ಕಲಬುರಗಿ: ಲೋಕಸಭಾ ಚುನಾವಣೆಗೆ ಇಂದು ಮಧ್ನಾಹ್ನ ಡೇಟ್ ಫಿಕ್ಸಆಗಲಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲಿ ಲೋಕಸಭಾ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ. ಅಲ್ಲದೇ ನಗರದಲ್ಲಿ ನಮೋ ಬೃಹತ್ ಸಮಾವೇಶ ನಡೆಸುವುದರ ಮೂಲಕ ಕಾರ್ಯಕರ್ತರಿಗೆ ಹುಮ್ಮಸ್ಸು ಹೆಚ್ಚಿಸಲಿದ್ದಾರೆ.
ಈ ಬಾರಿಯು ಕಲಬುರಗಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ. ಇಂದು ಮಧ್ಯಾಹ್ನ ಕಲಬುರಗಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು ನಗರದ ಎನ್ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ತೆಲಂಗಾಣದಿಂದ ಕಲಬುರಗಿ ಹೆಲಿಪ್ಯಾಡ್ ಆಗಮಿಸಲಿರೋ ನಮೋ ನಗರದ ಡಿಎಆರ್ ಹೆಲಿಪ್ಯಾಡ್ ನಿಂದ ಮೋದಿ ವೇದಿಕೆಗೆ ಪಾದಾರ್ಪಣೆ ಮಾಡಲಿದ್ದಾರೆ.
ಸದ್ಯ ಎನ್ವಿ ಕಾಲೇಜು ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಗೂ ವೇದಿಕೆ ನಿರ್ಮಾಣವಾಗಿದ್ದು, ಬೀದರ್ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 2 ಲಕ್ಷ ಜನ ಭಾಗಿಯಾಗಲಿದ್ದಾರೆ. ಹಾಗೂ ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕರು ಭಾಗಿಯಾಗಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕಲಬುರಗಿಯಲ್ಲಿ ಕೇಸರಿ ಬಾವುಟ ಹಾರಿಸಿ ಈ ಬಾರಿಯು ಅತೀಹೆಚ್ಚು ಸೀಟ್ ಗೆಲ್ಲುವ ಭರವಸೆ ತುಂಬಲಿದ್ದಾರೆ. ಬಳಿಕ ಮೋದಿ ಅವರು ಮಿನಿ ರೋಡ್ ಶೋ ಗು ತಯಾರಿ ನಡೆಸಲಾಗಿದ್ದು ನಗರದ ಕೆಲವು ಕ್ಷೇತ್ರಗಳಿಗೆ ರೋಡ್ ಶೊ ಮೂಲಕ ಜನತೆಗೆ ದರ್ಶನ ನೀಡಲಿದ್ದಾರೆ.