News Karnataka Kannada
Monday, April 29 2024
ಬೀದರ್

ಬೀದರ್: ಮಳೆ ಕೊರತೆಯಿಂದ ಕೈಗೆ ಬಾರದ ಬೆಳೆ, ರೈತ ಕಂಗಾಲು

Drought: Farmers in distress due to crop failure
Photo Credit : News Kannada

ಬೀದರ್:  ಭಾಲ್ಕಿ ತಾಲೂಕಿನಲ್ಲಿ ಮಳೆ ಕೊರತೆಯಿಂದ 90,712 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಸೋಯಾಬಿನ್‌, ತೊಗರಿ, ಉದ್ದು, ಹೆಸರು ಸೇರಿದಂತೆ ಇತರ ಬೆಳೆಗಳು ಹಾಳಾಗಿದ್ದು ಅನ್ನದಾತರನ್ನು ಕಂಗಾಲಾಗಿಸಿದೆ.

ಮಳೆಯ ತೀವ್ರ ಕೊರತೆಯಿಂದ ಹಿಂಗಾರು ಹಂಗಾಮಿನಲ್ಲಿ ಶೇ 21ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.

ಸುಮಾರು ಶೇ79ರಷ್ಟು ಜನ ಮಳೆಯ ನಿರೀಕ್ಷೆಯಲ್ಲಿ ಆಗಸ ನೋಡುತ್ತ ಬಿತ್ತನೆಯ ಕಾರ್ಯದ ಆಸೆಯನ್ನು ಕೈ ಬಿಟ್ಟಿದ್ದಾರೆ. ಮುಂಗಾರು ನಷ್ಟ ಅನುಭವಿಸಿದ ರೈತರು, ಹಿಂಗಾರು ಹಂಗಾಮಿನಲ್ಲಿ ಸಾಲಸೂಲ ಮಾಡಿ ಬಿತ್ತನೆ
ಮಾಡಿದ್ದಾರೆ.

ತಾಲ್ಲೂಕಿನ ಖಟಕಚಿಂಚೋಳಿ, ಹಲಬರ್ಗಾ, ಭಾತಂಬ್ರಾ ಸೇರಿದಂತೆ ಎಲ್ಲ ಹೋಬಳಿಗಳಲ್ಲಿ ಮಳೆ ಕೊರತೆಯಿಂದ ಸೋಯಾಬಿನ್‌ ಸೇರಿದಂತೆ ಯಾವುದೇ ಬೆಳೆಯ ಇಳುವರಿ ಸರಿಯಾಗಿ ಬಂದಿಲ್ಲ. ಇದರಿಂದ ಬೆಳೆಗಳನ್ನು ಬೆಳೆಯಲು ಖರ್ಚು ಮಾಡಿದ ಲಾಗೋಡಿ ಹಣವೂ ಮರಳಿ ಬಂದಿಲ್ಲ. ಮುಂಗಾರು ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿವೆ.

ಸದ್ಯ ಹಿಂಗಾರಿನ ಬಿತ್ತನೆಗೆ ಅಗತ್ಯವಾಗಿರುವ ಮಳೆಯೂ ಬಾರದೆ ಇರುವುದರಿಂದ ಬಹುತೇಕ ರೈತರು ಬಿತ್ತನೆಯೇ ಮಾಡಿಲ್ಲ. ಇನ್ನು ಕೊಳವೆಬಾವಿ, ತೆರೆದ ಬಾವಿಯ ಇರುವ ಕೆಲ ರೈತರು ಬಿತ್ತನೆ
ಮಾಡಿದ್ದಾರೆ.

ಬಿತ್ತನೆ ಮಾಡಿದ ಬೆಳೆಗಳನ್ನು ರಕ್ಷಿಸಿಕೊಳ್ಳಬೇಕು ಎಂದರೆ ಬೆಳಿಗ್ಗೆ ಮಂಗಗಳ, ಜಿಂಕೆಗಳ ಸಂಜೆಯ ಹೊತ್ತಿನಲ್ಲಿ ಕಾಡು ಹಂದಿಗಳ ಹಾವಳಿ ನಮಗೆ ಶಾಪವಾಗಿ ಕಾಡುತ್ತಿದೆ. ಈ ಕಾಡು ಪ್ರಾಣಿಗಳ ಕಾಟದ ಭಯದಿಂದ ಹೊಲದಲ್ಲಿ ಕಡಲೆ ಬಿತ್ತನೆ ಮಾಡಿದ ನಂತರ ಬೀಜ ಮೊಳಕೆಯೊಡೆಯುವರೆಗೂ ಹೊಲದಲ್ಲಿ ಮಲಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹಾಲಹಿಪ್ಪರ್ಗಾ ಗ್ರಾಮದ ರೈತ ಚಂದ್ರಶೇಖರ ಪಾಟೀಲ, ಬೀರಿ (ಬಿ)ಯ ವಿಜಯಕುಮಾರ ಪಾಟೀಲ, ಹಲಬರ್ಗಾದ ರೈತ ಉತ್ತಮ ನಾಗೂರೆ ತಮ್ಮ ಸಂಕಷ್ಟ ತೋಡಿಕೊಂಡರು.

ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ತೊಗರಿ, ಕಡಲೆ ಸೇರಿದಂತೆ ಇತರ ಬೆಳೆಗಳು ಹಾಳಾಗಿವೆ. ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರಿಗೆ 8 ಗಂಟೆ ವಿದ್ಯುತ್‌ ಪೂರೈಸದೆ ಇರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹಾಗೆಯೇ ರಾಜ್ಯ ಸರ್ಕಾರದ ಪಾಲಿನ ರೈತ ಸಮ್ಮಾನ್‌ ನಿಧಿಯ ₹4 ಸಾವಿರ ಹಣ ಕೊಡುವುದನ್ನು ನಿಲ್ಲಿಸಿರುವುದು ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ರೈತ
ಮುಖಂಡ ನಿರ್ಮಲಕಾಂತ ಪಾಟೀಲ, ತರನಳ್ಳಿಯ ಮಲ್ಲಿಕಾರ್ಜುನ ಚಳಕಾಪೂರೆ.

ಸದ್ಯ ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ಸೂರ್ಯನ ಪ್ರಖರತೆ ಹೆಚ್ಚಾದಂತೆ ಸಮಸ್ಯೆ ತಲೆದೋರಬಹುದು. ಸಂಬಂಧಪಟ್ಟವರು ಅಗತ್ಯ ಸಿದ್ಧತೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕೂಡಲೇ ಬರ ಪರಿಹಾರದ ಮೊತ್ತ ಬಿಡುಗಡೆ ಮಾಡಿ ಬರದ ಗಾಯಕ್ಕೆ ಒಳಗಾಗಿರುವ ಅನ್ನದಾತರಿಗೆ ಆಸರೆಯಾಗಬೇಕು ಎನ್ನುತ್ತಾರೆ ರೈತ ಮುಖಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು