಶ ಸಿಕ್ಕಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೀರಾ?, ಖಂಡಿತವಾಗಿ ಅವಕಾಶ ದೊರೆತಲ್ಲಿ ಸ್ಪರ್ಧೆಗೆ ನಾನು ರೆಡಿ. ನಿಮ್ಮ ಹೋರಾಟ ಬಿಜೆಪಿ ವಿರುದ್ಧವೋ, ಬಿಲ್ಲವರ ಪರವೋ?,

ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ. ನನ್ನ ಸಮಾಜಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ಇರುವಂತಹುದು. ನನ್ನ ಸಮಾಜವನ್ನು ಶೈಕ್ಷಣಿಕ , ಆರ್ಥಿಕವಾಗಿ ಮುಂದಕ್ಕೆ ಕೊಂಡೊಯ್ಯುವುದು.

ಸತ್ಯಜಿತ್‌ ಸುರತ್ಕಲ್‌ ಹಿಂದು ಸಂಘಟನೆಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಇದುವರೆಗೂ ಸೂಕ್ತ ರಾಜಕೀಯ ನೆಲೆ ಕಂಡುಕೊಳ್ಳಲು ಏಕೆ ಸಾಧ್ಯವಾಗಿಲ್ಲ?

ಇಂದು ರಾಜಕೀಯ ಸ್ಥಾನಮಾನ ಪಡೆಯಲು ಬಕೆಟ್‌ ಹಿಡಿಯುವುದೇ ಮಾನದಂಡ ಎಂಬಂತಾಗಿದೆ. ಸ್ವಂತಿಕೆ, ಸಾಮರ್ಥ್ಯ ಇದ್ದವರನ್ನು ರಾಜಕೀಯದಲ್ಲಿ ಬೆಳೆಯಲು ಬಿಡದ ಸ್ಥಿತಿಯಿದೆ. ಚೇಲಾಗಿರಿ, ಚಮಚಾಗಿರಿ ಮಾಡುವ ಬಾಲಂಗೋಚಿಗಳು ಮಾತ್ರ ಸ್ಥಾನ ಪಡೆಯುತ್ತಿದ್ದಾರೆ. ನಾನು ರಾಜಕೀಯದಲ್ಲಿ ಸ್ಥಾನ ಮಾನ ಪಡೆದಲ್ಲಿ ಪ್ರಸ್ತುತ ಚೇಲಾಗಿರಿ ಮಾಡುತ್ತಿರುವವರಿಗೆ ಅವಕಾಶ ಕೈತಪ್ಪುವ ಭಯದಿಂದ ನನ್ನ ಮೇಲೆ ಚಿತಾವಣೆ ಮಾಡಿ ಅವಕಾಶ ಕೈತಪ್ಪಿಸುವ ಕುತಂತ್ರ ಮಾಡುತ್ತಿದ್ದಾರೆ. ಅವರಿಗೆ ನನ್ನ ನೇರ ನುಡಿ ಸಹಿಸಲು ಸಾಧ್ಯವಾಗುವುದಿಲ್ಲ.

ಹಿಂದು ಹೋರಾಟಗಾರರು ರಾಜಕೀಯ ಸ್ಥಾನಮಾನ ಅಪೇಕ್ಷೆ ಮಾಡುವುದು ಎಷ್ಟರಮಟ್ಟಿಗೆ ಸರಿ?

ಹೀಗೆ ಪ್ರಶ್ನೆ ಮಾಡುವವರು ಹಿಂದು ಹೋರಾಟಗಾರರು, ಕಾರ್ಯಕರ್ತರನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ಜಾಗರಣಾವೇದಿಕೆ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರು ಮುಖಂಡರನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಉದ್ದೇಶದಿಂದ ಸಂಘಟನೆ ಜವಾಬ್ದಾರಿ ಬಿಟ್ಟು, 2 ವರ್ಷ ಒಬಿಸಿ ಮೋರ್ಚಾ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ.

ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಇಬ್ಬರು ಶಾಸಕರು, ಸಚಿವರು ಇದ್ದರೂ ಬಿಲ್ಲವರಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ನೆಪ ಸರಿಯೇ?

ಬಂಟ ಸಮುದಾಯ ಮತ್ತು ಒಕ್ಕಲಿಗರೂ ಒಂದೇ ಎಂದು ಹೇಳುತ್ತಾರೆ. ಆ ನೆಲೆಯಲ್ಲಿ ಪರಿಗಣಿಸಿದಲ್ಲಿ ನಾಲ್ಕು ಮಂದಿ ಆ ಸಮುದಾಯದ ಶಾಸಕರಿದ್ದಾರೆ.

ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಂಟ ಸಮುದಾಯದ ಶಾಸಕರಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಜನಸಂಖ್ಯೆ ಬಂಟರಿಗಿಂತ ಹೆಚ್ಚಿದೆ. ಆದರೆ ದಕ್ಷಿಣ ಕನ್ನಡದಲ್ಲಿಓರ್ವ ಶಾಸಕ ಮಾತ್ರ ಬಿಲ್ಲವ ಸಮುದಾಯದವರು. ಉಡುಪಿಯಲ್ಲಿ ಬಿಲ್ಲವರು ಬಹುಸಂಖ್ಯೆಯಲ್ಲಿದ್ದರೂ ಬಂಟ ಸಮುದಾಯದ ಇಬ್ಬರು ಶಾಸಕರಿದ್ದಾರೆ. ಅಲ್ಲಿಯೂ ಕೂಡ ಬಿಲ್ಲವ ಸಮುದಾಯಕ್ಕೆ ಕೇವಲ ಓರ್ವ ಶಾಸಕ ಸ್ಥಾನ ದೊರೆತಿದೆ. ಮತ್ತೊಬ್ಬರು ಪರಿಷತ್‌ ಸದಸ್ಯರು. ಹಾಗಿದ್ದಲ್ಲಿ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ದೊರೆತಿದೆ ಎಂದು ಹೇಗೆ ಹೇಳುತ್ತೀರಿ?ಇಡೀ ರಾಜ್ಯದಲ್ಲಿ ಜನಸಂಖ್ಯೆ ದೃಷ್ಟಿಯಲ್ಲಿ ಅತಿಹೆಚ್ಚುಸಂಖ್ಯೆಯಲ್ಲಿರುವ ಹಿಂದುಳಿದ ವರ್ಗದವರಿಗೆ ಏಳು ಸೀಟ್‌ ದೊರೆತಿದೆ. ಲಿಂಗಾಯಿತರಿಗೆ 11 ಕ್ಯಾಬಿನೇಟ್‌ ಸ್ಥಾನ ಸಿಕ್ಕಿದೆ. ಒಕ್ಕಲಿಗರಿಗೆ 7 ಸಚಿವ ಸ್ಥಾನವಿದೆ. ನಾನು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಆದರೆ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿಯಾಗಲು ರಾಜಕೀಯ ಶಕ್ತಿ ಅಗತ್ಯ ಎಂಬುದು ನನ್ನ ಚಿಂತನೆ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ನೀತಿಗೆ ತಕ್ಕಂತೆ ಆಡಳಿತ, ಪ್ರಾತಿನಿಧ್ಯ ದೊರೆತಿಲ್ಲ

ನಾರಾಯಣ ಗುರು ನಿಗಮ ಮಂಡಳಿ ಘೋಷಣೆ ಸಂತಸ ತಂದಿದೆಯೇ ?
ನಿಗಮ ಮಂಡಳಿ ಘೋಷಣೆ ಮಾಡಿದ್ದರೂ ಅನುದಾನ ಕುರಿತು ಯಾವುದೇ ಹೇಳಿಕೆ ಸರ್ಕಾರದಿಂದ ಬಂದಿಲ್ಲ. ನಿಗಮ ಘೋಷಣೆ ಆದಾಕ್ಷಣ ಅನುದಾನ ಘೋಷಣೆ ಮಾಡಬೇಕಿತ್ತು.

ಬಿಜೆಪಿ ಬಿಲ್ಲವರನ್ನು ದುಡಿಮೆಯ ವಸ್ತುವನ್ನಾಗಿಸಿದೆ ಎಂದು ಹೇಳಿಕೆ ನೀಡಿದ್ದೀರಿ ಇದರ ಮರ್ಮವೇನು?

ಜನಸಾಮಾನ್ಯ ಕಿಯೋನಿಕ್ಸ್‌ ಅಧ್ಯಕ್ಷ , ಮೂಡ ತಾತ್ಕಾಲಿಕ ಹುದ್ದೆ ತಾತ್ಕಾಲಿಕ. ಎಂಎಲ್‌ಎ, ಎಂಪಿಗಳಿಗಿರುವ ಸಾಮರ್ಥ್ಯವೇ ಬೇರೆ. ಬಿಲ್ಲವ ಸಮಾಜ ಬಹುಸಂಖ್ಯೆಯಲ್ಲಿದ್ದರೂ ಎಂಎಲ್‌ಎ, ಎಂಪಿ ಸ್ಥಾನಗಳು ದೊರಕಿಲ್ಲ ಎಂದಾದಲ್ಲಿ ನಿಜವಾದ ಸ್ಥಾನಮಾನ ಎಲ್ಲಿ ಸಿಕ್ಕಿದಂತಾಯಿತು. ಒಂದು ಕಾಲದಲ್ಲಿ ಬಿಲ್ಲವ ಸಮುದಾಯದ 15 ಶಾಸಕರಿದ್ದರು. 7 ಸಂಸದರಿದ್ದರು. ಇಂದು ಅಂತಹ ಸ್ಥಿತಿಯಿಲ್ಲ. ಕೇವಲ 7 ಶಾಸಕರಿದ್ದಾರೆ. ಸಮಾಜದಲ್ಲಿ ಯೋಗ್ಯತೆ ಇದ್ದವರು ಇದ್ದಾರೆ. ಪಕ್ಷಕ್ಕೊಸ್ಕರ ಹಗಲಿರುಳು ದುಡಿದವರಿದ್ದಾರೆ. ಬಿಲ್ಲವ ಸಮಾಜ ಮುಖ್ಯವಾಗಿ ಬಿಜೆಪಿಯೊಂದಿಗಿದೆ. ಯುವಶಕ್ತಿ ಬಿಜೆಪಿ, ಸಂಘಪರಿವಾರದೊಂದಿಗಿದೆ. ಆದರೆ ಯಾವತ್ತೂ ಕೂಡ ಜಾತಿ ಆಧಾರದಲ್ಲಿ ನಮ್ಮ ಸಮಾಜ ಗುರುತಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸ್ಥಾನಮಾನ ನೀಡಬೇಕಿತ್ತು. ಕಾಂಗ್ರೆಸ್‌ನಲ್ಲಿ 4 ಸೀಟ್‌ ಅಲ್ಪಸಂಖ್ಯಾತರಿಗೆ ನೀಡಿದ್ದಾರೆ. ಕಾಂಗ್ರೆಸ್‌ ಬಿಲ್ಲವರಿಗೆ ಕೇವಲ 1 ಸೀಟ್‌ ನೀಡಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿಲ್ಲವ ಯುವಶಕ್ತಿ ಸಮುದಾಯ ಇರುವುದು ಬಿಜೆಪಿ, ಸಂಘ ಪರಿವಾರದೊಂದಿಗೆ ಎಂಬುದನ್ನು ಅರಿಯಬೇಕು. ಅವರಿಗೆ ಬಿಜೆಪಿಯಲ್ಲಿಯೇ ನ್ಯಾಯ ಸಿಗಬೇಕು ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ. ಪ್ರಸ್ತುತ ಸರ್ಕಾರದಲ್ಲಿಯೂ ಕೂಡ ಹೆಚ್ಚಿನ ಸ್ಥಾನಮಾನಗಳು ಮುಂದುವರಿದ ವರ್ಗದಲ್ಲಿದೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಬಿಲ್ಲವರಿಗೆ ಪ್ರಾತಿನಿಧಿತ್ವ ಕಡಿಮೆ
ಧಾರ್ಮಿಕ ಕ್ಷೇತ್ರಗಳಲ್ಲಿ ಅಧ್ಯಕ್ಷ ಸಹಿತ ಯಾವುದೇ ಪ್ರಮುಖ ಸ್ಥಾನಮಾನಗಳು ದೊರೆಯುತ್ತಿಲ್ಲ. ಆದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವುದು ಬಿಲ್ಲವ ಯುವಕರು ಎಂಬುದು ಅಷ್ಟೇ ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು