ಹಾವೇರಿ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿದ ಕೇಸ್ ಗೆ ಸಂಬಂಧಪಟ್ಟಂತೆ 22 ಮಂದಿಯ ವಿರುದ್ಧ FIR ದಾಖಲಾಗಿದೆ

ಸವಣೂರಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಬಂದ ಹಿನ್ನೆಲೆ ಶಿಕ್ಷಕ ಜಗದೀಶ್ ಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ವಿಡಿಯೋ ಫುಟೇಜ್ ನಲ್ಲಿ ಆರೋಪಿಗಳು ಸೆರೆಯಾಗಿದ್ದು, ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ಡಿ.10ರಂದು ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ಶಿಕ್ಷಕ ಜಗದೀಶ್ ವಿರುದ್ಧ ಸವಣೂರು ಠಾಣೆಗೆ ದೂರು ನೀಡಿದ್ದರು. ಅದರನ್ವಯ ಶಿಕ್ಷಕ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಶಿಕ್ಷಕ ಜಗದೀಶ್ ಸಹ ದೂರು ನೀಡಿದ್ದಾರೆ. ಶಾಲೆಯಲ್ಲಿ ಶಿಕ್ಷಕನನ್ನು ಥಳಿಸಿದವರು, ಚಪ್ಪಲಿಯಿಂದ ಹೊಡೆದವರು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರನ್ನು ವಿಡಿಯೋ ಆಧರಿಸಿ ಪತ್ತೆ ಮಾಡಲಾಗಿದ್ದು, ಅಪಮಾನ ಮಾಡಿ, ಜೀವಬೆದರಿಕೆಯೊಡ್ಡಿರುವ ಆರೋಪದಡಿ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶೀಘ್ರದಲ್ಲಿಯೇ 22ಆರೋಪಿಗಳ ವಿಚಾರಣೆ ನಡೆಯಲಿದೆ.

ಈವರೆಗೂ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ದೂರು ನೀಡಿಲ್ಲ. ಶಾಲೆ ಶಿಕ್ಷಕರ ನಡುವೆ ವೈಮನಸ್ಸು ಹಿನ್ನೆಲೆ ಈ ರೀತಿ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಸವಣೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.