News Karnataka Kannada
Saturday, May 04 2024
ಮಂಗಳೂರು

ಪೊಲೀಸ್​​ ತಪಾಸಣೆ ವೇಳೆ ಗೂಡ್ಸ್ ಗಾಡಿ ಡಿಕ್ಕಿ; ಪತ್ನಿಯ ಎದುರೇ ಯುವಕನ ಸಾವು: ಪೊಲೀಸ್ ಚೆಕ್ ಪಾಯಿಂಟ್ ಧ್ವಂಸ

Rama Kunja Accident 29 6 21
Photo Credit :

ಮಂಗಳೂರು : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಪೊಲೀಸ್‌ ಚೆಕ್‌ ಪಾಯಿಂಟ್‌ನಲ್ಲಿ ಪೊಲೀಸರಿಗೆ ದಾಖಲೆ ತೋರಿಸಿ ತನ್ನ ದ್ವಿಚಕ್ರ ವಾಹನದತ್ತ ಹೋಗುತ್ತಿದ್ದ ಸವಾರನಿಗೆ ಟೆಂಪೊ ಡಿಕ್ಕಿಯಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಿತ ಯುವಕರ ಗುಂಪೊಂದು ಸ್ಥಳದಲ್ಲಿ ಜಮಾಯಿಸಿ ಪೊಲೀಸರಿಗೆ ಹಲ್ಲೆ ನಡೆಸಲು ಯತ್ನಿಸಿ ಬ್ಯಾರಿಕೇಡ್‌ಗಳನ್ನು ಎಸೆದು ಶೆಡ್‌ ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಮಾಡಿ ಕಿಡಿಗೇಡಿಗಳ ಗುಂಪು ಚದುರಿಸಿದ್ದಾರೆ.
ಕೊೖಲ ಗ್ರಾಮದ ಆತೂರು ಬೈಲು ನಿವಾಸಿ ಪುತ್ತುಮೋನು ಎಂಬವರ ಪುತ್ರ ಎ.ಪಿ.ಹ್ಯಾರಿಸ್‌ (35) ಮೃತರು. ಹ್ಯಾರಿಸ್‌ ಅವರು ಪತ್ನಿ ನಾಸಿರಾರೊಂದಿಗೆ ದ್ವಿಚಕ್ರ ವಾಹನದಲ್ಲಿ ರಾಮಕುಂಜದಿಂದ ಆತೂರು ಕಡೆಗೆ ಬರುತ್ತಿದ್ದ ವೇಳೆ ಆತೂರಿನಲ್ಲಿ ವಾಹನಗಳ ದಾಖಲೆ ಪರಿಶೀಲನೆಯಲ್ಲಿ ನಿರತರಾಗಿದ್ದ ಕಡಬ ಎಸ್‌.ಐ. ರುಕ್ಮ ನಾಯ್ಕ್‌ ವಾಹನ ನಿಲ್ಲಿಸಿದ್ದಾರೆ. ದಾಖಲೆ ತೋರಿಸಿ ಮತ್ತೆ ತನ್ನ ದ್ವಿಚಕ್ರ ವಾಹನದ ಕಡೆಗೆ ಬರಲು ರಸ್ತೆ ದಾಟುತ್ತಿದ್ದಾಗ ಹ್ಯಾರಿಸ್‌ ಅವರಿಗೆ ಟಾಟಾ ಏಸ್‌ ವಾಹನವೊಂದು ಡಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಎಸ್‌ಐ ರುಕ್ಮ ನಾಯ್ಕ್ ಅವರು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟೊತ್ತಿಗಾಗಲೇ ಹ್ಯಾರಿಸ್‌ ಮೃತಪಟ್ಟಿದ್ದರು.
ಘಟನೆ ಸುದ್ದಿಯಾಗುತ್ತಿದ್ದಂತೆಯೇ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು. ಪೊಲೀಸರೊಂದಿಗೆ ತಗಾದೆ ನಡೆಸಿ ಇಲ್ಲಿ ಚೆಕ್‌ ಪಾಯಿಂಟ್‌ ಇರಬಾರದು. ಇವತ್ತಿನ ಘಟನೆಗೆ ಪೊಲೀಸರೇ ಹೊಣೆ ಎಂದು ಆರೋಪಿಸಿ ಸ್ಥಳದಲ್ಲಿದ್ದ ಎಸ್‌ಐ ರುಕ್ಮ ನಾಯ್ಕ್, ಪೊಲೀಸ್‌ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಚೆಕ್‌ ಪಾಯಿಂಟ್‌ನಲ್ಲಿ ಪೊಲೀಸರಿಗೆ ತಂಗಲು ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ ಹಾಗೂ ರಸ್ತೆಗೆ ಅಡ್ಡಲಾಗಿ ಇಡಲಾಗಿದ್ದ ಬ್ಯಾರಿಕೇಡ್‌ನ್ನು ಧ್ವಂಸಗೊಳಿದರು. ಘಟನೆಯ ಫೋಟೋ ತೆಗೆಯುತ್ತಿದ್ದ ಮಾಧ್ಯಮ ಪ್ರತಿನಿಧಿಗೂ ಕಿಡಿಗೇಡಿಗಳು ಧಮ್ಕಿ ಹಾಕಿ ಫೋಟೋ ತೆಗೆಯದಂತೆ ಅಡ್ಡಿಪಡಿಸಿದರು.  ಬಳಿಕ ನೂರಾರು ಮಂದಿ ರಸ್ತೆಯಲ್ಲಿ ಕುಳಿತು ವಾಹನ ಸಂಚಾರವನ್ನು ತಡೆದು ಧರಣಿ ನಡೆಸಲು ಮುಂದಾದರು. ಅಷ್ಟೊತ್ತಿಗಾಗಲೇ ಸ್ಥಳಕ್ಕೆ ಕಡಬ, ಉಪ್ಪಿನಂಗಡಿ, ಪುತ್ತೂರಿನ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಯಿತು. ಆಕ್ರೋಶಿತ ಕಿಡಿಗೇಡಿಗಳ ಗುಂಪು ಪೊಲೀಸರ ಮೇಲೂ ಹಲ್ಲೆಗೆ ಮುಂದಾಯಿತು.
ಅಪಘಾತದಲ್ಲಿ ಮೃತಪಟ್ಟ ಹ್ಯಾರಿಸ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ವಾಪಸ್ಸಾಗಿದ್ದರು. ಮಂಗಳವಾರ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳರಿಸಿಕೊಂಡು ಆತೂರು ಕಡೆ ಬರುತ್ತಿದ್ದರು. ಪೊಲೀಸರು ವಾಹನ ತಡೆದು ದಾಖಲೆ ಕೇಳಿದಾಗ ಪತ್ನಿಯನ್ನು ದ್ವಿಚಕ್ರ ವಾಹನದ ಬಳಿಯೇ ಬಿಟ್ಟು ಪೊಲೀಸರಿಗೆ ದಾಖಲೆ ತೋರಿಸಿ ರಸ್ತೆ ದಾಟಿ ಇನ್ನೇನು ತನ್ನ ವಾಹನದ ಹತ್ತಿರ ಮುಟ್ಟಬೇಕು ಎನ್ನುವಷ್ಟರಲ್ಲಿ ಟೆಂಪೋ ಅವರಿಗೆ ಡಿಕ್ಕಿ ಹೊಡೆಯಿತು. ನೋಡನೋಡುತ್ತಿದ್ದಂತೆಯೇ ಗಂಭೀರ ಗಾಯವಾಗಿ ನೆಲಕ್ಕುರುಳಿ ಒದ್ದಾಡಿ ಪತ್ನಿಯ ಎದುರೇ ಪ್ರಾಣ ಬಿಟ್ಟಿರುವುದು ಮನಕಲಕುವಂತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು