News Karnataka Kannada
Friday, May 03 2024
ಮಂಗಳೂರು

ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ

Fishermen Honnavara 7 7 21
Photo Credit :

ಕಾರವಾರ, ; ಹೊನ್ನಾವರದಲ್ಲಿನ ಬಂದರು ನಿರ್ಮಾಣ ಕಾಮಗಾರಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದಿಂದ ಮುಂದುವರಿದಿರುವ ಮೀನುಗಾರರ ನಿರ್ಲಕ್ಷ್ಯ ಧೋರಣೆ ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆಯೇ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಪ್ರದೇಶದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ವಾಣಿಜ್ಯ ಬಂದರಿಗೆ ಮೀನುಗಾರರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಸುಮಾರು 93 ಎಕರೆ ಪ್ರದೇಶದಲ್ಲಿ 650 ಕೋಟಿ ವೆಚ್ಚದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.
ವಾಣಿಜ್ಯ ಬಂದರು ನಿರ್ಮಾಣವಾದರೆ ಶರಾವತಿ ಟೊಂಕಾ ಪ್ರದೇಶದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಲಿದೆ. ಮೀನುಗಾರಿಕೆಯನ್ನೇ ನಂಬಿಕೊಂಡಿರುವ ನೂರಾರು ಕುಟುಂಬ ಬೀದಿಗೆ ಬೀಳಲಿದೆ ಎಂದು ಮೀನುಗಾರರು ಈ ಕಾಮಗಾರಿ ವಿರೋಧಿಸುತ್ತಾ, ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೆಲ ದಿನದ ಹಿಂದೆ ಬಂದರು ಕಾಮಗಾರಿಗಾಗಿ ಮನೆಗಳ ತೆರವಿಗೆ ಅಧಿಕಾರಿಗಳು ಮುಂದಾದಾಗ ಮೀನುಗಾರ ಯುವಕರು ಸಮುದ್ರಕ್ಕೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ, ಪ್ರತಿಭಟನೆ ಚುರುಕುಗೊಂಡು ಇಡೀ ರಾಜ್ಯದ ಗಮನ ಸೆಳೆದಿತ್ತು. ಸದ್ಯ ಜಿಲ್ಲೆಯಲ್ಲಿ ಹೊನ್ನಾವರ ವಾಣಿಜ್ಯ ಬಂದರು ವಿರೋಧದ ಹೋರಾಟವೇ ಸಾಕಷ್ಟು ಸದ್ದು ಮಾಡುತ್ತಿದೆ. ಕಾರವಾರದಲ್ಲೂ ವಾಣಿಜ್ಯ ಬಂದರು ವಿಸ್ತರಣೆಗೆ ಮುಂದಾಗಲಾಗಿತ್ತು. ಈ ವೇಳೆ ಕೂಡ ಯೋಜನೆ ವಿರೋಧಿಸಿ ಮೀನುಗಾರರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ವಾಣಿಜ್ಯ ಬಂದರು ವಿಸ್ತರಣೆಯಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿ ಉಂಟಾಗಲಿದೆ. ಈಗಾಗಲೇ ಹಲವು ತೀರಗಳು ನೌಕಾನೆಲೆ ಪಾಲಾಗಿದ್ದು, ಅದೆಷ್ಟೋ ಮೀನುಗಾರರ ಕುಟುಂಬಗಳು ನಿರಾಶ್ರಿತರಾಗಿ ಈಗಲೂ ಕೆಲವರು ನೆಲೆ ಕಂಡುಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಇದೀಗ ಬಂದರು ವಿಸ್ತರಣೆಗೆ ಇರುವ ಏಕೈಕ ರವೀಂದ್ರನಾಥ ಟ್ಯಾಗೋರ್ ಕಡಲತೀರ ಕೂಡ ಆಪೋಶನಗೊಂಡರೆ ಕಾರವಾರ ನಗರದ ಅಂದ ಹಾಳುಗೆಡುವುದಲ್ಲದೆ, ಮೀನುಗಾರರಿಗೂ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂಬ ಆರೋಪವಿದೆ. ಈ ವಿವಾದ ಸದ್ಯ ಕೋರ್ಟ್‌ ಮೆಟ್ಟಿಲೇರಿದೆ.
ಮತ್ತೊಂದು ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದಿಂದಾಗಲಿ ಅಥವಾ ರಾಜ್ಯದಿಂದಾಗಲಿ, ಮೀನುಗಾರರ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಕಡಲಮಕ್ಕಳು ದೂರುತ್ತಿದ್ದಾರೆ. ಇದಕ್ಕೆ ನೈಜ ಉದಾಹರಣೆಯೆಂದರೆ ಕೋವಿಡ್ ಎರಡನೇ ಅಲೆಯಲ್ಲಿ ಮೀನುಗಾರರಿಗೆ ಪ್ಯಾಕೇಜ್ ಘೋಷಿಸದೇ, ಮುಖಂಡರುಗಳಿಂದ ಹಾಗೂ ಶಾಸಕರುಗಳಿಂದ ಒತ್ತಡ ಬಂದ ಬಳಿಕ ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಕೇವಲ 3 ಸಾವಿರ ಪರಿಹಾರ ಘೋಷಿಸಿ, ಅದು ಕೂಡ ನೈಜ ಬಡ ಮೀನುಗಾರರಿಗೆ ತಲುಪದ ಯೋಜನೆಯೊಂದರ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಕೂಡ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಹೊನ್ನಾವರ ಮೂಲದ ಮೀನುಗಾರ ಯುವಕ ಪರೇಶ ಮೇಸ್ತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಸಾಕಷ್ಟು ರಾಜಕೀಯ ತಿರುವು ಪಡೆದು ಕಾಂಗ್ರೆಸ್ ಆಡಳಿತಕ್ಕೆ ಮುಳ್ಳಾಗಿತ್ತು. ಆಗ ಜಿಲ್ಲೆಯಲ್ಲಿ ಮೀನುಗಾರ ಸಮುದಾಯದವರು ನಡೆಸಿದ್ದ ಹೋರಾಟಕ್ಕೆ ಬಿಜೆಪಿಗರು ಬೆಂಬಲಿಸಿ, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದರು. ಅದರ ಫಲವಾಗಿ ರಾಜ್ಯದ ಕರಾವಳಿಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿತು. ಆದರೆ, ಅಧಿಕಾರಕ್ಕೆ ಬಂದ ಬಳಿಕವೂ ಬಿಜೆಪಿ ಸರ್ಕಾರ ಪರೇಶ ಮೇಸ್ತಾ ಸಾವಿಗೆ ಕಾರಣ ಏನು ಮತ್ತು ಯಾರು ಎಂಬುದನ್ನು ಈವರೆಗೆ ಬಹಿರಂಗಪಡಿಸಿಲ್ಲ. ಅಸಲಿಗೆ ಸಿಬಿಐ ತನಿಖೆ ಎಲ್ಲಿಗೆ ಬಂದಿದೆ? ಎನ್ನುವುದೇ ಯಾರಿಗೂ ತಿಳಿದಿಲ್ಲ. ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕೆಲವು ವಿವಾದಗಳಿಂದ ಹಾಗೂ ರಾಜಕೀಯ ಬೆಳವಣಿಗೆಯಿಂದ ಸದ್ಯ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿಗರಿಗೆ ಮೀನುಗಾರರು ಈಗ ಬಿಸಿ ತುಪ್ಪದಂತಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕೇಸರಿಪಾಳಯಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದ್ದು, ಇದರ ರಾಜಕೀಯ ಲಾಭ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ ಎನ್ನುವ ಮಾತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು