News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಗುತ್ತಿಗೆ ಆಧಾರಿತ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನಾ ಸಭೆ

Protest meeting against contract-based Agneepath project
Photo Credit :

ಮಂಗಳೂರು: ದೇಶದ ಸ್ವಾವಲಂಬನೆ ಮತ್ತು ಭದ್ರತೆಗೆ ಅಪಾಯ ತಂದೊಡ್ಡುವ ಹಾಗೂ ವಿದ್ಯಾರ್ಥಿ ಯುವಜನರ ಭವಿಷ್ಯಕ್ಕೆ ಮಾರಕ ಹೊಡೆತ ನೀಡುವ ಸೇನೆಯಲ್ಲಿ 4 ವರ್ಷಗಳ ಗುತ್ತಿಗೆ ಆಧಾರಿತ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸಿ ಪಿ ಐ ಎಂ ಕೇಂದ್ರ ಸಮಿತಿ ಕರೆಯ ಮೇರೆಗೆ 11-07-2022 ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಸಭೆಯು ನಡೆಯಿತು.

ಸಿ ಪಿ ಐ ಎಂ ದ.ಕ.ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ದೇಶ ವಿರೋಧಿ,ಯುವಜನ ವಿರೋಧಿ ಅಗ್ನಿಪಥ್ ಯೋಜನೆಯ ವಿರುದ್ಧ ಆಕ್ರೋಶಭರಿತ ಘೋಷಣೆಗಳನ್ನು ಕೂಗಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದಸಿ ಪಿ ಐ ಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿಯವರು, ದೇಶದ ಭದ್ರತೆಗೆ ಸದಾ ಜಾಗ್ರತ ಸೈನಿಕ ವ್ಯವಸ್ಥೆ ಅನಿವಾರ್ಯವಾಗಿದ್ದು,ಅಂತಹ ಸೈನಿಕರಿಗೆ ಜೀವನಪರ್ಯಂತ ಸಂಪೂರ್ಣ ಸೇವಾ ಭದ್ರತೆ ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಆದರೆ ನರೇಂದ್ರ ಮೋದಿ ನೇತ್ರತ್ವದ ಬಲಪಂಥೀಯ ಸರಕಾರವು ಕಾರ್ಪೊರೇಟ್ ಲಾಭಕೋರ ಸರಕಾರವಾಗಿದೆ. ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿದೆ.ಇಂತಹ ಜನವಿರೋಧಿ ಸರಕಾರವು ದೇಶ ಕಾಯುವ ಸೈನಿಕರಿಗೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಇಲ್ಲವಾಗಿಸಿ ಮುಂದಿನ 4 ವರ್ಷಗಳ ಗುತ್ತಿಗೆ ಆಧಾರಿತ ಸೈನಿಕರಿಗೆ ನೇಮಕಾತಿ ನೀಡುವ ಅಗ್ನಿಪಥ್ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು,ಇದು ಅಗ್ನಿ ಕುಂಡದಲ್ಲಿ ದೇಶದ ಯುವಜನರನ್ನು ಬೇಯಿಸುವ ಯೋಜನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ ಪಿ ಐ ಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ, ತಿಂಗಳಿಗೆ 24 ಸಾವಿರ ರೂಪಾಯಿ ಪಡೆಯುವ ಕೇವಲ ನಾಲ್ಕು ವರ್ಷಗಳ ಅವಧಿಯ ಅಗ್ನಿಪಥ್ ಯೋಜನೆಗೆ ಸೇರಲು ಆಸಕ್ತರು ಪಿಯುಸಿಯಲ್ಲೇ ಶಿಕ್ಷಣ ತೊರೆಯಬೇಕಾಗುತ್ತದೆ. ತಮ್ಮ ಸರಕಾರದಲ್ಲಿ ಯುವಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಲಾಗದ ಬಿಜೆಪಿ ಶಾಸಕರು, ಮುಖಂಡರುಗಳು ತಮ್ಮ ಕಚೇರಿಗಳಲ್ಲಿ ಅಗ್ನಿಪಥ್ ಯೋಜನೆಯ ನೋಂದಣಿ ಅಭಿಯಾನ ನಡೆಸಿ ಉದ್ಯೋಗ, ದೇಶಭಕ್ತಿಯ ಹೆಸರಿನಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರನ್ನು ದಾರಿತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಅಗ್ನಿಪಥ್ ಗೆ ಯುವಜನರನ್ನು ಸೇರಿಸಲು ಅಭಿಯಾನ ನಡೆಸುತ್ತಿರುವ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಸಹಿತ ಬಿಜೆಪಿ ಶಾಸಕರುಗಳು ಆರ್ ಎಸ್ಎಸ್ ಅಗ್ರ ನಾಯಕರುಗಳು ಮೊದಲು ತಮ್ಮ ಕುಟುಂಬದ ಹದಿಹರೆಯದ ಯುವಕರನ್ನು ಶಿಕ್ಷಣ ನಿಲ್ಲಿಸಿ ಅಗ್ನಿವೀರರಾಗಿ ಕಳುಹಿಸಿಕೊಡಲಿ ಆ ಮೂಲಕ ಅಗ್ನಿಪಥ್ ಯೋಜನೆಯ ಲಾಭವನ್ನು, ದೇಶಪ್ರೇಮವನ್ನು ಏಕಕಾಲದಲ್ಲಿ ಸಾಬೀತು ಪಡಿಸಲಿ. ಯಾವ ಶ್ರೀಮಂತರ ಮನೆಯ ಮಕ್ಕಳು ಒಬ್ಬರೂ ಈ ಯೋಜನೆಗೆ ಸೇರುವುದಿಲ್ಲ. ಬಿಜೆಪಿ ನಾಯಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ಲಕ್ಷಾಂತರ ಸಂಬಳ ಬರುವ ಉದ್ಯೋಗಗಳಿಗೆ ಸೇರಿಕೊಳ್ಳುತ್ತಾರೆ.

ಕಾರ್ಪೊರೇಟ್ ಲಾಬಿಗಳ ಪರವಾಗಿ ಶಿಕ್ಷಣವನ್ನು ಮಾರಾಟದ ಸರಕಾಗಿಸಿರುವ, ಉದ್ಯೋಗ ನಾಶದ ನೀತಿಗಳನ್ನು ಜಾರಿಗೆ ತರುತ್ತಿರುವ ಮೋದಿ ಸರಕಾರ ಅಗ್ನಿಪಥ್ ಯೋಜನೆಯ ಮೂಲಕ ಶಿಕ್ಷಣ ವಂಚಿತ ನಿರುದ್ಯೋಗಿ ಯುವಕರನ್ನು ವಂಚಿಸಲು ಸಂಚು ರೂಪಿಸಿದೆ. ಬಡವರ, ಶ್ರಮಿಕರ ಮನೆಯ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಇದರ ಬಿಸಿ ತಟ್ಟಲಿದೆ ಎಂದು ಹೇಳಿದರು.

ಸಿ ಪಿ ಐ ಎಂ ರಾಜ್ಯ ಸಮಿತಿ ಸದಸ್ಯರಾದ ವಸಂತ ಅಚಾರಿಯವರು ಮಾತನಾಡಿ, ಅಗ್ನಿಪಥ್ ಯೋಜನೆಯಲ್ಲಿ ಆಕರ್ಷಕ ಪ್ಯಾಕೇಜ್ ಎಂಬುದೇ ಮಹಾಮೋಸವಾಗಿದೆ.ತಿಂಗಳಿಗೆ ನೀಡುವ ಸಂಭಾವನೆಯಲ್ಲಿಯೇ 9000 ರೂ.ಕಡಿತ ಮಾಡಿ ಅದನ್ನೇ 4 ವರ್ಷಗಳ ಬಳಿಕ ಅದಕ್ಕೆ ಅಲ್ಪಸ್ವಲ್ಪ ಸೇರಿಸಿ ನೀಡಲಾಗುತ್ತದೆ.ದೇಶಕ್ಕಾಗಿ ಮಳೆ ಚಳಿ ಬಿಸಿಲೆನ್ನದೆ ಜೀವ ಸವೆಸುವ ಸೈನಿಕರಿಗೆ ಮೋದಿ ಸರಕಾರ ಮಾಡುವ ಭಾರೀ ಅನ್ಯಾಯವಾಗಿದೆ.ಇದರ ವಿರುದ್ಧ ದೇಶದೆಲ್ಲೆಡೆ ಭುಗಿಲೆದ್ದ ಭಾರೀ ಆಕ್ರೋಶವನ್ನು, ಯುವಜನತೆಯ ಪರಿಸ್ಥಿತಿಯನ್ನು ಅರ್ಥೈಸದ ಮೋದಿ ಸರಕಾರವು ಪ್ರತಿಭಟನೆಗಳನ್ನು ಹತ್ತಿಕ್ಕುವ ಮೂಲಕ ಸರ್ವಾಧಿಕಾರಿ ಫ್ಯಾಸಿಸ್ಟ್ ಪ್ರವ್ರತ್ತಿಯನ್ನು ತೋರಿಸಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿ ಪಿ ಐ ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು, ದೇಶವನ್ನು ಆವರಿಸಿರುವ ನಿರುದ್ಯೋಗ ಭೀಕರತೆಯಿಂದ ತತ್ತರಿಸಿರುವ ಯುವಜನತೆಗೆ ಉದ್ಯೋಗ ಸ್ರಷ್ಠಿಸುವ ಬದಲು ಮತ್ತೆ ನಿರುದ್ಯೋಗದ ಕೂಪದತ್ತ ತಳ್ಳತ್ತಿರುವ ನರೇಂದ್ರ ಮೋದಿ ಸರಕಾರವು ತನ್ನ ಅಡಿಯಲ್ಲಿರುವ 77 ಇಲಾಖೆಗಳಲ್ಲಿ ಕೇವಲ 34 ಇಲಾಖೆಗಳಲ್ಲಿ ಮಾತ್ರವೇ ನಿವ್ರತ್ತ ಸೈನಿಕರನ್ನು ಸೇರಿಸುತ್ತಿದೆ.4 ವರ್ಷಗಳ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾವಲುಗಾರ ಕೆಲಸ ನೀಡುವುದಾಗಿ ಬಿಜೆಪಿ ನಾಯಕೊಬ್ಬರು ಅವಮಾನಕಾರಿ ಹೇಳಿಕೆ ನೀಡಿದ್ದು,4 ವರ್ಷಗಳ ಬಳಿಕ ನಿವ್ರತ್ತ ಸೈನಿಕರು ಬಿಜೆಪಿ ಕಚೇರಿ ಕಾಯುವ ಬದಲು ಬಿಜೆಪಿ ಕಚೇರಿಯನ್ನೇ ಶಾಶ್ವತವಾಗಿ ಮುಚ್ಚಲಿದ್ದಾರೆ ಎಂದು ಹೇಳಿದರು.

ಸಿ ಪಿ ಐ ಎಂ  ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ರವರು ಅಗ್ನಿಪಥ್ ಯೋಜನೆಯ ಹಿಂದಿರುವ ಸಂಘಪರಿವಾರದ ಹುನ್ನಾರವನ್ನು ವಿವರಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಿ ಪಿ ಐ ಎಂ  ಜಿಲ್ಲಾ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ,ಪದ್ಮಾವತಿ ಶೆಟ್ಟಿ,ಕ್ರಷ್ಣಪ್ಪ ಸಾಲ್ಯಾನ್, ಯೋಗೀಶ್ ಜಪ್ಪಿನಮೊಗರು, ವಸಂತಿ ಕುಪ್ಪೆಪದವು,ಜಯಂತ ನಾಯಕ್,ಸಂತೋಷ್ ಬಜಾಲ್, ಜಯಂತಿ ಶೆಟ್ಟಿ, ಬಶೀರ್ ಪಂಜಿಮೊಗರು, ಬಿ.ಕೆ.ಇಮ್ತಿಯಾಜ್, ಮನೋಜ್ ವಾಮಂಜೂರು,ದಯಾನಂದ ಶೆಟ್ಟಿ, ಶೇಖರ್ ಕುಂದರ್, ನವೀನ್ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು