ಮಂಗಳೂರು: ಹಿಜಾಬ್ ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕೆ ಕೊಟ್ಟಿದ್ದಾರಾ? ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರಾ ಏನು ಅಂತ ವಿಚಾರ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಕರೆ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸಮಸ್ಯೆ ಹೇಳಿದಾಗ ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು ಎಂಬ ಹಿಜಾಬ್ ವಿದ್ಯಾರ್ಥಿನಿಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ವಿಸಿ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತ ಹೇಳಿದ್ದೇನೆ. ಕಾನೂನು ಪ್ರಕಾರ ಹೋರಾಟ ಮಾಡಲು ಸೂಚಿಸಿದ್ದೇನೆ.
ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕ ಮಾಡಿಲ್ಲ. ಆ ಮೇಲೆ ನಾನೇ ವಿಸಿ ಜೊತೆ ಕರೆ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಕರೆ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದೇನೆ. ಆದರೆ, ವಿದ್ಯಾರ್ಥಿನಿಯರು ಕರೆ ಸ್ವೀಕಾರ ಮಾಡಿಲ್ಲ.
ರಾಂಗ್ ನಂಬರ್ ಅಂತ ಹೇಳಿ ಕರೆ ಕಟ್ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರ ಚೀಫ್ ಸೆಕ್ರೆಟರಿ ಜೊತೆ ಮಾತನಾಡಿದ್ದೇನೆ. ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾ? ಹೇಳಿಸಿದ್ದಾ ಗೊತ್ತಿಲ್ಲ. ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ, ಧರ್ಮದ ಗೌರವ ತೆಗೆಯಬಾರದು. ಒಬ್ಬರು ಸುಳ್ಳು ಹೇಳಿದರೆ ಎಲ್ಲರ ಗೌರವ ಹಾಳಾಗುತ್ತದೆ. ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ ಎಂದರು.