News Karnataka Kannada
Friday, May 03 2024
ಮಂಗಳೂರು

ಧರ್ಮಸ್ಥಳ: ಬೇಧಭಾವ ಮೀರುವ ಸಮನ್ವಯ ವಿಸ್ಮಯದ ಸದಾಶಯ

Dharmasthala: The essence of harmony that transcends discrimination is a miracle of harmony
Photo Credit : By Author

ಧರ್ಮಸ್ಥಳ: ಈ ಸಲದ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ವಿಶೇಷ ಪ್ರಭೆ. ಎರಡು ವಿಶೇಷಗಳ ವೈಶಿಷ್ಟ್ಯ. ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶಿತಗೊಂಡ ನಂತರ ಮೊಟ್ಟಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭಕ್ತರನ್ನು ಉದ್ದೇಶಿಸಿ ಪ್ರಸ್ತುತಪಡಿಸಿದ ದಿಕ್ಸೂಚಿ ಭಾಷಣದ್ದು ಒಂದು ವಿಶೇಷ. ಉಜಿರೆಯಿಂದ ಧರ್ಮಸ್ಥಳದವರೆಗೆ ಹತ್ತನೇ ವರ್ಷದ ಸಂಭ್ರಮದೊಂದಿಗೆ ಭಕ್ತಿಪೂರ್ವಕ ಶ್ರದ್ಧೆಯೊಂದಿಗೆ ನಡೆದ 25 ಸಾವಿರಕ್ಕೂ ಹೆಚ್ಚು ಭಕ್ತರ ಸಮಾವೇಶ ಮತ್ತೊಂದು ವಿಶೇಷ. ಸಮನ್ವಯ ತತ್ವ ಚಿಂತನೆ ಈ ಸಲದ ದಿಕ್ಸೂಚಿ ಭಾಷಣದ ಕೇಂದ್ರ ಆಶಯವಾಗಿತ್ತು.

ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದು ಬಂದ ಅಪಾರ ಜನಸ್ತೋಮವನ್ನು ಅಭಿನಂದಿಸಿ ಮಾತನಾಡಲಾರಂಭಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವ್ಯಕ್ತಿತ್ವದೊಳಗೆ ಬೆರೆಯುವ ಶಕ್ತಿ ಸಾಧನೆಯ ಹಾದಿಯನ್ನು ಸುಗಮಗೊಳಿಸುವ ಹತ್ತುಹಲವು ಮಾರ್ಗಗಳನ್ನು ಹೊಳೆಸುವ ಚಿಂತನೆಯನ್ನು ಪ್ರಸ್ತುತಪಡಿಸಿದರು.

ಸಮಷ್ಠಿ ಪ್ರಜ್ಞೆಯೊಂದಿಗೆ ಸಲ್ಲಿಸುವ ಪ್ರಾರ್ಥನೆಯ ಮೂಲಕ ಲೋಕಕಲ್ಯಾಣದ ಆಲೋಚನೆಗಳು ರೂಪುಗೊಳ್ಳಬಹುದಾದ ಸಾಧ್ಯತೆಗಳನ್ನು ಕಂಡರಿಸಿದರು. ವ್ಯಕ್ತಿಗತ ಚಿಂತನೆಯು ಸಾಮುದಾಯಿಕ ಹಿತದ ಎತ್ತರಕ್ಕೇರಿ ಬೇಧಭಾವಗಳನ್ನು ಮೀರಿ ಇಡೀ ಸಮಾಜವನ್ನು ಕಟ್ಟುವ ರಚನಾತ್ಮಕತೆಯ ಜೊತೆಗೆ ಗುರುತಿಸಿಕೊಳ್ಳುವ ವಿಸ್ಮಯದ ಕುರಿತು ಮನವರಿಕೆ ಮಾಡಿಕೊಟ್ಟರು.

“ಭಕ್ತಿಯ ಆವೇಶದಲ್ಲಿ ಉಜಿರೆಯಿಂದ ಇಲ್ಲಿಯವರೆಗೆ ಉತ್ಸಾಹದ ನಡಿಗೆಯೊಂದಿಗೆ ಬಂದಿದ್ದೀರಿ. ನಿಮಗೆ ಅಭಿನಂದನೆ. ಭಗವದ್ಗೀತೆ ಸೇರಿದಂತೆ ಬೇರೆ ಬೇರೆ ಜ್ಞಾನಸಂಪನ್ಮೂಲಗಳ ಮೂಲಕ ಜೀವನದ ಎಲ್ಲಾ ಸಂದರ್ಭಗಳನ್ನು ಎದುರಿಸುವ ಶಕ್ತಿಯನ್ನು ನಿಮ್ಮದಾಗಿಸಿಕೊಳ್ಳಿ. ಈ ಶಕ್ತಿ ನಿಮ್ಮ ಜೀವನದ ಉದ್ದೇಶವನ್ನು ಸ್ಪಷ್ಟಗೊಳಿಸುತ್ತದೆ. ಆಗ ಗೆಲುವು ತಾನಾಗಿಯೇ ಒಲಿಯುತ್ತದೆ. ದೇವರೆಲ್ಲರೂ ಒಗ್ಗಟ್ಟಾಗಿ ವಿಶ್ವಾತ್ಮಕ ಚೈತನ್ಯವನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಬೇಧಗಳನ್ನು ಸೃಷ್ಟಿಸದೇ ಈ ಸೃಷ್ಟಿಯಲ್ಲಿರುವ ಚೈತನ್ಯವನ್ನೇ ಮುಖ್ಯವಾಗಿಸಿಕೊಂಡು ಏಕತೆಯನ್ನು ಕಾಯ್ದುಕೊಳ್ಳಬೇಕು. ಭಾವೈಕ್ಯತೆಯನ್ನು ಉಳಿಸಿಕೊಂಡಾಗ ದೇವರ ಶಕ್ತಿ ಸೃಷ್ಟಿ ಚೈತನ್ಯದಲ್ಲಿ ಸಮ್ಮಿಳಿತಗೊಂಡು ನಮ್ಮೆಲ್ಲರ ಮೂಲಕ ಲೋಕಹಿತ ತೇಜಸ್ಸು ಹೆಚ್ಚಿಸುತ್ತದೆ” ಎಂದು ಹೇಳಿದ್ದು ಅಲ್ಲಿದ್ದವರೊಳಗೆ ಪ್ರೇರಣೆ ನೀಡಿತು.

“ಆತ್ಮ ಮತ್ತು ಚಾರಿತ್ರ‍್ಯ ಶುದ್ಧವಾಗಿದ್ದಾಗ ಮಾತ್ರ ದೇವರನ್ನು ಕಾಣಲು ಸಾಧ್ಯ. ಶ್ರೀಕ್ಷೇತ್ರ ಸನ್ನಿಧಿಯಲ್ಲಿ ಶ್ರೀ ಮಂಜುನಾಥಸ್ವಾಮಿಯ ಸೇವೆ ಸ್ಪಷ್ಟ ಉದ್ದೇಶದೊಂದಿಗೆ ನಡೆಯುತ್ತದೆ. ಸ್ಪಷ್ಟ ಉದ್ದೇಶವಿದ್ದಾಗ ಮಾತ್ರ ಭಗವಂತನ ಅನುಗ್ರಹ ದೊರೆಯುತ್ತದೆ. ಜಾತಿ, ಮತ ಹಾಗೂ ಅಂತಸ್ತಿನ ಭೇದವಿಲ್ಲದೆ ಏಕಚಿತ್ತದಿಂದ ಆತನನ್ನು ಪ್ರಾರ್ಥಿಸೋಣ” ಎನ್ನುವ ಮೂಲಕ ದೈವತ್ವ ಮತ್ತು ಲೌಕಿಕತೆಯ ಉದಾತ್ತ ಚಿಂತನೆಯ ಸಮನ್ವಯತೆಯ ಮಹತ್ವವನ್ನು ಪ್ರಚುರಪಡಿಸಿದರು.

ಭಕ್ತಿ, ಶ್ರದ್ಧೆ, ನಿಷ್ಠೆ ಇದ್ದಾಗ ಮಾತ್ರ ಕೆಲಸಗಳು ಸರಾಗವಾಗುತ್ತವೆ. ‘ಭಕುತ ಜನ ಮುಂದೆ ನಾನವರ ಹಿಂದೆ’ ಎನ್ನುವಂತೆ ಭಕ್ತರು ಮುಂದೆ ನಡೆದಾಗ ಭಗವಂತ ಹಿಂದಿನಿಂದ ನಡೆಸಿಕೊಂಡು ಬರುತ್ತಾನೆ ಎಂದು ಅರ್ಥೈಸಿದರು. ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳ ಜೊತೆಗೆ ಪರಿಹಾರದ ಹಾದಿಯ ಅಪೂರ್ವ ಅವಕಾಶಗಳೂ ಸೃಷ್ಟಿಯಾಗುತ್ತವೆ ಎಂದು ಹೇಳಿದರು. ಈ ಚಿಂತನೆ ವರ್ತಮಾನದ ಕುರಿತ ವಿವೇಚನೆ ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳಬಹುದಾದ ಮಾರ್ಗದರ್ಶಿ ಸೂತ್ರವನ್ನು ಅಲ್ಲಿದ್ದವರ ಕಡೆಗೆ ರವಾನಿಸಿತು.

“ಶ್ರೀ ಕ್ಷೇತ್ರದಲ್ಲಿ ಅನೇಕ ವರ್ಷಳಿಂದ ಸಹಬಾಳ್ವೆ, ಸಾಮರಸ್ಯ ಹಾಗೂ ಸಹಜೀವನಕ್ಕೆ ಪ್ರಾಶಸ್ಯವನ್ನು ಕೊಟ್ಟಿದ್ದೇವೆ. ಪಾರಂಪರಿಕವಾಗಿ ಅನ್ನಕೂಟದಲ್ಲಿ ಪ್ರಸಾದವನ್ನು ಭಕ್ತರು ಅತ್ಯಂತ ಭಕ್ತಿಪೂರ್ವಕವಾಗಿ ಸ್ವೀಕರಿಸುತಿದ್ದಾರೆ” ಎಂದು ತಿಳಿಸಿದರು. ಲಕ್ಷದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆಯುವ ಪಾದಯಾತ್ರೆ ಹತ್ತನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕಳೆದ ಹತ್ತುವರ್ಷಗಳಲ್ಲಿ ನಡೆದ ಬೆಳವಣಿಗೆಗಳನ್ನು ಮೆಲಕು ಹಾಕಿದರು. ಏಕತೆಯ ಸೂತ್ರವನ್ನು ಪ್ರತಿಯೊಬ್ಬರಲ್ಲೂ ಕಾಣುವುದೇ ಈ ಬಾರಿಯ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ನುಡಿದರು.

ಜಗತ್ತಿನಲ್ಲಿ ಹುಟ್ಟಿಕೊಂಡಿರುವ ಭೇದಭಾವಗಳನ್ನು ದೇವರು ಸೃಷ್ಟಿಸಿಲ್ಲ. ಬದಲಾಗಿ ಅವುಗಳನ್ನು ನಾವೇ ರೂಪಿಸಿಕೊಂಡಿದ್ದೇವೆ. ಜನರಲ್ಲಿ ಸಾಮರಸ್ಯ ಮೂಡಿಸುವುದು ಅಗತ್ಯವಾಗಿದೆ. ಬೇಧಭಾವಗಳ ಇಲ್ಲವಾಗಿಸಲು ನಾವು ಸಮರ್ಥರಾಗಬೇಕಾಗಿದೆ. ರಾಜ್ಯಸಭೆಯ ಸದಸ್ಯತ್ವ ಸಿಕ್ಕಿರುವುದು ಭಗವಂತನ ಕೃಪೆ ಹಾಗೂ ನಿಮ್ಮೆಲ್ಲರ ಆಶೀರ್ವಾದ ಎಂದು ಕೃತಜ್ಞತೆ ಸಲ್ಲಿಸಿದರು. ರಾಜ್ಯಸಭೆಯ ಸದಸ್ಯತ್ವದ ಅವಕಾಶವನ್ನು ಜನಪರ ಅಭಿವೃದ್ಧಿಗಾಗಿ ಪೂರಕವಾಗಿಸಿಕೊಳ್ಳುವ ದೃಢಸಂಕಲ್ಪ ಪ್ರಸ್ತುತಪಡಿಸಿದರು.

ಪ್ರಾಸ್ತವಿಕ ನುಡಿಗಳನ್ನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ಅವರು ಪಾದಯಾತ್ರೆಯನ್ನು ಪ್ರೀತಿಯ ಬೆಸುಗೆಯನ್ನು ಸಾರುವ ಯಾತ್ರೆ ಎಂದು ಬಣ್ಣಿಸಿದರು. ಈ ಬಾರಿ ವಿಶೇಷ ಎಂಬಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿರುವುದು ಕ್ಷೇತ್ರದ ಹಿರಿಮೆ ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಡಾ. ಹೇಮಾವತಿ.ವಿ.ಹೆಗ್ಗಡೆ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಹಾಗೂ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶರತ್ ಕೃಷ್ಣ ಪಡವೆಟ್ನಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಸಂತ್ ಭಟ್ ನಾರಾವಿ ನಿರೂಪಿಸಿ, ಶಾಸಕ ಹರೀಶ್ ಪೂಂಜಾ ಸ್ವಾಗತಿಸಿ, ಧರ್ಮಸ್ಥಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ವಂದಿಸಿದರು.

ವರದಿ: ತೇಜಶ್ವಿನಿ ಕಾಂತರಾಜ್
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ: ಶಶಿಧರ.ವಿ.ನಾಯ್ಕ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು