ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಕೊರಗಜ್ಜನ ಗುಡಿಗಾಗಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ತೀವ್ರ ತಿಕ್ಕಾಟ ನಡೆಯುತ್ತಿದೆ. ಈ ವಿಚಾರ ಈಗ ಜಿಲ್ಲಾಧಿಕಾರಿ ಎದುರಿಗೆ ಬಂದಿದ್ದು, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.
ಈ ಹಿಂದೆ ಬಾಡಾರಿನ ಕೊರಗಲ್ಲಿನಲ್ಲಿ ಆರಾಧಿಸಲ್ಪಡುತ್ತಿರುವ ಕೊರಗಜ್ಜ ದೈವದ ಪೂಜೆಗಾಗಿ ಸ್ಥಳೀಯರು ಸಾರ್ವಜನಿಕ ಸಮಿತಿ ರಚಿಸಿದ್ದರು. ಈ ಸಮಿತಿಗೆ ಸ್ಥಳೀಯ ಕುಟುಂಬವೊಂದು ವಿರೋಧ ವ್ಯಕ್ತಪಡಿಸಿತ್ತು. ಇದೇ ವಿಚಾರದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ನಡುವೆ ಗಲಾಟೆ ತಾರಕಕ್ಕೇರಿತ್ತು. ಅಲ್ಲದೆ ಕಳೆದ ಎಪ್ರಿಲ್ ನಲ್ಲಿ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಲಾಗಿತ್ತು. ಬಳಿಕ ಮುಂದಿನ ಕ್ರಮದವರೆಗೆ ಕೊರಗಜ್ಜನ ಗುಡಿಯ ವಿಚಾರಕ್ಕೆ ಯಾರೂ ಹಸ್ತಕ್ಷೇಪ ಮಾಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಇದೀಗ ಬುಧವಾರ ಬಾಡಾರು ಕೊರಗಲ್ಲು ಸ್ಥಳಕ್ಕೆ ಡಿಸಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದಾರೆ. ಬಳಿಕ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ
ಜಿಲ್ಲಾಧಿಕಾರಿ, ಎಸ್ಪಿ ರಿಷ್ಯಂತ್ ಸಿಬಿ ಅವರೊಂದಿಗೆ ಸಭೆ ನಡೆಸುತ್ತಿದ್ದಾರೆ. ಎರಡೂ ಕಡೆಯವರು ಸಭೆಯಲ್ಲಿ ಪಾಲ್ಗೊಂಡಿದ್ದರು.