News Karnataka Kannada
Monday, April 29 2024
ಮಂಗಳೂರು

ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿ ನಡುವಿನ ಚತುಷ್ಪಥ ಕಾಮಗಾರಿಗೆ ವೇಗ

Four-laning work between Puttur - Uppinangady Twin City to be expedited
Photo Credit : News Kannada

ಪುತ್ತೂರು: ಒಂದೊಮ್ಮೆ ಉಪ್ಪಿನಂಗಡಿ ತಾಲೂಕು ಕೇಂದ್ರ. ಕ್ರಮೇಣ ತಾಲೂಕು ಕೇಂದ್ರ ಪುತ್ತೂರಿಗೆ ವರ್ಗವಾಯಿತು. ಹಾಗೆಂದು ಈ ಎರಡು ಪಟ್ಟಣಗಳ ನಡುವಿನ ಸಂಬಂಧ ಪ್ರತ್ಯೇಕಗೊಂಡಿಲ್ಲ. ಎರಡೂ ಪಟ್ಟಣಗಳು ಹುಬ್ಬಳ್ಳಿ – ಧಾರವಾಡ ಟ್ವಿನ್ ಸಿಟಿ ಮಾದರಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಇನ್ನಷ್ಟು ಬಲ ತುಂಬುವ ದಿಶೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆಯುತ್ತಿದೆ.

ಜಿ.ಪಂ. ರಸ್ತೆಯಾಗಿದ್ದ ಸಂದರ್ಭ ಈ ರಸ್ತೆಯ ಅಗಲ ಕೇವಲ 5.5 ಮೀ. ಎದುರಿನಿಂದ ವಾಹನ ಬಂದರೆ, ಪಕ್ಕಕ್ಕೆ ಸರಿದು ನಿಲ್ಲಬೇಕಾದ ಪ್ರಮೇಯ. ಆದ್ದರಿಂದ ರಸ್ತೆಯನ್ನು ಪಿಡಬ್ಲ್ಯೂಡಿಗೆ ಹಸ್ತಾಂತರಿಸಿ, ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾಯಕಕ್ಕೆ ಮುಂದಡಿ ಇಡಲಾಯಿತು. ಮುಂದೆ ಈ ರಸ್ತೆಯ ಕೆಲ ಭಾಗಗಳನ್ನು 7 ಮೀಟರ್ಗೆ ಅಗಲಗೊಳಿಸಿದ್ದು, ಇದೀಗ ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆಗೊಳ್ಳುತ್ತಿದೆ.

ಪುತ್ತೂರು – ಉಪ್ಪಿನಂಗಡಿ ನಡುವಿನ ಅಂತರ 12 ಕಿಲೋ ಮೀಟರ್. ಇಷ್ಟು ಅಂತರದ ರಾಜ್ಯ ಹೆದ್ದಾರಿ ರಸ್ತೆಯನ್ನು 5 ಹಂತಗಳಲ್ಲಿ ಚತುಷ್ಪಥ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಲ್ಲಿ 4 ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಹಂತದ ಕಾಮಗಾರಿ ಬಾಕಿ ಇದೆ.

ಮೊದಲ ಹಂತ:
ಮೊದಲ ಹಂತದಲ್ಲಿ ಹಾರಾಡಿ – ಕೇಪುಳು ನಡುವೆ ಚತುಷ್ಪಥ ಕಾಮಗಾರಿ ನಡೆಸಲಾಗಿತ್ತು. ಅಪೆಂಡಿಕ್ಸ್ ಯೋಜನೆಯಡಿ 280 ಲಕ್ಷ ರೂ.ನಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು.

ಎರಡನೇ ಹಂತ:
ಕೇಪುಳು – ಕೃಷ್ಣನಗರದ ನಡುವೆ 415 ಲಕ್ಷ ರೂ. ಅಂದರೆ 4.15 ಕೋಟಿ ರೂ.ನಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಅಪೆಂಡಿಕ್ಸ್ ಯೋಜನೆಯಡಿ ಕಾಮಗಾರಿ ಮುಂದುವರಿಸಿದ್ದು, ಕಾಮಗಾರಿ ಪೂರ್ಣಗೊಂಡಿದೆ.

ಮೂರನೇ ಹಂತ:
ಕೃಷ್ಣನಗರ – ಸೇಡಿಯಾಪು ನಡುವೆ ಹಾಗೂ ಮಠಂತಬೆಟ್ಟು – ಬೇರಿಕೆ ನಡುವೆ 12 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಒಂದೇ ಅನುದಾನದಲ್ಲಿ ಎರಡು ಭಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ನಡುವಿನ ಪ್ರದೇಶ ಸೇಡಿಯಾಪು – ಮಠಂತಬೆಟ್ಟು ರಸ್ತೆಯ ಅಭಿವೃದ್ಧಿ ಕಾರ್ಯ ಮುಂದೆ ನಡೆಯಬೇಕಿದೆ. ಇದಕ್ಕೆ ಕಾರಣ, ಸೇಡಿಯಾಪು – ಮಠಂತಬೆಟ್ಟು ನಡುವಿನ ದ್ವಿಪಥ ರಸ್ತೆಯ ನಿರ್ವಹಣಾ ಒಪ್ಪಂದ ಇನ್ನು 1 ವರ್ಷ ಚಾಲ್ತಿಯಲ್ಲಿರುವುದರಿಂದ, ನಂತರವಷ್ಟೇ ಈ ಭಾಗದಲ್ಲಿ ಕಾಮಗಾರಿ ನಡೆಸಲು ಸಾಧ್ಯಯ.

ನಾಲ್ಕನೇ ಹಂತ:
ನಾಲ್ಕನೇ ಹಂತದ ಕಾಮಗಾರಿಗೆ ಈಗ ಚಾಲನೆ ಸಿಕ್ಕಿದೆಯಷ್ಟೇ. 10 ಕೋಟಿ ರೂ. ವೆಚ್ಚದಲ್ಲಿ ಬೇರಿಕೆಯಿಂದ ನೆಕ್ಕಿಲಾಡಿ ನಡುವೆ ಚತುಷ್ಪಥ ಕಾಮಗಾರಿ ನಡೆಸಲು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದೆ. ಇದು ಬೇರಿಕೆಯಿಂದ ನೆಕ್ಕಿಲಾಡಿ ಎಂಆರ್ಪಿಎಲ್ ಪೆಟ್ರೋಲ್ ಪಂಪ್ವರೆಗಿನ ರಸ್ತೆ ಅಭಿವೃದ್ಧಿಗೊಳ್ಳಲಿದೆ.

ಕೊನೆ ಹಂತ:
ಸುಮಾರು 300 ಮೀಟರ್ನಷ್ಟು ರಸ್ತೆ ಅಭಿವೃದ್ಧಿಯ ತವಕದಲ್ಲಿದೆ. ಎಂಆರ್ಪಿಎಲ್ ಪೆಟ್ರೋಲ್ ಪಂಪ್ನಿಂದ ನೆಕ್ಕಿಲಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಧಿಸುವಲ್ಲಿವರೆಗೆ ಕಾಮಗಾರಿ ನಡೆಯಬೇಕಿದೆ. ಆ ಭಾಗದಿಂದ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಎರಡೂ ಹೆದ್ದಾರಿ ಸಂಧಿಸಲಿದೆ.

ಕೊನೆ ಹಂತಕ್ಕೆ ಎದುರಾಗಲಿದೆ ಅಂಡರ್ಪಾಸ್:
ಕೊನೆ ಅಥವಾ ಐದನೇ ಹಂತದ ಕಾಮಗಾರಿಗೆ ಯಾಕಿಷ್ಟು ತಡ ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರ – ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಸಂಧಿಸಲಿರುವ ರಾಷ್ಟ್ರೀಯ ಹೆದ್ದಾರಿಯೇ ಆಗಿದೆ. ಈ ಅಂಡರ್ಪಾಸ್ ನೆಕ್ಕಿಲಾಡಿ ವನಸುಮಾ ನರ್ಸರಿಯಿಂದ ಎಡಕ್ಕೆ ತಿರುಗಿ, ಮುಂದುವರಿದಾಗ ಎದುರಾಗಲಿದೆ. ಅಂದರೆ ಈಗಿರುವ ಕಾಂಕ್ರೀಟ್ ರಸ್ತೆ ಮುಂದೆ ಸರ್ವಿಸ್ ರಸ್ತೆಯಾಗಿ ಮಾತ್ರ ಬಳಕೆಯಾಗಬಹುದು.

ನೆಕ್ಕಿಲಾಡಿ ಬಳಿ ಹರಿಯುವ ಕುಮಾರಧಾರ ನದಿಗೆ ಮುಂದೆ ಎರಡು ಸೇತುವೆ ಇರಲಿದೆ. ಏಕಪಥ ರಸ್ತೆ ಇದಾಗಿದ್ದು, ಮಂಗಳೂರು ಭಾಗದಿಂದ ಬರುವವರು ಎಡ ಭಾಗದ ರಸ್ತೆಯನ್ನು ಬಳಕೆ ಮಾಡುವುದರಿಂದ, ಪುತ್ತೂರಿನಿಂದ ತೆರಳುವ ವಾಹನಗಳು ಎಡ ಬದಿಗೆ ಹೋಗಲೇಕು. ಆದ್ದರಿಂದ ನೆಕ್ಕಿಲಾಡಿ ಸುಮಾ ನರ್ಸರಿಯಿಂದ ಎಡಕ್ಕೆ ಚಲಿಸಿ, ಮುಂದೆ ಅಂಡರ್ಪಾಸ್ ಅಡಿಯಿಂದ ತೆರಳಿ, ನಂತರ ಎಡ ಭಾಗದ ಸೇತುವೆಯನ್ನು ಸೇರಲಿದೆ. ಹಾಗೆಂದು, 300 ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿ ಹಿಂದೆ ಉಳಿದಿಲ್ಲ. ಬಾಕಿ ಉಳಿದ 300 ಮೀಟರ್ ರಸ್ತೆಯ ಅಗಲೀಕರಣಕ್ಕಾಗಿ, ಸರ್ವೆ ಕಾರ್ಯ ನಡೆಸಿದ್ದು, ಕೆಲವರು ರಸ್ತೆಗಾಗಿ ಜಾಗ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಈ ರಸ್ತೆಯ ಅಭಿವೃದ್ಧಿಯೂ ಶೀಘ್ರದಲ್ಲೇ ನೆರವೇರುವ ಸಾಧ್ಯತೆ ಇದೆ.

ಯಾಕೆ ಚತುಷ್ಪಥ?
ಪುತ್ತೂರು – ಉಪ್ಪಿನಂಗಡಿ ನಡುವಿನ ರಾಜ್ಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಅಗತ್ಯವೇನು ಎಂದು ಕೆಲವರು ಪ್ರಶ್ನಿಸಬಹುದು. ಲೋಕೋಪಯೋಗಿ ಇಲಾಖೆಯ ಒಂದು ಲೆಕ್ಕಾಚಾರದ ಪ್ರಕಾರ, ಈ ರಸ್ತೆಯಲ್ಲಿ ದಿನದಲ್ಲಿ 13 ಸಾವಿರಕ್ಕೂ ಅಧಿಕ ವಾಹನಗಳು ಓಡಾಟ ನಡೆಸುತ್ತಿವೆ. ಅಲ್ಲದೇ, ದಿನದಲ್ಲಿ ಅತೀ ಹೆಚ್ಚು ಬಾರಿ ಕೆಎಸ್ಆರ್ಟಿಸಿ ಬಸ್ ಓಡಾಟ ನಡೆಸುವ ರಸ್ತೆಯೂ ಇದೇ ಆಗಿದೆ. ಅಂದರೆ ಜನರ ಓಡಾಟ ಹೆಚ್ಚಿರುವ ರಸ್ತೆ ಇದು ಎನ್ನುವುದು ಖಾತ್ರಿಯಾಯಿತು. ಜೊತೆಗೆ, ಮಂಗಳೂರು ಬೆಂಗಳೂರು ಸಂಪರ್ಕದ ಎನ್.ಎಚ್.75 ಹಾಗೂ ಮಾಣಿ – ಮೈಸೂರು ಸಂಪರ್ಕಿಸುವ ಎನ್.ಎಚ್.275 ಎರಡೂ ಹೆದ್ದಾರಿಗಳನ್ನು ಜೋಡಿಸುವ ರಾಜ್ಯ ಹೆದ್ದಾರಿ ಇದಾಗಿದೆ. ಹಾಗಾಗಿ, ಎಲ್ಲಾ ದೃಷ್ಟಿಯಿಂದಲೂ ಪುತ್ತೂರು – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅತೀ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ರಸ್ತೆಯನ್ನು ಚತುಷ್ಪಥಗೊಳಿಸುವ ಅಗತ್ಯವಿತ್ತು.

ಹೀಗಿದೆ ಚತುಷ್ಪಥ:
ಒಂದು ರಸ್ತೆ 7 ಮೀ., ಇನ್ನೊಂದು ರಸ್ತೆ 7 ಮೀ., ನಡುವಿನಲ್ಲಿ 1 ಮೀ. ವಿಭಜಕ. ಹೀಗೆ ಒಟ್ಟು 15 ಮೀ. ರಸ್ತೆಯ ಅಗಲ. 1ರಿಂದ 1.5 ಮೀ. ಪಾದಚಾರಿ ಮಾರ್ಗ, ಚರಂಡಿಗೆ ಎರಡು ಬದಿಗಳಲ್ಲಿ 1 ಮೀಟರ್ನಂತೆ ಒಟ್ಟು 2 ಮೀ. ಒಟ್ಟು 18.5 ಮೀಟರ್ ಅಗಲಕ್ಕೆ ಚತುಷ್ಪಥ ರಸ್ತೆ ಇದೆ. ಹಾಗೆಂದು ಕೆಲವು ಕಡೆಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಚರಂಡಿಗೆ ಸ್ಥಳಾವಕಾಶ ಕಿರಿದಾದದ್ದು ಇದೆ. ಇದಕ್ಕೆ ಕಾರಣ ಜಾಗದ ಕೊರತೆ. ಕೆಲವು ಕಡೆಗಳಲ್ಲಿ ಮನೆ ಅಂಗಳವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಇದಕ್ಕಾಗಿ ತಡೆಗೋಡೆ, ರ್ಯಾಂಪ್ ನಿರ್ಮಿಸಿಕೊಡಲಾಗಿದೆ.

ಪುತ್ತೂರು ಉಪವಿಭಾಗ ಕೇಂದ್ರ, ಉಪ್ಪಿನಂಗಡಿ ವಾಣಿಜ್ಯ ಕೇಂದ್ರ. ಈ ಎರಡೂ ಕೇಂದ್ರಗಳನ್ನು ಬೆಸೆಯುವ ಉದ್ದೇಶದಿಂದ ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ಹೆದ್ದಾರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನದಿಂದ ನಗರಸಭಾ ವ್ಯಾಪ್ತಿಯ ಪುತ್ತೂರು – ಉಪ್ಪಿನಂಗಡಿ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲಾಗಿತ್ತು. ನಂತರ ಎಸ್.ಎಚ್.ಡಿ.ಪಿ. ಯೋಜನೆಯನ್ನು ಒತ್ತಾಯಪೂರ್ವಕವಾಗಿ ತಂದು, ಚತುಷ್ಪಥ ನಿರ್ಮಾಣದ ಕಾಮಗಾರಿ ನಡೆಸಲಾಗುತ್ತಿದೆ. ಹಿಂದಿನ ಶಾಸಕರು ಅಭಿವೃದ್ಧಿ ಮಾಡಿರುವ ಸೇಡಿಯಾಪು – ಮಠಂತಬೆಟ್ಟು ಜಿಲ್ಲಾ ಮುಖ್ಯರಸ್ತೆಯ ನಿರ್ವಹಣಾ ಅವಧಿ ಇನ್ನು ಇರುವುದರಿಂದ, ಮುಂದೆ ಇದರ ಅಭಿವೃದ್ಧಿ ಕಾಮಗಾರಿ ನಡೆಸಬೇಕಷ್ಟೇ. ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿಯ ರಸ್ತೆಯ ಕಾಮಗಾರಿಗೆ 5 ಕೋಟಿ ರೂ. ಅಗತ್ಯವಿದ್ದು, ರೈಲ್ವೇ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದೇವೆ. ಉಳಿದಂತೆ ಬೇರಿಕೆಯಿಂದ ನೆಕ್ಕಿಲಾಡಿವರೆಗಿನ ಚತುಷ್ಪಥ ಕಾಮಗಾರಿಯ ಕೆಲಸಗಳಿಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಯಿಂದ, ಪುತ್ತೂರು – ಉಪ್ಪಿನಂಗಡಿ ಪಟ್ಟಣ ಇನ್ನಷ್ಟು ಬೆಳೆಯಲಿದೆ. ಸೇಡಿಯಾಪಿನ ಉದ್ದೇಶಿತ ಮೆಡಿಕಲ್ ಕಾಲೇಜು, ಇಂಡಸ್ಟ್ರಿಯಲ್ ಕಾರಿಡಾರ್, ಆನೆಮಜಲಿನ ನ್ಯಾಯಾಲಯ ಸಂಕೀರ್ಣಕ್ಕೆ ಪೂರಕವಾಗಿಯೂ ಇದು ಇರಲಿದೆ. ಜೊತೆಗೆ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣವಾದಾಗ, ಘನ ವಾಹನಗಳ ಸಾಗಾಟಕ್ಕೂ ಅಡ್ಡಿಯಾಗದಂತೆ ಚತುಷ್ಪಥ ರಸ್ತೆ ಸಹಕಾರಿಯಾಗಲಿದೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು

ವರದಿ- ಗಣೇಶ್ ಎನ್. ಕಲ್ಲರ್ಪೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು