ಮಂಗಳೂರು : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ಜಿಲ್ಲಾಡಳಿತ ಸ್ವಾಗತಿಸಿಕೊಂಡಿದ್ದು, ಈ ವೇಳೆ ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ ಕುಮಾರ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಗೋಕರ್ಣನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಆಡಳಿತ ವತಿಯಿಂದ ಶಾಲು, ಫಲಪುಷ್ಪ,ದೇವರ ವಿಗ್ರಹ ನೀಡಿ ರಾಜ್ಯಪಾಲರಿಗೆ ವಿಶೇಷ ಗೌರವ ಸಲ್ಲಿಸಲಾಗಿದ್ದು, ಬಳಿಕ ರಾಜ್ಯಪಾಲರು ದೇವಾಲಕ್ಕೆ ಭೇಟಿ ನೀಡಿದವರ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಹಾಗೂ ಸಹಿ ದಾಖಲಿಸಿದ್ದಾರೆ.
ಇನ್ನು ಥಾವರ್ ಚಂದ್ ಗೆಹ್ಲೋಟ್ ಅವರು ಸಂಜೆ ಮೂಡಬಿದರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಲಿದ್ದು, ಕಾರ್ಕಳ ಉತ್ಸವ ಕಾರ್ಯಕಮದಲ್ಲೂ ಭಾಗಿಯಾಗುವ ಸಾಧ್ಯತೆಯಿದೆ.