ಹಾವೇರಿ: ಸೊಸೆ ಜೀವನ ನಡೆಸಲು ಪಡುತ್ತಿದ್ದ ಕಷ್ಟವನ್ನು ನೋಡಲಾಗದೆ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ 10 ಕಂತುಗಳ ಹಣ ಕೂಡಿಸಿ ಸೊಸೆಗೆ ಜನರಲ್ ಸ್ಟೋರ್ ಮತ್ತು ಬಳೆ ಅಂಗಡಿ ಹಾಕಿಕೊಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನಲ್ಲಿ ನಡೆದಿದೆ.

ಎಂ.ಎಂ.ನೀರಲಗಿ ಗ್ರಾಮದ ದಾಕ್ಷಾಯಿಣಿ ಅವರೇ ಈ ರೀತಿ ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಜನರಲ್ ಮತ್ತು ಬೆಂಗಲ್ ಸ್ಟೋರ್ ಹಾಕಿಕೊಟ್ಟ ಅತ್ತೆ. 10 ಕಂತುಗಳ 20 ಸಾವಿರ ರೂಪಾಯಿ ಕೂಡಿಟ್ಟು ಸೊಸೆಗೆ ಈ ಹೊಸ ಅಂಗಡಿ ಇಟ್ಟುಕೊಟ್ಟಿದ್ದಾರೆ. ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಮತ್ತು ದಾಕ್ಷಾಯಿಣ ಕಷ್ಟದಲ್ಲಿ ಬಂದವರು. ಸೊಸೆ ಕುಮಾರಿ ಮನೆ ನಿರ್ವಹಣೆ ಮಾಡಿ ಬೇರೆಯವರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

ಕುಮಾರಿಗೆ ಎರಡು ಮಕ್ಕಳು ಅವರನ್ನ ಬಿಟ್ಟು ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೊಸೆ ಕಷ್ಟ ನೋಡಲಾಗದೆ ಸೊಸೆಗೆ ಈ ರೀತಿ ಜನರಲ್ ಮತ್ತು ಬೆಂಗಲ್ ಸ್ಟೋರ್ ಹಾಕಿಕೊಟ್ಟಿರುವುದಾಗಿ ದಾಕ್ಷಾಯಿಣಿ ತಿಳಿಸಿದ್ದಾರೆ. ಸೊಸೆ ಜೀವನ ನಿರ್ವಹಣೆ ಸುಧಾರಿಸಲಿ ಎಂಬ ಕಾರಣಕ್ಕೆ ವ್ಯಾಪಾರ ಆರಂಭಿಸಲಿ ಎಂದು ಈ ರೀತಿ ಜನರಲ್ ಸ್ಟೋರ್ ಮಾಡಿಕೊಟ್ಟಿದ್ದೇನೆ. ಮುಂದೆ ಇದನ್ನ ಸೀರೆ ಸ್ಟೋರ್ ಸೇರಿದಂತೆ ಬೆಳೆಸುವ ಉದ್ದೇಶ ಇದೆ ಎಂದು ದಾಕ್ಷಾಯಿಣಿ ತಿಳಿಸಿದ್ದಾರೆ.