News Karnataka Kannada
Thursday, May 09 2024
ಕಲಬುರಗಿ

35 ರೂಪಾಯಿಗೆ ಊಟ ಕೊಡುವ ಸ್ವಾಮಿ ಖಾನಾವಳಿ

ಎರಡು ಚಪಾತಿ ಅಥವಾ ರೊಟ್ಟಿ, ಎರಡು ತರಹದ ಪಲ್ಯ, ಶೇಂಗಾ ಹಿಂಡಿ, 1 ಕಪ್‌ ಮಜ್ಜಿಗೆ, ಅನ್ನ, ಸಾಂಬಾರು ಊಟಕ್ಕೆ ₹35 ಮಾತ್ರ.  ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಊಟದ ದರ ಕೇಳಿ ಆಶ್ಚರ್ಯವಾದರೂ ಸತ್ಯ. ಕಲಬುರಗಿಯ ಗಂಜ್‌ ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸ್ವಾಮಿ ಖಾನಾವಳಿಯಲ್ಲಿ ₹35ಕ್ಕೆ ಊಟ ದೊರೆಯುತ್ತದೆ.
Photo Credit : News Kannada

ಕಲಬುರಗಿ: ಎರಡು ಚಪಾತಿ ಅಥವಾ ರೊಟ್ಟಿ, ಎರಡು ತರಹದ ಪಲ್ಯ, ಶೇಂಗಾ ಹಿಂಡಿ, 1 ಕಪ್‌ ಮಜ್ಜಿಗೆ, ಅನ್ನ, ಸಾಂಬಾರು ಊಟಕ್ಕೆ ₹35 ಮಾತ್ರ.  ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ದಿನಗಳಲ್ಲಿ ಊಟದ ದರ ಕೇಳಿ ಆಶ್ಚರ್ಯವಾದರೂ ಸತ್ಯ. ಕಲಬುರಗಿಯ ಗಂಜ್‌ ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸ್ವಾಮಿ ಖಾನಾವಳಿಯಲ್ಲಿ ₹35ಕ್ಕೆ ಊಟ ದೊರೆಯುತ್ತದೆ.

ಮಧ್ಯಾಹ್ನ 1ರಿಂದ 3.30ರವರೆಗೆ ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆ ಆಗುತ್ತಿದ್ದಂತೆ ಗ್ರಾಹಕರು ಜಮಾಯಿಸುತ್ತಾರೆ.

ಮುದ್ದಾ ಟ್ರೇಡರ್ಸ್ ಎದುರುಗಡೆ ಸ್ವಾಮಿ ಖಾನಾವಳಿ ಇದೆ. 100 ಮೀಟರ್‌ ಅಂತರದಲ್ಲಿರುವ ದಾನೇಶ್ವರಿ ಟ್ರೇಡಿಂಗ್‌ ಕಂಪನಿ ಎದುರು ಟಂಟಂನಲ್ಲಿ ಇದೇ ದರಕ್ಕೆ ಪಾರ್ಸೆಲ್‌ ಕೂಡ ಕೊಡಲಾಗುತ್ತದೆ. ಖಾನಾವಳಿಯಲ್ಲಿ ಪ್ರತಿದಿನ 100 ಊಟ ಖರ್ಚಾದರೆ, ಟಂಟಂನಲ್ಲಿ 200 ಊಟ ಪಾರ್ಸೆಲ್‌ ನೀಡಲಾಗುತ್ತದೆ.

ಮಾರುಕಟ್ಟೆ ಪ್ರದೇಶದಲ್ಲಿ 8 ವರ್ಷಗಳ ಹಿಂದೆ ರೊಟ್ಟಿ ಮಹಾದೇವಿ ಅವರು ಸ್ವಾಮಿ ಖಾನಾವಳಿ ಆರಂಭಿಸಿದ್ದಾರೆ. ಅವರ ಪುತ್ರ ಮಲ್ಲಿಕಾರ್ಜುನ ನಂದಿಕೋಲಮಠ ಮುನ್ನಡೆಸುತ್ತಿದ್ದಾರೆ. ಖಾನಾವಳಿ ಇಕ್ಕಟ್ಟಾಗಿದ್ದರೂ ಕೆಳಗಡೆ ಸ್ಟೂಲ್‌ ಮೇಲೆ ಮತ್ತು ಅಟ್ಟದ ಮೇಲೆ ಕುಳಿತು ಊಟ ಮಾಡಬಹುದು. ಭಾನುವಾರ ಸೇರಿದಂತೆ ಎಪಿಎಂಸಿ ರಜಾ ದಿನಗಳಲ್ಲಿ ಬಂದ್‌ ಇರುತ್ತದೆ.

ಖಾನಾವಳಿಗೆ ಯಾವುದೇ ಬೋರ್ಡ್‌ ಇಲ್ಲದಿದ್ದರೂ ಸಾಕಷ್ಟು ಖ್ಯಾತಿ ಹೊಂದಿದೆ. ಗಂಜ್‌ ಪ್ರದೇಶಕ್ಕೆ ಹಳ್ಳಿಗಳಿಂದ ಬರುವ ರೈತರು, ಕೂಲಿಕಾರ್ಮಿರು, ಗ್ಯಾರೇಜ್‌ ಕಾರ್ಮಿಕರು, ಆಟೊ ಚಾಲಕರೇ ಮುಖ್ಯ ಊಟ ಮಾಡಿ ಮನದುಂಬಿ ಹರಸುತ್ತಾರೆ.

‘ಬೇರೆ ಖಾನಾವಳಿಗಳಲ್ಲಿ ಸಾಮಾನ್ಯವಾಗಿ ಒಂದು ಊಟಕ್ಕೆ ₹70ರಿಂದ ₹100 ದರ ಇದೆ. ಸ್ವಾಮಿ ಖಾನಾವಳಿಗೆ 6-7 ವರ್ಷಗಳಿಂದ ಬರುತ್ತಿದ್ದೇವೆ. ಮನೆಯ ಊಟದಂತೆ ಅಡುಗೆ ರುಚಿಯಾಗಿರುತ್ತದೆ’ ಎಂದು ಊಟ ಸವಿಯುತ್ತಿದ್ದ ಕಾಶಿರಾಯ ಗುಂಡಪ್ಪ, ಅಭಿಷೇಕ ಮರತೂರಕರ್‌, ಜಿತೇಂದ್ರ ಹೇಳಿದರು.

‘ನನ್ನಮ್ಮ ಕಣ್ಣಿ ಮಾರುಕಟ್ಟೆಯಿಂದ ತರಕಾರಿ ತಂದರೆ, ನಾನು ಎಪಿಎಂಸಿಯಿಂದ ಜೋಳ, ಗೋಧಿ, ಅಕ್ಕಿ ಮತ್ತು ಕಾಳುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಅಜ್ಜಿ, ಅಮ್ಮ, ಪತ್ನಿ ಖಾನಾವಳಿ ನಡೆಸಲು ನೆರವಾಗುತ್ತಾರೆ. ಮಾಣಿಕೇಶ್ವರಿ ಕಾಲೊನಿಯಲ್ಲಿ ರೊಟ್ಟಿ ಕೇಂದ್ರವೂ ಇದೆ. 7ನೇ ತರಗತಿ ನಂತರ ವಿದ್ಯೆ ತಲೆಗೆ ಹತ್ತಲಿಲ್ಲ. ಸರ್ಕಾರಿ ನೌಕರಿ ಗಗನ ಕುಸುಮ. ಬಡತನ ಬೇರೆ. ಆದರೆ, ಜೀವನ ಸಾಗಿಸಲು ಕೆಲಸ ಬೇಕೇಬೇಕು. ಹಾಗಾಗಿ, ಸ್ವಯಂ ಉದ್ಯೋಗ ಕಂಡುಕೊಂಡಿದ್ದೇನೆ. ನಾಲ್ಕು ಜನರಿಗೆ ಕೆಲಸ ಕೊಟ್ಟಿರುವ ಖುಷಿ ಕೂಡ ಇದೆ’ ಎಂದು ಮಲ್ಲಿಕಾರ್ಜುನ ನಂದಿಕೋಲಮಠ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು