News Karnataka Kannada
Tuesday, April 30 2024
ಮಂಗಳೂರು

ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ನೇಮಕ ಅಸಿಂಧು

Appointment of Ullal Municipal Council Standing Committee Invalidated
Photo Credit : News Kannada

ಉಳ್ಳಾಲ: ಇಲ್ಲಿನ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಕಾಂಗ್ರೆಸ್-ಬಿಜೆಪಿ ಮೈತ್ರಿಯಿಂದ ಮಾಡಲಾಗಿದೆ . ಈ ಕುರಿತ ವರದಿಯನ್ನು ನಗರಸಭೆ ಅಧ್ಯಕ್ಷರು ಜಿಲ್ಲಾಧಿಕಾರಿಗೆ ನೀಡಿದ್ದಾರೆ ಅನ್ನುವ ನಗರಸಭೆ ಸದಸ್ಯರೊಬ್ಬರ ಆರೋಪ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಅಧ್ಯಕ್ಷರು ರಾಷ್ಟ್ರಗೀತೆಯನ್ನು ಹಾಡದೇ ಅರ್ಧದಲ್ಲೇ ಸಭೆಯಿಂದ ಹೊರನಡೆದ ಘಟನೆ ಇಂದು ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಕಾಂಗ್ರೆಸ್ ಬೆಂಬಲಿತ 7 ಸದಸ್ಯರನ್ನು ಇಟ್ಟುಕೊಂಡು ಸ್ಥಾಯಿಸಮಿತಿ ರಚಿಸಲಾಗಿದೆ. ಆದರೆ ನಗರಸಭೆ ಆಡಳಿತ ಜಿಲ್ಲಾಧಿಕಾರಿಗೆ ನೀಡಲಾಗಿರುವ ವರದಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಸದಸ್ಯರು ಬೆಂಬಲ ಸೂಚಿಸಿ ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ ಎಂದು ಸದಸ್ಯ ದಿನಕರ್ ಉಳ್ಳಾಲ್ ಹೇಳುತ್ತಿದ್ದಂತೆ, ಸಭೆಯಲ್ಲಿ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿ ಬಿಜೆಪಿಯ ಯಾವುದೇ ಸದಸ್ಯರು ಬೆಂಬಲ ವ್ಯಕ್ತಪಡಿಸಿಲ್ಲ.

ಅಧ್ಯಕ್ಷರು ಸುಳ್ಳು ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯೇ ಅಸಿಂಧು. ತಕ್ಷಣವೇ ಅಧಿಕಾರ ದುರ್ಬಳಕೆ ಮಾಡಿರುವ ಅಧ್ಯಕ್ಷೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಧಿಕ್ಕಾರ ಕೂಗಿದರು. ಗದ್ದಲವನ್ನು ತಡೆಯಲು ಸಾಧ್ಯವಾಗದೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ ಸಭೆಯಿಂದ ಹೊರನಡೆದಿದ್ದಾರೆ.

ಸಭಾ ಅಧ್ಯಕ್ಷತೆಯನ್ನು ವಹಿಸುವ ಅಧ್ಯಕ್ಷ ಸಭೆಯ ಕೊನೆಯವರೆಗೆ ನಿಂತು ರಾಷ್ಟ್ರಗೀತೆ ಹಾಡದೇ ಅರ್ಧದಲ್ಲೇ ಹೊರನಡೆಯುವುದು ಬೇಜವಾಬ್ದಾರಿತನ. ಇದು ಕಾನೂನು ರೀತ್ಯ ಅಪರಾಧ. ಈ ಕುರಿತು ಜಿಲ್ಲಾಡಳಿತಕ್ಕೆ ಶಿಸ್ತುಕ್ರಮ ಕೈಗೊಳ್ಳಲು ದೂರು ನೀಡುವುದಾಗಿ ದಿನಕರ್ ಉಳ್ಳಾಲ್ ಹೇಳಿದರು.

ಯುಜಿಡಿ ತೆರಿಗೆ ಹಣ ದುರ್ಬಳಕೆ :

15 ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಮುಕ್ತಾಯ ಕಾಣುತ್ತಿಲ್ಲ. 60 ಕೋಟಿ ರೂ. ಅನುದಾನದಡಿ ನಿರ್ಮಾಣವಾಗಬೇಕಿದ್ದ ಯೋಜನೆ ವಿಳಂಬ ನೀತಿಯಿಂದ ಮತ್ತೆ ರೂ.40 ಕೋಟಿ ಹೆಚ್ಚುವರಿ ಬೇಕಾಗಿದೆ. ನ್ಯಾಯಾಲಯದಲ್ಲಿರುವ ಮೂರು ತಡೆಯಾಜ್ಞೆಗಳನ್ನು ಈವರೆಗೆ ತೆರವು ಮಾಡಲಾಗಿಲ್ಲ, ಅದರ ಬಗ್ಗೆ ಆಸಕ್ತಿಯನ್ನು ಆಡಳಿತ ತೋರಿಸುತ್ತಿಲ್ಲ. ವಕೀಲರ ಶುಲ್ಕವೇ ರೂ.8 ಲಕ್ಷ ಕೊಟ್ಟಾಗಿದೆ. ನಗರಸಭೆಯಲ್ಲಿ 15 ವರ್ಷಗಳಿಂದ ಒಳಚರಂಡಿ ಯೋಜನೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದೇನೆ. ಅಧ್ಯಕ್ಷರು, ಕಮೀಷನರ್ ಬದಲಾವಣೆ ಆಗುತ್ತಿದ್ದಾರೆ, ಯೋಜನೆ ಅರ್ಧದಲ್ಲೇ ಮೊಟಕಾಗಿದೆ. ಸಂಬಂಧಿಸಿದ ಸಚಿವರು ಕೂಡಾ 2021 ರಿಂದ ಯೋಜನೆ ಕುರಿತು ಮಾಹಿತಿಯನ್ನು ಕೇಳುತ್ತಿದ್ದರೂ ಉತ್ತರ ದೊರೆತಿಲ್ಲ.

ಯೋಜನೆ ಜಾರಿಯಾದರೂ ಪ್ರತಿ ಮನೆ ಒಳಚರಂಡಿ ಕನೆಕ್ಷನ್ ಗೆ ರೂ.25,000 ನೀಡಬೇಕಾಗುತ್ತದೆ. ಅವೈಜ್ಞಾನಿಕ, ಕಳಪೆ ಮಾದರಿ ಯೋಜನೆಗಳಿಗೆ ಜನರ ತೆರಿಗೆ ಹಣವನ್ನು ಪೋಲು ಮಾಡುವ ಕ್ರಮ ಸರಿಯಲ್ಲ. ಕೂಡಲೇ ನಗರಸಭೆ ಆಡಳಿತ ಯೋಜನೆಯನ್ನು ರದ್ದುಪಡಿಸಬೇಕು. ಲೋಕಾಯುಕ್ತಕ್ಕೆ ಈಗಾಗಲೇ ಯೋಜನೆ ಕುರಿತು ದೂರು ನೀಡಲಾಗಿದೆ ಎಂದ ದಿನಕರ್ ಉಳ್ಳಾಲ್ ಅವರ ಜತೆಗೆ ಸದಸ್ಯರುಗಳಾದ ಜಬ್ಬಾರ್,ಅಝೀಝ್, ಅಸ್ಗರ್ ಅಲಿ ದನಿಗೂಡಿಸಿದರು.

ಕುಡಿಯುವ ನೀರಿನ ಸಮಸ್ಯೆ :

ಆಡಳಿತ ಪಕ್ಷದ ಸದಸ್ಯ ಬಾಝಿಲ್ ಡಿಸೋಜ ಕುಡಿಯುವ ನೀರಿನ ಸಮಸ್ಯೆ ಕುರಿತು ದನಿ ಎತ್ತಿ, `ಚೆಂಬುಗುಡ್ಡೆ, ಕೆರೆಬೈಲು, ಉಳ್ಳಾಲದ ವಿವಿಧ ಭಾಗಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜನವರಿ ತಿಂಗಳಲ್ಲಿಯೇ ಇಂತಹ ಸಮಸ್ಯೆ ಇದ್ದಲ್ಲಿ, ಎಪ್ರಿಲ್ , ಮೇ ತಿಂಗಳಲ್ಲಿ ಜನ ಏನು ಮಾಡಬೇಕು? ಅನ್ನುವ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಇಂಜಿನಿಯರ್ 15ನೇ ಹಣಕಾಸು ಯೋಜನೆಯಡಿ ಬಂದಿರುವ ಅನುನದಾನದಡಿ ಪೈಪ್ ಲೈನ್ ಗೆ ಅನುದಾನ ಸಾಲದು ಎಂದರು. ಈ ಬಗ್ಗೆ ಸರಕಾರದ ಗಮನಹರಿಸದೇ ಸುಮ್ಮನಿರುವ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ಎಂದು ಸದಸ್ಯ ದಿನಕರ್ ಉಳ್ಳಾಲ್ ಕಮೀಷನರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆ ಆಡಳಿತಕ್ಕೆ ಮರ್ಯಾದೆ ಇಲ್ಲದ ಹಾಗಾಗಿದೆ. ತ್ಯಾಜ್ಯ, ಕುಡಿಯುವ ನೀರು, ಒಳಚರಂಡಿ ಯೋಜನೆ , ರಸ್ತೆ ಅವ್ಯವಸ್ಥೆ ವಿರುದ್ಧ ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಉಳ್ಳಾಲದ ಶಾಸಕರು ಫ್ಲೆಕ್ಸ್ ನಲ್ಲಿ ಮಾತ್ರ ಕಾಣುತ್ತಿದ್ದಾರೆ. ಉಳ್ಳಾಲ ಭಾಗದಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಎಲ್ಲದಕ್ಕೂ ಅನುದಾನದ ಕೊರತೆ ಅನ್ನುವ ಅಧ್ಯಕ್ಷರೇ, ಬೆಂಗಳೂರಿಗೆ ಹೋಗಿ ಯೋಜನೆಗಳನ್ನು ತರಲು ಬಸ್ ಟಿಕೇಟಿಗೆ ಹಣವಿಲ್ಲದಂತ ಸ್ಥಿತಿಯಿದೆ.

ತೊಕ್ಕೊಟ್ಟು ಅಗ್ರಿಕಲ್ಚರಲ್ ರಸ್ತೆಯಲ್ಲಿ ತ್ಯಾಜ್ಯ ರಾಶಿಯಿದೆ, ಸದಸ್ಯಳಾಗಿ ಅಲ್ಲಿಗೆ ಮುಖ ತೋರಿಸದ ಸ್ಥಿತಿ ಎಂದು ಸದಸ್ಯೆ ನಮಿತಾ ಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಯಿಸಿದ ದಿನಕರ್ ಉಳ್ಳಾಲ್ ` ತಾನೇ ಖುದ್ದು ಎಲ್ಲಾ ಸದಸ್ಯರ ಬಸ್ಸು ಟಿಕೇಟಿಗೆ ಹಣ ನೀಡಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಅನುದಾನಗಳನ್ನು ತರುವ ಎಂದರು. ವಿದ್ಯಾರಣ್ಯನಗರದಲ್ಲಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ಮೂರು ವರ್ಷದ ಸಭೆಯಲ್ಲಿ ಎಂದಿಗೂ ಪಿಡಬ್ಲ್ಯುಡಿ ಅಧಿಕಾರಿಯನ್ನು ಸಭೆಯಲ್ಲಿ ನೋಡಿಲ್ಲ ಎಂದು ಸದಸ್ಯ ಜಬ್ಬಾರ್ ಆರೋಪಿಸಿದರು.

ಉಳ್ಳಾಲ ನಗರಸಭೆಯುದ್ದಕ್ಕೂ ಹಲವು ವಾಣಿಜ್ಯ, ವಸತಿ ಸಂಕೀರ್ಣಗಳಿದ್ದರೂ ತೆರಿಗೆ ಹಣ ವಸೂಲಾತಿಯಾಗುತ್ತಿಲ್ಲ. 1 ಕೋಟಿ ರೂ. ಬಸ್ಸು ನಿಲ್ದಾಣದ ನಗರಸಭೆ ಅಂಗಡಿಗಳಲ್ಲೇ ಬಾಕಿಯಿದ್ದರೆ, ರೂ 5 ಕೋಟಿಗೂ ಹೆಚ್ಚುವರಿ ಹಣ ವಸತಿ ಸಂಕೀರ್ಣದಿಂದ ಪಾವತಿಯಾಗಲು ಬಾಕಿಯಿದೆ. ಹೀಗಿದ್ದರೆ ನಗರಸಭೆ ಬಜೆಟ್ ಆಗುವುದು ಹೇಗೆ?. ಬಡವರ ಮನೆಯಿಂದ ಮಾತ್ರ ತೆರಿಗೆ ಪಡೆಯುತ್ತೀರ, ಶ್ರೀಮಂತರಿಂದ ಪಡೆಯಲು ಹೋಗುತ್ತಿಲ್ಲ. ಇದು ದುರಾಡಳಿತ, ಸರಕಾರದ ಅನುದಾನ ಪಡೆಯದೇ ಇಲ್ಲಿ ಸಂಗ್ರಹವಾಗುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು ಎಂದು ಸದಸ್ಯ ಬಾಝಿಲ ಹೇಳಿದರು.

ಪಕ್ಷದ ಹೆಸರಲ್ಲಿ ಸರಕಾರಿ ಜಾಗದ ಕಬಳಿಸಲಾಗುತ್ತಿದೆ !

ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲ್ಕೊರೆತ ಸಂತ್ರಸ್ತರಿಗೆ ಸರ್ವೆ ನಂಬರ್ 222ರಲ್ಲಿ ಮಂಜೂರಾದ 1 ಎಕರೆ 42 ಸೆಂಟ್ಸ್ ಸ್ಥಳದಲ್ಲಿ ರೂ.50-60 ಲಕ್ಷದ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಕ್ಷೇತ್ರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಪಾನೀರು ಮುಂದಾಳತ್ವದಲ್ಲಿ ದಂಧೆ ನಡೆಯುತ್ತಿದೆ.

ಮೊಕದ್ದಮೆ ನ್ಯಾಯಾಲಯದಲ್ಲಿದೆ ಅನ್ನುತ್ತಾ ಪಕ್ಷದ ಮುಖಂಡರು ವ್ಯಾಪಾರ ಜೋರಾಗಿ ನಡೆಸುತ್ತಿದ್ದಾರೆ. ಕುಮ್ಕಿ ಹಕ್ಕುದಾರರು ತಡೆಯನ್ನು ತಂದಿದ್ದಾರೆ. ಆದರೆ ಅದನ್ನು ವೆಕೇಟ್ ಮಾಡುವ ಗೋಜಿಗೆ ನಗರಸಭೆ ಆಡಳಿತ ಹೋಗದಿರುವುದು ದುರಾದೃಷ್ಟಕರ. ತೊಕ್ಕೊಟ್ಟುವಿನಲ್ಲಿರುವ ಸೇಲ್ಸ್ ಟ್ಯಾಕ್ಸ್ ಅವರಿಗೆ ಇದ್ದಂತಹ ಸರಕಾರಿ ಭೂಮಿಯದ್ದೂ ಅದೇ ಕಥೆ. ಇತ್ತೀಚೆಗೆ ಬೆಂಗಳೂರಿನ ಸೇಲ್ಸ್ ಟ್ಯಾಕ್ಸ್ ಕಮೀಷನರ್ ಅವರಿಗೆ ಜಾಗ ಅತಿಕ್ರಮಣದ ಕುರಿತು ಬೆಂಗಳೂರಿನಲ್ಲಿ ನೀಡಿದ ದೂರಿನಂತೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಗರಸಭೆ ಸುಪರ್ದಿಗೆ ಜಾಗ ನೀಡಲು ಇಲಾಖೆ ಸಿದ್ಧ ಅನ್ನುವ ಪ್ರತಿಕ್ರಿಯೆನ್ನು ನೀಡಿದೆ. ಆದರೂ ಅದರತ್ತ ಆಡಳಿತ ಗಮನವೇ ಹರಿಸುತ್ತಿಲ್ಲ . ನಗರಸಭೆಗೆ ಸೇರಿದ ಜಾಗವನ್ನೆಲ್ಲಾ ಪಕ್ಷದ ಹೆಸರಿನಲ್ಲಿ ಮುಖಂಡರು ತಿನ್ನುತ್ತಿದ್ದಾರೆ ಅನ್ನುವ ಆರೋಪವೂ ಸಭೆಯಲ್ಲಿ ಕೇಳಿಬಂತು.

ನೂತನ ತಂತ್ರಜ್ಞಾನ ಅಳವಡಿಸಿ ಒಳಚರಂಡಿ ಯೋಜನೆ ರೂಪಿಸಲಾಗುವುದು. ಕೋಡಿ, ಕೋಟೆಪುರ ಭಾಗದಲ್ಲಿ ಎಸ್ ಟಿಪಿ ಪೂರ್ಣಗೊಂಡಿದೆ. ಸೀವೇಜ್ ಪ್ಲ್ಯಾಂಟ್ ಸಿದ್ಧಗೊಂಡ ನಂತರವೇ ಎಲ್ಲೆಡೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ನೀರಾವರಿ ಇಲಾಖೆಯ ಇಂಜಿನಿಯರ್ ರೇಣುಕಾ ಪ್ರತಿಕ್ರಿಯಿಸಿದರು. ಚುನಾವಣಾ ಕರ್ತವ್ಯ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳು ನಗರಸಭೆಯಲ್ಲಿ ಸೇವೆ ನೀಡುತ್ತಿಲ್ಲ. ಇದರಿಂದ ತೆರಿಗೆ ಸಂಗ್ರಹ ಮಾಡಲು ಸಿಬ್ಬಂದಿ ಸಾಲುತ್ತಿಲ್ಲ. ಕೋಟೆಕಾರು ಕಡಲ್ಕೊರೆತ ಸಂತ್ರಸ್ತರ ಜಾಗದ ಕಬಳಿಕೆ ಕುರಿತು ಎ.ಸಿ ಕೋರ್ಟಿನಿಂದ ಬಂದಿರುವ ತೀರ್ಮಾನದ ವಿರುದ್ಧ ಡಿ.ಸಿ ಕೋರ್ಟಿಗೆ ದೂರು ನೀಡಲಾಗಿದೆ.

ಈವರೆಗೆ ವಿಚಾರಣಗೆ ದಿನಂಕ ನಿಗದಿಯಾಗಿಲ್ಲ ಎಂದು ನಗರಸಭೆ ಕಮೀಷನರ್ ವಿದ್ಯಾ ಕಾಳೆ ಪ್ರತಿಕ್ರಿಯಿಸಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಚಿತ್ರಾಚಂದ್ರಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ ಉಪಸ್ಥಿತರಿದ್ದರು. ಉಪಾಧ್ಯಕ್ಷ ಐಯೂಬ್ ಮಂಚಿಲ ಗೈರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು