News Karnataka Kannada
Monday, April 29 2024
ಮಂಗಳೂರು

ಅಗ್ನಿಯಲ್ಲಿ‌ ಲೀನವಾಯಿತು ಡಾ.ಬಿ.ಯಶೋವರ್ಮ ಅವರ ಪಾರ್ಥೀವ ಶರೀರ‌

Yashovarma
Photo Credit :

ಬೆಳ್ತಂಗಡಿ: ಸರಳತೆ, ಪ್ರೀತಿ, ವಿನಯವಂತಿಕೆ, ಏಕಾಗೃತೆ, ಜವಾಬ್ದಾರಿಗಳ ಸಮ್ಮಿಳಿತವಾಗಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ.ಯಶೋವರ್ಮ ಅವರ ಪಾರ್ಥೀವ ಶರೀರ‌ ಮಂಗಳವಾರ ಸಂಜೆ ಅಗ್ನಿಯಲ್ಲಿ‌ ಲೀನವಾಯಿತು.

ಉಜಿರೆ ಸನಿಹದ ನೀರಚಿಲುಮೆ ಎಂಬಲ್ಲಿರುವ ಮೃತರ ನಿವಾಸದ ಬಳಿ ಪುತ್ರರಾದ ಪೂರಣ್ ವರ್ಮ ಹಾಗೂ ಕೇಯೂರ ವರ್ಮ ಅಗ್ನಿಸ್ಪರ್ಶ ಮಾಡಿದರು. ಜೈನ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿತು.

ಯಶೋವರ್ಮ ಅವರ ಕುಟುಂಬದವರು, ಹೆಗ್ಗಡೆ ಕುಟುಂಬದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಚಾರ್ಮಾಡಿಯಿಂದ ಉಜಿರೆ ಎಸ್.ಡಿ.ಎಂ.ಕಾಲೇಜಿನ ತನಕ ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು.

ಎಸ್‌ಡಿಎಂ ಆಂಬುಲೆನ್ಸ್‌ನಲ್ಲಿ ಆಗಮಿಸಿದ ಪಾರ್ಥಿವ ಶರೀರವನ್ನು ಶಾಸಕ ಹರೀಶ್ ಪೂಂಜ ಅವರು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬರಮಾಡಿಕೊಂಡರು. ಘಾಟ್ ಇಳಿಯುತ್ತಿದ್ದಂತೆ ಚಾರ್ಮಾಡಿಯಲ್ಲಿ ಶರೀರವನ್ನು ಮುಕ್ತ ವೀಕ್ಷಣೆಗೆ ಅನುಕೂಲವಾಗುವ ತೆರೆದ ಆಂಬುಲೆನ್ಸ್ ವಾಹನಕ್ಕೆ ವರ್ಗಾಯಿಸಲಾಯಿತು. ಮೃತದೇಹವನ್ನು ಹೊತ್ತು ತರುತ್ತಿದ್ದ ವಾಹನದ ಮುಂದೆ ಡಿ. ಸುರೇಂದ್ರ ಕುಮಾರ್ ಇದ್ದರು.

ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಬಂದಿದ್ದ ಡಾ. ಬಿ ಯಶೋವರ್ಮ ಅವರ ಅಭಿಮಾನಿ ಬಳಗದವರ ನೂರಾರು ವಾಹನಗಳು ಮೆರವಣಿಗೆ ಮೂಲಕ ಉಜಿರೆಗೆ ಸಾಗಿ ಬಂದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ‌ ಜನ ಜಮಾಯಿಸಿ ಅಗಲಿದ ಶಿಕ್ಷಣ ತಜ್ಞನ ಗುಣಗಾನ ಮಾಡುತ್ತಾ ಕಂಬನಿ ಮಿಡಿದರು.

ಶಾಸಕ ಹರೀಶ್ ಪೂಂಜ, ಡಿ. ಹರ್ಷೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಭೋಜೇ ಗೌಡ, ಎಸ್.ಕೆ.ಡಿ.ಆರ್.ಡಿ.ಪಿ.ಯ ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್.ಎಚ್.ಮಂಜುನಾಥ್, ಜನ ಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯಸ್, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಹಂಪಿ ವಿವಿಯ ನಿವೃತ್ತ ಕುಲಪತಿ ಡಾ.ಚಿನ್ನಪ್ಪ ಗೌಡ, ಮಂಗಳೂರು ವಿವಿ ಉಪ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ, ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಮಾಧವ ಭಟ್, ಡಾ.ಎ.ವಿ.ನಾರಾಯಣ ಪುತ್ತೂರು,
ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ವಿವಿಧ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಡಿ.ಯದುಪತಿ ಗೌಡ, ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಕಿಶೋರ್ ಕುಮಾರ್, ನಿಟ್ಟೆ ವಿವಿ ಸಹ ಕುಲಾಧಿಪತಿ ಎಂ.ಎಸ್.ಮೂಡಿತ್ತಾಯ, ಮಂಗಳೂರು ವಿ.ವಿ.ಮೌಲ್ಯಮಾಪನ ವಿಭಾಗ ರಿಜಿಸ್ಟ್ರಾರ್ ಪಿ.ಎಲ್.ಧರ್ಮ, ಮಾಜಿ ಕುಲಪತಿ ಡಾ.ವಿವೇಕ್ ರೈ, ಮೂಡ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ರೋಟರಿ ಜಿಲ್ಲಾಧ್ಯಕ್ಷ ಪ್ರಕಾಶ್ ಕಾರಂತ್, ಎಸ್.ಡಿ.ಎಂ. ಮಂಗಳಜ್ಯೋತಿ ಕಾರ್ಯದರ್ಶಿ ಪ್ರೊ.ರಾಜೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವಿನಯ್ ಹೆಗ್ಡೆ, ಮಾಜಿ ವಿಧಾಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ಗಂಗಾಧರ ಗೌಡ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡಾ, ಮೋಹನ್ ಕುಮಾರ್, ರಾಜೇಶ್ ಪೈ, ಎಸ್.ಡಿ.ಎಂ.ಅಧ್ಯಾಪಕ, ಸಿಬ್ಬಂದಿ, ವಿದ್ಯಾರ್ಥಿ ಸಮೂಹ, ಎನ್.ಸಿ.ಸಿ.,ಸ್ಕೌಟ್,ಗೈಡ್ಸ್, ಉಜಿರೆಯ ನಾಗರಿಕರು ಅಂತಿಮ ನಮನ‌ ಸಲ್ಲಿಸಿದರು.

ಮಂಗಳವಾರ ಸಂಜೆ 3.15ರ ಸುಮಾರಿಗೆ ಚಾರ್ಮಾಡಿಗೆ ಆಗಮಿಸಿದ ಪಾರ್ಥಿವ ಶರೀರವನ್ನು ಕಕ್ಕಿಂಜೆ, ಮುಂಡಾಜೆ, ಸೋಮಂತಡ್ಕ, ನಿಡಿಗಲ್ ಮೂಲಕ ಉಜಿರೆ ವೃತ್ತದ ತನಕ ವಾಹನ ಜಾಥಾದಲ್ಲಿ ತರಲಾಯಿತು. ಅಲ್ಲಿಂದ ಉಜಿರೆ ಎಸ್ ಡಿಎಂ ಕಾಲೇಜಿನ ತನಕ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.

ಮೆರವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗ,ಉಜಿರೆ ಹಾಗೂ ತಾಲೂಕಿನ ವರ್ತಕರು,ತಾಲೂಕು ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು, ಗಣ್ಯರು ಹಾಗೂ ತಾಲೂಕಿನ ಇತರ ಸಂಘ ಸಂಸ್ಥೆಗಳ ಸದಸ್ಯರು ಪಾರ್ಥಿವ ಶರೀರಕ್ಕೆ ಮೆರವಣಿಗೆಯಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಅಂತಿಮ ದರ್ಶನ ಪಡೆದರು.

ವ್ಯಾಪಾರ ವಹಿವಾಟು ಸ್ಥಗಿತ
ಮೃತರ ಗೌರವಾರ್ಥ ಉಜಿರೆ ಪೇಟೆಯಲ್ಲಿ ಮಂಗಳವಾರ ಮಧ್ಯಾಹ್ನ 1ಗಂಟೆ ಬಳಿಕ ವ್ಯಾಪಾರ ವಹಿವಾಟನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಲಾಗಿತ್ತು. ಎಲ್ಲಾ ಅಂಗಡಿ-ಮುಂಗಟ್ಟುಗಳ ಮಂದಿ ಅಂಗಡಿಗಳನ್ನು ಮುಚ್ಚಿ ಶೋಕಾಚರಣೆ ನಡೆಸಿದರು. ರಿಕ್ಷಾ ಸಹಿತ ಇತರ ಬಾಡಿಗೆ ವಾಹನಗಳು ಕೂಡ ರಸ್ತೆಗೆ ಇಳಿಯಲಿಲ್ಲ. ಉಜಿರೆ ಪೇಟೆಯಲ್ಲಿ ಸಂಪೂರ್ಣ ಶೋಕದ ವಾತಾವರಣ ನೆಲೆಸಿತ್ತು.

ಹಳೆ ವಿದ್ಯಾರ್ಥಿಗಳು ಭಾಗಿ   

ಮೆರವಣಿಗೆಯಲ್ಲಿ ರಾಜ್ಯದ ನಾನಾ ಕಡೆ ಇರುವ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಅಗಲಿದ ಗುರುಗಳ ದರ್ಶನ ಪಡೆದರು.

ಡಾ| ಹೇಮಾವತಿ‌ ಹೆಗ್ಗಡೆಯವರು ಒಂದೆಡೆ ಸಹೋದರ‌ ಯಶನ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ. ಯಶ ಅಂದರೆ ನನಗೆ ತುಂಬಾ ಪ್ರೀತಿ, ಚಿಕ್ಕಂದಿನಿಂದಲೂ ಅವನ‌ ಒಡನಾಟ ನಂಗೆ ಹೆಚ್ಚು ಆತ್ಮೀಯವಾದದ್ದು. ಇನ್ನೊಬ್ಬರ ಉನ್ನತಿಗಾಗಿ ತುಡಿಯುವ ಅವನ ಮನಸ್ಸು, ಎಲ್ಲರನ್ನೂ ಸಮಾನವಾಗಿ ಕಾಣುತ್ತಿತ್ತು.ಆತ ಒಬ್ಬ ಉತ್ತಮ ಗೃಹಸ್ಥ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಯಾವತ್ತಿಗೂ ತನ್ನ ಸರಳತೆಯನ್ನು ಉಳಿಸಿಕೊಂಡಿದ್ದ . ತನ್ನ ಹೆಂಡತಿ ಮಕ್ಕಳ ಪಾಲಿಗೆ ಯಾವತ್ತೂ‌ ಕೇರ್‌ಟೇಕರ್. ಮನೆಯವರಿಗೆ ಮಾತ್ರವಲ್ಲದೆ ತನ್ನ ಬಂಧುಗಳಿಗೂ ಆಪ್ತ.

ಇನ್ನು ಪ್ರಾಚಾರ್ಯನಾಗಿ ಅವನು ಎಲ್ಲರಿಗೂ ಮಾದರಿ. ಅವನು ಯಾವತ್ತೂ ಕಾಲೇಜಿನ ಮುಂದೆ ಬಂದಾಗ ಹೇಳುವುದಿತ್ತು. ಒಬ್ಬ ಬೆಳೆದ ಮಗನನ್ನು ನೋಡುವಾಗ ಹೇಗೆ ಆನಂದ ಆಗುತ್ತದೋ, ಕಾಲೇಜನ್ನು ನೋಡುವಾಗಲೂ ಅಷ್ಟೇ ಖುಷಿಯಾಗುತ್ತದೆ. ಇದು ಅವನಿಗೆ ಕಾಲೇಜಿನ ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ. ಆದುದರಿಂದಲೇ ಕಾಲೇಜು ಇವತ್ತು ಉತ್ತುಂಗಕ್ಕೇರಿದೆ.

ಇವಿಷ್ಟೇ ಅಲ್ಲದೆ ಕೃಷಿಯಲ್ಲಿಯೂ ಹೆಚ್ಚು ಆಸಕ್ತಿ ಹೊಂದಿರುವ ಯಶ ತನ್ನ ಮನೆಯ ಸುತ್ತ ಕೃಷಿ ಮಾಡಿ, ತನ್ನ ದಿನಚರಿಯಲ್ಲಿ ಅದಕ್ಕೂ ಒಂದಷ್ಟು ಹೊತ್ತು ಕೊಟ್ಟಿರುವುದು ನಿಜಕ್ಕೂ ಅವನೊಬ್ಬ ಕಂಪ್ಲೀಟ್ ವ್ಯಕ್ತಿ ಅನ್ನೋದನ್ನ ನಮಗೆಲ್ಲಾ ಹೇಳುತ್ತದೆ. ಯಶನ ಸಾಧನೆಯ ಪ್ರತಿಯೊಂದು ಹೆಜ್ಜೆಯೂ ನನಗೆ ಹೆಮ್ಮೆ ತಂದಿದೆ.

ಎಸ್.ಡಿ.ಎಂ.ಸಿ.ಯ ನಿವೃತ್ತ ಪ್ರಬಂಧಕ ದಿl ಟಿ.ಆರ್.ನಾವಡ ಯಶೋವರ್ಮ ಅವರನ್ನು ಆಧುನಿಕ‌ ಬ್ರಹ್ಮ, ಸಜ್ಜನ, ಸ್ನೇಹ ಜೀವಿ, ಪರೋಪಕಾರಿ, ಮುಂದಾಲೋಚನೆಯುಳ್ಳ ಕ್ರೀಯಾಶೀಲ, ಮೃದು ಹೃದಯದ ವ್ಯಕ್ತಿ ಎನ್ನುತ್ತಿದ್ದರು.

A great teacher, forever a student ಎಂಬ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ವ್ಯಕ್ತಿ ಇನ್ಮು ನೆನಪು ಮಾತ್ರ.

ಶಾಸಕ ಹರೀಶ ಪೂಂಜ ಚಾರ್ಮಾಡಿಯಿಂದ ಉಜಿರೆ ತನಕದ ಮೆರವಣಿಗೆ, ಅಂತಿಮ ದರ್ಶನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ, ಸಂಘಟನಾತ್ಮಕವಾಗಿ ಆಗುವಂತೆ ನೋಡಿಕೊಂಡರು. ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು