News Karnataka Kannada
Friday, May 10 2024
ಮಂಗಳೂರು

ಭಾವೈಕ್ಯ ಮೂಡಿಸುವ ಸಾಹಿತ್ಯ ಕೃತಿಗಳು ಬರಲಿ: ಪ್ರೊ.ವಿವೇಕ ರೈ

Untitled 2 Recovered Recovered Recovered
Photo Credit :

ಮಂಗಳೂರು: ‘ಇತರ ದ್ರಾವಿಡ ಭಾಷೆಗಳಂತೆ ತುಳುವಿನಲ್ಲೂ ಇತ್ತೀಚೆಗೆ ಸಾಕಷ್ಟು ಮೌಲಿಕ ಪುಸ್ತಕಗಳು ಪ್ರಕಟವಾಗುತ್ತಿವೆ. ಸಾಹಿತ್ಯದ ಮೂಲಕ ಭಾಷೆ-ಸಂಸ್ಕೃತಿಯ ಪ್ರಸರಣದ ಜೊತೆಗೆ ಸಮಾಜದಲ್ಲಿ ಭಾವೈಕ್ಯ ಮೂಡಿಸುವ ಕೆಲಸಗಳು ಆಗಬೇಕಿದೆ. ಅಂತಹ ಬರಹಗಾರರನ್ನು ಅಕಾಡೆಮಿ ಪ್ರೋತ್ಸಾಹಿಸಬೇಕು. ತುಳುನಾಡಿನ ವಿವಿಧ ಜಾತಿ-ಧರ್ಮಗಳ ಹಬ್ಬ ಹರಿದಿನ ಮತ್ತು ಆಚಾರ ವಿಚಾರಗಳನ್ನು ಗಾಂಪನ ಪುರಾಣ ಕೃತಿಯಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ’ ಎಂದು ಹಿರಿಯ ಜಾನಪದ ವಿದ್ವಾಂಸ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಗಾಂಪನ ಪುರಾಣ’ ಪರಪೋಕುದ ಪಟ್ಟಾಂಗ ಮತ್ತು ಡಾ.ವಸಂತಕುಮಾರ್ ಪೆರ್ಲ ಅವರ ‘ರಬೀಂದ್ರ ಕಬಿತೆಲು’ ಕೃತಿಗಳನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್, ವಿಶ್ವಕವಿ ರವೀಂದ್ರನಾಥ ಟಾಗೋರ್ ಮೊದಲಾದ ಶ್ರೇಷ್ಠ ವ್ಯಕ್ತಿಗಳು ನಮ್ಮ ರಾಷ್ಟ್ರೀಯತೆಯನ್ನು ಉನ್ನತ ಮಟ್ಟದಲ್ಲಿ ಬೆಳಗಿದವರು. ಅಂಥವರ ಕುರಿತಾಗಿ ಈ ಎರಡೂ ಕೃತಿಗಳು ಬೆಳಕು ಹರಿಸಿವೆ. ಕವಿ ರವೀಂದ್ರರ ಗೀತಾಂಜಲಿ ಕವಿತೆಗಳನ್ನು ತುಳು ಭಾಷೆಗೆ ತಂದಿರುವುದು ಒಂದು ಉತ್ತಮ ಪ್ರಯತ್ನ. ಈ ಕೃತಿಯನ್ನು ಟ್ಯಾಗೋರ್ ಅವರ ವಸ್ತುಸಂಗ್ರಹಾಲಯಕ್ಕೆ ತಲುಪಿಸಬೇಕು’ ಎಂದವರು ಸಲಹೆ ನೀಡಿದರು.

ಕಲಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಮತ್ತು ಸಾರಿಗೆ ಉದ್ಯಮಿ ಎ.ಕೆ.ಜಯರಾಮಶೇಖ ಮುಖ್ಯ ಅತಿಥಿಗಳಾಗಿದ್ದರು.

ಸ್ವರದಿಂದ ಅಕ್ಷರಕ್ಕೆ ಪಟ್ಟಾಂಗ :

ಡಾ.ಸದಾನಂದ ಪೆರ್ಲ ಮಾತನಾಡಿ ‘ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಗಾಂಪಣ್ಣನ ತಿರ್ಗಾಟ ತುಳು ಸರಣಿ ಒಂದು ಜನಪ್ರಿಯ ಪಟ್ಟಾಂಗ ಕಾರ್ಯಕ್ರಮ. ತುಳುನಾಡಿನಲ್ಲಿ ಜಾತ್ಯತೀತವಾಗಿ ನಡೆಯುವ ವಿವಿಧ ಹಬ್ಬ-ಹರಿದಿನಗಳು, ಜಾನಪದ ಉತ್ಸವ – ಆಚರಣೆಗಳನ್ನು ಆಪ್ತ ಸಂವಾದದ ಮೂಲಕ ವಿವರಿಸಿ ಶೋತೃಗಳಿಗೆ ಮಾಹಿತಿ ಮನೋರಂಜನೆಗಳನ್ನು ನೀಡಲಾಗಿತ್ತು. ಇದರ ಯಶಸ್ಸಿಗೆ ಕುಕ್ಕುವಳ್ಳಿಯವರಂತಹ ಜಾನಪದ ತಜ್ಞರ ಬರಹಗಳು ಕಾರಣ. ಅದೀಗ ಸ್ವರದಿಂದ ಅಕ್ಷರ ರೂಪಕ್ಕೆ ಬಂದಿರುವುದು ಸಮಾಜಕ್ಕೆ ಉಪಯುಕ್ತ ಕೊಡುಗೆ’ ಎಂದರು.

ಸಾಹಿತ್ಯ-ಸಂಸ್ಕೃತಿಯ ಸೇವೆ: ಕತ್ತಲ್ಸಾರ್:

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ‘ಕಳೆದ ಎರಡೂವರೆ ವರ್ಷಗಳಲ್ಲಿ ಕೊರೋನಾ ಕಂಟಕದ ನಡುವೆಯೂ ತುಳು ಸಾಹಿತ್ಯ ಅಕಾಡೆಮಿ ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಸರಕಾರದ ಸೀಮಿತ ಅನುದಾನದಲ್ಲಿ ಸ್ವಂತ ಇಚ್ಛಾಶಕ್ತಿಯನ್ನು ಬಳಸಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

ನೂರಾರು ಕಲಾವಿದರಿಂದ ತುಳು ಜಾನಪದ ಮತ್ತು ಸಾಂಸ್ಕೃತಿಕ ವೈವಿಧ್ಯ,ಎಡೆಬಿಡದ ಚಾವಡಿ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಪ್ರಶಸ್ತಿ ಪ್ರದಾನ ನಡೆಸಿರುವುದಲ್ಲದೆ ಮದಿಪು ತ್ರೈಮಾಸಿಕ ಹಾಗೂ ವಿವಿಧ ಸಾಹಿತ್ಯ ಕೃತಿಗಳನ್ನೂ ಸಾಂದರ್ಭಿಕವಾಗಿ ಪ್ರಕಟಿಸಲಾಗಿದೆ. ಇಷ್ಟರಲ್ಲೇ 25 ಮರೆಯಲಾರದ ತುಳುವರು ಮತ್ತು ಇತರ ಗ್ರಂಥಗಳು ಕೂಡ ಬಿಡುಗಡೆಗೊಳ್ಳಲಿವೆ’ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕೃತಿ ಕರ್ತರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ.ವಸಂತ ಕುಮಾರ್ ಪೆರ್ಲ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಪಣಿಯಾಡಿ ಕಾದಂಬರಿ ಪ್ರಶಸ್ತಿ ಪುರಸ್ಕೃತೆ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಿಕೆ ಅಕ್ಷಯ ಆರ್.ಶೆಟ್ಟಿ ಮತ್ತು ಕಾಸರಗೋಡಿನ ಕವಿ, ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ಮಾಡಿದರು. ಕೃತಿಕಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಅವರು ಗಾಂಪನ ಪುರಾಣದಿಂದ ಆಯ್ದ ಕವಿತೆಯನ್ನು ಹಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಸ್ವಾಗತಿಸಿದರು; ಗಾಯಕಿ ಕಲಾವತಿ ದಯಾನಂದ ಪ್ರಾರ್ಥಿಸಿದರು. ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿ ಬೆಂಗಳೂರಿನ ಸದಸ್ಯೆ ಕಾಂತಿ ಶೆಟ್ಟಿ ವಂದಿಸಿದರು. ಅಕಾಡೆಮಿ ಸದಸ್ಯರಾದ ಡಾ.ಆಕಾಶ್ ರಾಜ್ ಜೈನ್, ನಾಗೇಶ್ ಕುಲಾಲ್, ರವಿ ಮಡಿಕೇರಿ, ಸಂತೋಷ್ ಪೂಜಾರಿ, ಚೇತಕ್ ಪೂಜಾರಿ, ವಿಜಯಲಕ್ಷ್ಮಿ ಪಿ.ರೈ ಮೊದಲಾದವರು ಉಪಸ್ಥಿತರಿದ್ದರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು