News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಕೊರಗ ಸಮುದಾಯದವರಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿಲ್ಲ

Senior doctor assaulted by patient at Delhi's Sir Ganga Ram Hosp
Photo Credit : Pixabay

ಮಂಗಳೂರು: ಅತ್ಯಂತ ಹಿಂದುಳಿದ ಕೊರಗ ಸಮುದಾಯದವರು ‘ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದು’, ಅದೇ ಕಾರಣಕ್ಕೆ ಇನ್ನು ಮುಂದೆ ಅವರಿಗೆ ಯಾವುದೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂಬ ಆದೇಶವನ್ನು ಆಗಸ್ಟ್ 17, 2022ರಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿಯವರು ಆದೇಶವನ್ನು ಹೊರಡಿಸಿದ್ದಾರೆ.

ಈ ಆದೇಶದಲ್ಲಿ ಹೇಳಿರುವ ವೈದ್ಯಕೀಯ ವೆಚ್ಚದ ನಿರಾಕರಣೆಯೂ, ಅದಕ್ಕಾಗಿ ಬಳಸಿರುವ ಭಾಷೆಯೂ, ನೀಡಿರುವ ಕಾರಣಗಳೂ ತೀರಾ ಆಕ್ಷೇಪಾರ್ಹವೂ, ಅವೈಜ್ಞಾನಿಕವೂ, ಸತ್ಯಕ್ಕೆ ದೂರವಾದವೂ ಆಗಿದ್ದು, ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಸರಕಾರವು ಈ ಕೂಡಲೇ ಈ ಆದೇಶವನ್ನು ಹಿಂಪಡೆದು ಕೊರಗ ಸಮುದಾಯದವರಿಗೆ ದೊರೆಯುತ್ತಿದ್ದ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಸಕಲ ಸೌಲಭ್ಯಗಳನ್ನೂ ಹಿಂದಿನಂತೆಯೇ ಮುಂದುವರಿಸಬೇಕೆಂದು ಆಗ್ರಹಿಸುತ್ತೇವೆ.

ಕೊರಗ ಸಮುದಾಯದವರು ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಮತ್ತು ಆ ಸಮುದಾಯದ ಮಕ್ಕಳು, ಮಹಿಳೆಯರು ಮತ್ತೆಲ್ಲರಿಗೂ ಉಂಟಾಗುವ ಯಾವುದೇ ಕಾಯಿಲೆಗಳಿಗೂ ಇವುಗಳಷ್ಟೇ ಕಾರಣ ಎನ್ನುವುದಕ್ಕೆ ಯಾವುದಾದರೂ ಆಧಾರಗಳಿದ್ದರೆ ಸರಕಾರವು ಅವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.

ಆನಲೈನ್ ಜರ್ನಲ್ ಆಫ್ ಅಲೈಡ್ ಸಯನ್ಸ್ ನಲ್ಲಿ 2009 ರಲ್ಲಿ ಪ್ರಕಟವಾದ ಉಡುಪಿಯ ಕೊರಗ ಸಮುದಾಯದ ಅಧ್ಯಯನದಲ್ಲಿ ಕೊರಗರಲ್ಲಿ ಮದ್ಯಪಾನದಿಂದ ಹಾನಿಗಳಾಗುವ ಸಾಧ್ಯತೆಗಳು ಇತರರಿಗಿಂತ ಕಡಿಮೆ ಇರುವುದನ್ನು ವರದಿ ಮಾಡಲಾಗಿತ್ತು [ಆನ್ ಲೈನ್ ಜರ್ನಲ್ ಆಫ್ ಹೆಲ್ತ್ ಅಂಡ್ ಅಲೈಡ್ ಸೈನ್ಸಸ್, 2009;8) 4).] ಹಾಗಿರುವಾಗ ಕೊರಗರಿಗೆ ಬಾಧಿಸುವ ಎಲ್ಲಾ ಕಾಯಿಲೆಗಳಿಗೆ ಮದ್ಯಪಾನ ಮತ್ತು ಇತರ ದುಶ್ಚಟಗಳಷ್ಟೇ ಕಾರಣವೆಂದು ದೂಷಿಸಿ ಆ ನೆಪದಲ್ಲಿ ಸಕಲ ವೈದ್ಯಕೀಯ ಮರುಪಾವತಿಯನ್ನು ರದ್ದು ಪಡಿಸಿರುವುದು ಪರಮ ಅನ್ಯಾಯವಾಗಿದೆ. ಅಷ್ಟೇ ಅಲ್ಲ, ಆ ರೀತಿಯ ಆರೋಪವನ್ನು ಮಾಡಿರುವುದು ನಮ್ಮ ದೇಶದ ಅತಿ ಪ್ರಾಚೀನವಾದ, ಒಂದು ಕಾಲದಲ್ಲಿ ಈ ನಾಡನ್ನು ಆಳಿಕೊಂಡಿದ್ದ, ಈಗ ಅತಿ ಹಿಂದುಳಿದಿರುವ, ಅತಿ ಕಡಿಮೆ ಸದಸ್ಯರು ಉಳಿದುಕೊಂಡಿರುವ ಕೊರಗ ಸಮುದಾಯಕ್ಕೆ ಮಾಡಿರುವ ಮಹಾ ಅವಮಾನವೂ ಆಗಿದೆ.

ಆದ್ದರಿಂದ ಇಂಥ ಅಮಾನವೀಯವಾದ, ಅವಮಾನಕಾರಿಯಾದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ಈ ಆದೇಶದಲ್ಲಿ ನೀಡಿರುವ ಕಾರಣಗಳಿಗೆ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುಪಾವತಿ ಕೊಡುವುದಿಲ್ಲ ಎಂದಾದರೆ ಅವೇ ಕಾರಣಗಳಿಗಾಗಿ ಅಂಥ ‘ದುಶ್ಚಟಗಳನ್ನು’ ಹೊಂದಿರಬಹುದಾದ ಜನಪ್ರತಿನಿಧಿಗಳಿಗೂ, ಸಚಿವರಿಗೂ ಯಾವುದೇ ವೈದ್ಯಕೀಯ ಮರುಪಾವತಿಯನ್ನು ನೀಡಲಾಗದು ಎಂಬ ಆದೇಶವನ್ನು ಹೊರಡಿಸುವ ಧೈರ್ಯವು ಸರಕಾರಕ್ಕಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದು ಡಾ. ಪಿ. ವಿ. ಭಂಡಾರಿ, ಮನೋವೈದ್ಯಕೀಯ ತಜ್ಞರು, ಉಡುಪಿ ಹಾಗೂ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಮಂಗಳೂರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು