News Karnataka Kannada
Friday, May 10 2024
ಕರಾವಳಿ

ನುಡಿಸಿರಿಯ ಐಸಿರಿಯಲ್ಲಿ ಹಸಿರ ಕೃಷಿಸಿರಿ

Photo Credit :

ನುಡಿಸಿರಿಯ ಐಸಿರಿಯಲ್ಲಿ ಹಸಿರ ಕೃಷಿಸಿರಿ

ಮೂಡುಬಿದಿರೆ: ಸಾಹಿತ್ಯ ಸಮ್ಮೇಳನವು ಕೇವಲ ಸಾಹಿತ್ಯಿಕ ವಿದ್ಯಮಾನಗಳಿಗೆ ಮಾತ್ರ ಸೀಮಿತವಾಗಿರದೆ ಸರ್ವರ ಹಿತವನ್ನು ಬಯಸುವಲ್ಲಿನ ಪ್ರೇರಕಾಂಶವಾಗಿ ಹೊರಹೊಮ್ಮಬೇಕು. ನಮ್ಮ ಬದುಕಿನ ಆಧಾರ ಸ್ತಂಭದಂತಿರುವ ಪರಿಸರ, ಕೃಷಿ, ಆಹಾರವು ಮಾನವ ಲೋಕದ ಅಸ್ಮಿತೆಯ ಪ್ರತೀಕ. ಮಾನವ ಸಮಾಜವನ್ನು ಬೆಳೆಸುವಂತಹ ಕೃಷಿಯಿಂದ ವಿಮುಖವಾಗುವಂತಹ ಬದುಕನ್ನು ಕಲ್ಪಿಸುವುದೇ ಅಸಂಭವ.

ಆದ್ದರಿಂದ ನಾಡು ನುಡಿ ಸಂಬಂಧಿತ ಸಮ್ಮೇಳನಗಳು ನಾಡು ನುಡಿಗೆ ಹಾಗೂ ವಿಶೇಷವಾಗಿ ನಾಡಿಗೆ ಅನ್ನದಾತರಾಗಿರುವ ರೈತರಿಗೆ ಆತ್ಮವಿಶ್ವಾಸವನ್ನು ನೀಡುವ ಜೊತೆಗೆ ನಮ್ಮ ಮಣ್ಣಿನ ನೆಲದ ಶ್ರೀಮಂತಿಕೆಯ ಕುರಿತಾದ ಸ್ಫೂರ್ತಿ ಜನತೆಗೆ ಯೋಗ್ಯ ಸಂದೇಶ ನೀಡುವಲ್ಲಿ ಸಧೃಡವಾಗಬೇಕೆನ್ನುವುದು ಸಂಸ್ಕೃತಿ ಹಾಗೂ ಪ್ರಯೋಗಶೀಲ, ಸೃಜನಶೀಲತೆಯ ಶಿಕ್ಷಣಕ್ಕೆ ಹೆಸರಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವರ ಹೆಬ್ಬಯಕೆ. ಹಾಗಾಗಿಯೇ ಕಳೆದ 15 ವರ್ಷಗಳಿಂದ ಅವರು ನಡೆಸಿಕೊಂಡು ಬರುತ್ತಿರುವ ಮಾದರಿ ಸಮ್ಮೇಳನ ನುಡಿಸಿರಿಯಲ್ಲಿ ಕೃಷಿಸಿರಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ನೂರಾರು ಎಕರೆ ವಿಸ್ತರಿಸಿರುವ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದ ವಿದ್ಯಾಗಿರಿಯ ಮೂರು ಎಕರೆ ಸ್ಥಳದಲ್ಲಿ ಕೃಷಿ ತರಕಾರಿ ಬೆಳೆಗಳ ಹೊಸ ಲೋಕವನ್ನೇ ಸೃಷ್ಠಿಸಿದ್ದಾರೆ.

ಎರಡು ಬಗೆಯ ಪಡುವಳ ಕಾಯಿ, ನಾಲ್ಕು ಬಗೆಯ ಸೋರೆ ಕಾಯಿ, ಆರು ಬಗೆಯ ಕುಂಬಳ ಕಾಯಿ, ಮೂರು ರೀತಿಯ ಬೆಂಡೆ, ಐದು ಬಗೆಯ ತೊಂಡೆ, ನಾಲ್ಕು ವಿಧದ ಅಳಸಂಡೆ, ಹೀರೇ ಕಾಯಿ, ನಾಲ್ಕು ಬಗೆಯ ಹಾಗಲ ಕಾಯಿ, ಆರು ವಿಧದ ಸೌತೆ, ಎಂಟು ವಿಧದ ಬದನೆ, ಏಳು ಬಗೆಯ ಮೆಣಸು, ಮೂರು ಬಗೆಯ ಜೋಳ, ಮೂರು ಬಗೆಯ ಚೀನಿ ಕಾಯಿ, ಪಡುವಲ, 2ವಿಧದ ಅನಾನಸು, 2 ರೀತಿಯ ಸೂರ್ಯಕಾಂತಿ, ಕಾಲಿಫ್ಲವರ್, ಎರಡು ರೀತಿಯ ಕಲ್ಲಂಗಡಿ, ಈ ಭಾಗದಲ್ಲಿ ಬೆಳೆಯಲಾಗದು ಎಂದ ಈರುಳ್ಳಿ ಜತೆಗೆ ಚೆಂಡು ಹೂವುಗಳ ವೈವಿಧ್ಯ, ವಿದೇಶೀ ಆಹಾರ ಸಸ್ಯಗಳಾದ ಲೆಟ್ಸ್, ಬ್ರೊಕೊಲಿ, ಇನ್ನಷ್ಟು, ಮತ್ತಷ್ಟು 90ಕ್ಕೂ ಮಿಕ್ಕಿದ ತರಕಾರಿ, ಹಣ್ಣು ಹಂಪಲುಗಳೆಲ್ಲವೂ ಬೆಳೆದು ನಿಂತಿವೆ.
ಕೃಷಿ, ಕೃಷಿಕರು, ಸಂಸ್ಕøತಿಯ ಬಗ್ಗೆ ಪೇಟೆಯಲ್ಲಿರುವವರಿಗೆ ಇಲ್ಲಿನ ಕೃಷಿಲೋಕ ಹೊಸ ಸಾಧ್ಯತೆಗಳನ್ನೇ ತೆರೆದಿಟ್ಟಿದೆ. ತರಕಾರಿಗಳೆಲ್ಲವೂ ಬಳ್ಳಿಗೆ ಭಾರವೆಂಬಂತೆ ಸಂತಸದ ಹೂನಗೆಯೊಂದಿಗೆ ಬಾಗಿ, ಬೀಗಿ ತೂಗುತ್ತಿವೆ. 2013ರಲ್ಲಿ ವಿಶ್ವ ನುಡಿಸಿರಿ ವಿರಾಸತ್ ನಡೆಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯಮಟ್ಟದ ಕೃಷಿ ಮೇಳದೊಂದಿಗೆ ಕೃಷಿಸಿರಿ ನಡೆಸಿದ್ದ ಡಾ. ಆಳ್ವರು ಬಳಿಕ ಇಲ್ಲಿ ಭತ್ತ ಬೆಳೆದಿದ್ದಾರೆ. ಕಂಬಳ ನಡೆಸಿದ್ದಾರೆ. ನಿರಂತರ ಕೃಷಿ ಸಿರಿಯ ಮೂಲಕ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದ 6 ಎಕರೆ ಸ್ಥಳದಲ್ಲಿ ನಿರಂತರ ನುಡಿಸಿರಿ ಜತೆಗೆ ಕೃಷಿ ಸಂಸ್ಕøತಿಯನ್ನು ಪರಿಚಯಿಸುವ ಪ್ರಯತ್ನ ನಡೆಸಿದ್ದಾರೆ.
ಕೃಷಿಕರ ಬದುಕು ಕೃಷಿ ಸಂಸ್ಕøತಿಯ ಬಗ್ಗೆ ತಿಳಿದುಕೊಳ್ಳಬೇಕಾದವರು, ಮುಂದಿನ ಪೀಳಿಗೆಗೆ ಆಹಾರ ಸಂಸ್ಕೃತಿಯ ಪರಿಚಯ ನೀಡ ಬಯಸುವವರು ಈ ಕೃಷಿ ಆವರಣದ ಬದುಕನ್ನು ಆಸ್ವಾದಿಸಲೇಬೇಕಾದದ್ದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಹೌದು. ಹಸಿರ ಲೋಕದ ಕೃಷಿಯನ್ನು ವಿನೂತನವಾಗಿ ಪರಿಚಯಿಸುವಲ್ಲಿ ಈ ಬಾರಿಯ ಕೃಷಿಸಿರಿಯು ಸಜ್ಜಾಗಿ ನಿಂತಿದ್ದು ಕೃಷಿಕರನ್ನು ಕೈಬೀಸಿ ಕರೆಯುತ್ತಿದೆ. ಆಳ್ವಾಸ್ ಮಾದರಿ ಕೃಷಿಲೋಕಕ್ಕೆ ಹೆಸರಾಗಲಿದೆ.

ಈ ಬಾರಿ ಕೃಷಿಸಿರಿಯಲ್ಲಿ: ನುಡಿಸಿರಿಗೆ ಪೂರಕವಾಗಿ ನ15ರಂದು ಸಂಜೆ 5ಕ್ಕೆ ಕೃಷಿಸಿರಿಯನ್ನು ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಉದ್ಘಾಟಿಸುತ್ತಿದ್ದಾರೆ. ಪುಷ್ಪ ಪ್ರದರ್ಶನ, ತರಕಾರಿ ಹಣ್ಣುಗಳ ಕಲಾಕೃತಿ ಪ್ರದರ್ಶನ, 44 ತಳಿಗಳ ಬಿದಿರು ಸಸಿಗಳು, 40 ತಳಿಗಳ ಬಿದಿರುಗಳು, ಮೂರು ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿದರ್ಶನ,250 ಮಿಕ್ಕಿದ ಕೃಷಿ ಮಳಿಗೆಗಳ ಮೂಲಕ ನರ್ಸರಿ, ಕೃಷಿ ಉಪಕರಣಗಳ ಮಾರಾಟ, ಪ್ರದರ್ಶನ,ನ್ಯೂಝಿಲ್ಯಾಂಡ್ ಮೂಲದ ಆಹಾರ ಸಸ್ಯಗಳ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪುಗಳ ಪ್ರದರ್ಶನ, ಕೃಷಿ ಸಂಬಂಧೀ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, ಬೆಳಗ್ಗಿನಿಂದ ತಡರಾತ್ರಿವರೆಗೂ ತುಳು ಕನ್ನಡ ಸಾಂಸ್ಕøತಿಕ ಕಾರ್ಯಕ್ರಮ ಈ ಬಾರಿ ಕೃಷಿಸಿರಿಯ ವಿಶೇಷತೆ.

 

 

 

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು