News Karnataka Kannada
Saturday, April 20 2024
Cricket
ಕಲಬುರಗಿ

‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್ ಅನಾವರಣ ಮಾಡಿದ ಪ್ರಿಯಾಂಕ್‌ ಖರ್ಗೆ

ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ 'ಕಲಬುರಗಿ ರೊಟ್ಟಿ ಬ್ರ್ಯಾಂಡ್‌'ಗೆ ಚಾಲನೆ ನೀಡಿದರು.
Photo Credit : News Kannada

ಕಲಬುರಗಿ: ಇಲ್ಲಿನ ರೊಟ್ಟಿಗೆ ಬಹಳ ಬೇಡಿಕೆ ಇರುವ ಹಿನ್ನಲೆಯಲ್ಲಿ ‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್ ಅನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ‘ಕಲಬುರಗಿ ರೊಟ್ಟಿ ಬ್ರ್ಯಾಂಡ್‌’ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ʼರೊಟ್ಟಿ ತಿಂದವರು ಬಲುಗಟ್ಟಿ.ಇದು ಸಿರಿಧಾನ್ಯದ ಶಕ್ತಿಯಾಗಿದ್ದು, ಇದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬ್ರ್ಯಾಂಡಿಂಗ್ ಮಾಡಲಾಗುತ್ತಿದೆ. ಇದರಿಂದ ರೊಟ್ಟಿ ತಯಾರಿಸುವ ಮಹಿಳೆಯರ ಆದಾಯ ದ್ವಿಗುಣವಾಗಲಿದೆʼ ಎಂದರು. ʼನಾನಾ ಕಾರಣದಿಂದ ನಗರ ನಿವಾಸಿಗಳು ರೊಟ್ಟಿಯಿಂದ ದೂರವಾಗುತ್ತಿದ್ದಾರೆ. ಇದರ ಪರಿಣಾಮ ಸಕ್ಕರೆ ಕಾಯಿಲೆ, ಅನೇಮಿಯಾದಂತಹ ಸಮಸ್ಯೆ ಕಾಣುತ್ತಿದ್ದೇವೆ. ಕಲಬುರಗಿ ರೊಟ್ಟಿ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷ 1 ಲಕ್ಷ ಟನ್ ಬಿಳಿ ಜೋಳ ಬೆಳೆಯುತ್ತಿದ್ದು, ರೊಟ್ಟಿ ತಯಾರಿಸಿ ಮಾರಾಟ ಮಾಡಲು ಇದು ಪೂರಕವಾಗಿದೆʼ ಎಂದು ಹೇಳಿದರು.

ʼಪ್ರಸ್ತುತ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗುಂಪಾಗಿ ಸೇರಿ ರೊಟ್ಟಿಯನ್ನು ತಯಾರಿಸಿ ಅದಕ್ಕೆ ತಮ್ಮ ಸಂಸ್ಥೆ ಹೆಸರಿಟ್ಟು ಹೋಟೆಲ್, ಖಾನಾವಳಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಮಾಡಲು ಮತ್ತು ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲು ರೊಟ್ಟಿ ತಯಾರಕರು ಮತ್ತು ರೊಟ್ಟಿ ಖರೀದಿದಾರ ನಡುವೆ ಇಂದು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸ್ವ-ಸಹಾಯ ಸಂಘದ ಮಹಿಳೆಯರಿಗೆ ರೊಟ್ಟಿ ತಯಾರಿಕೆ ಯಂತ್ರ ಸಹ ನೀಡಲಾಗುತ್ತಿದೆ” ಎಂದು ಸಚಿವರು ವಿವರಿಸಿದರು.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎರಡನೇ ಕೃಷಿ ನಿರ್ದೇಶನಾಲಯ ಯೋಜನೆಯಡಿ ಕಲಬುಯರಗಿ ತಾಲೂಕಿನ ಕುಸನೂರ ಗ್ರಾಮದ ಮಹಾದೇವಿ ಬಸಣ್ಣಾ ಎಂಬ ಮಹಿಳೆಗೆ ಘಟಕ ವೆಚ್ಚ 6 ಲಕ್ಷ ರೂ. ಗಳಲ್ಲಿ 3 ಲಕ್ಷ ರೂ. ಸಹಾಯಧನದ ರೊಟ್ಟಿ ತಯಾರಿಕಾ ಯಂತ್ರ ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ಆಯುಕ್ತ ಚೇತನ ಆರ್, ಎಸ್‌ಪಿ ಅಕ್ಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರೈತರ ಆದಾಯ ದ್ವಿಗುಣ: ʼಇದೇ ಮೊದಲ ಬಾರಿಗೆ ರೈತರ ಆದಾಯ ವೃದ್ಧಿಗೆ ಮತ್ತು ನವೀನ ತಂತ್ರಜ್ಞಾನಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿ ಮಂಡಳಿಯಿಂದ ರೈತರ ಕಲ್ಯಾಣಕ್ಕೆ ಕಲಬುರಗಿ ಜಿಲ್ಲೆಯಲ್ಲಿ 27.20 ಕೋಟಿ ರೂ. ಮೊತ್ತದ ಪಂಚ ಯೋಜನೆಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದ್ದು, ಇದರ ಫಲಿತಾಂಶದ ಮೇರೆಗೆ ಪ್ರದೇಶದ ಇತರೆ ಜಿಲ್ಲೆ, ತಾಲೂಕಿಗೆ ಯೋಜನೆ ವಿಸ್ತರಣೆ ಮಾಡಲಾಗುವುದುʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ʼಡ್ರೋನ್ ತಂತ್ರಜ್ಞಾನ ಬಳಸಿ ಕೀಟನಾಶಕ ಮತ್ತು ರಸಗೊಬ್ಬರ ಸಿಂಪಡಿಸಲು ಜಿಲ್ಲೆಯ ಅಫಜಲಪೂರ, ಕಮಲಾಪೂರ, ಚಿತ್ತಾಪೂರ ಹಾಗೂ ಸೇಡಂ ತಾಲೂಕಿನಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಂಪರಣಾ ಕೇಂದ್ರಗಳ ಸ್ಥಾಪನೆ, ಭೌಗೋಳಿಕ ಸೂಚ್ಯಂಕ ಹೊಂದಿರುವ ತೊಗರಿ, ಕೆಂಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಶೇಖರಣೆಗೆ ಚಿತ್ತಾಪೂರನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ ಸ್ಥಾಪನೆ, ಜಿಲ್ಲೆಯಲ್ಲಿ ಬೆಳೆಯುವ ಬಿಳಿಜೋಳ, ಸಜ್ಜೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ತಲಾ 150 ಲಕ್ಷ ರೂ. ವೆಚ್ಚದಲ್ಲಿ ಚಿತ್ತಾಪೂರ ಹಾಗೂ ಅಫಜಲಪೂರ ತಾಲೂಕಿನಲ್ಲಿ ಮೌಲ್ಯವರ್ಧನೆ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು. ʼವಿಶೇಷವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಹಾಯವಾಗಲು ಗ್ರಾಮ ಮಟ್ಟದಲ್ಲಿ 9 ಕೃಷಿಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ರೂ 50 ಲಕ್ಷ ರೂ. ಒದಗಿಸಲಾಗುವುದು. ಇದಲ್ಲದೆ ಭೂರಹಿತರ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಯ ಹಳೆಯ ತಾಲೂಕಿಗೆ ಒಂದರಂತೆ ಒಟ್ಟು 7 ಕಿರು ಜಲಾನಯನ ಪ್ರದೇಶಗಳ ಉಪಚಾರಕ್ಕೆ ಪ್ರತಿ ಕಿರು ಜಲಾಯನಕ್ಕೆ 1.10 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಹೀಗೆ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಜ್ಜೆ ಇಟ್ಟಿದೆʼ ಎಂದು ಸಚಿವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು