ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಅಧೀನಕ್ಕೊಳಪಡುವ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಕೊಡವ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿ ಅಭ್ಯಸಿಸಲು ಅವಕಾಶ ಲಭ್ಯವಾಗಿದೆ. ಇದರಿಂದಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಯತ್ನಕ್ಕೆ ಫಲ ದೊರಕಿದಂತಾಗಿದೆ.
ಆ. 5ರಂದು ನಡೆದ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ವಿಚಾರಕ್ಕೆ ಅನುಮೋದನೆ ದೊರೆತಿದೆ. ಮುಂದಿನ ದಿನದಲ್ಲಿ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿಯೂ ಆರಂಭಗೊಳ್ಳುವ ನಿರೀಕ್ಷೆ ಇದೆ. ಪದವಿ ಕಾಲೇಜುಗಳಲ್ಲಿ ಕೊಡವ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಯತ್ನಕ್ಕೆ ಫಲ ಸಿಕ್ಕಿದೆ.