ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಭಾನುವಾರ ಭಾರಿ ಮಳೆಯಾಗಿದೆ. ಬಿರುಗಾಳಿ ಮಳೆಗೆ ಔರಾದ್ ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.
ಬೀದರ್ ನಗರ, ತಾಲ್ಲೂಕಿನ ಅಮಲಾಪುರ, ಕೊಳಾರ, ಚಿಕಪೇಟ್, ಬೆನಕನಳ್ಳಿ, ಹಿಪ್ಪಳಗಾಂವ, ಮರಕಲ್, ಶಹಾಪುರ, ಗೋರನಳ್ಳಿ, ಚಿಟ್ಟಾವಾಡಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ.
ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಉಡಬಾಳ, ಹುಮನಾಬಾದ್, ಭಾಲ್ಕಿ ತಾಲ್ಲೂಕಿನಲ್ಲೂ ವರ್ಷಧಾರೆಯಾಗಿದೆ.
ಸಂಜೆ 4ಗಂಟೆಗೆ ಶುರುವಾದ ಜೋರು ಮಳೆ ಎಡೆಬಿಡದೆ 5.30ರ ವರೆಗೆ ಸುರಿಯಿತು. ಬಳಿಕ ಗುಡುಗು ಮಿಂಚಿನೊಂದಿಗೆ ತುಂತುರು ಮಳೆ ಮುಂದುವರೆಯಿತು. ನಗರದ ಪ್ರಮುಖ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು.
ಔರಾದ್ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ 14 ಮಿ.ಮಿ, ಕೌಠಾ (ಬಿ) ಗ್ರಾಮದಲ್ಲಿ 8 ಮಿ.ಮೀ, ಭಾಲ್ಕಿ ತಾಲ್ಲೂಕಿನ ಜೋಳದಾಬಕದಲ್ಲಿ 20 ಮಿ.ಮೀ, ಡೋಂಗರಗಾಂವನಲ್ಲಿ 13 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ.