ಹಾವೇರಿ: ಇರಾನ್-ಇಸ್ರೇಲ್ ಅಮೆರಿಕದ ನಡುವೆ ಯುದ್ಧದ ತೀವ್ರತೆಯ ಬಿಸಿ ಭಾರತಕ್ಕೂ ತಟ್ಟಿದೆ. ದಿನನಿತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತಿದೆ. ಇದೀಗ ಆಟೋ ಗ್ಯಾಸ್ ದರ ಏಕಾಏಕಿ ಏರಿಕೆಯಾಗಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ಯಾಸ್ ಬಂಕ್ನಲ್ಲಿ ಗ್ಯಾಸ್ ವ್ಯತ್ಯಯದ ಬಗ್ಗೆ ಸೂಚನಾ ಫಲಕವನ್ನು ಅಳವಡಿಸಲಾಗುತ್ತಿದೆ. ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಆಟೋಗಳಿಗೆ ಬಳಸುವ ಅನಿಲದ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಚಾಲಕರು ಸಹಕರಿಸಬೇಕು ಎಂದು ಫಲಕದಲ್ಲಿ ತಿಳಿಸಲಾಗಿದೆ.
ಆಟೋ ಚಾಲಕರು ಈ ಕುರಿತು ಮಾತನಾಡಿ, ಸುಮಾರು 15 ದಿನಗಳ ಹಿಂದೆ ಒಂದು ಕಿಲೋ ಅನಿಲದ ಬೆಲೆ 50 ರೂಪಾಯಿ ಇತ್ತು. ಆದರೆ ಇದೀಗ ಅದು 70 ರೂಪಾಯಿಗೆ ಏರಿಕೆಯಾಗಿದೆ. ದರ ಏರಿಕೆಯಿಂದ ದಿನಗೂಲಿ ದುಡಿಮೆ ಮಾಡಿಕೊಂಡು ಬದುಕು ಸಾಗಿಸುವ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಂಧನ ದರ ಏರಿಕೆಯಿಂದ ಪ್ರಯಾಣಿಕರಿಂದ ಹೆಚ್ಚುವರಿ ಹಣ ಕೇಳಿದರೆ ಜಗಳವಾಗುತ್ತದೆ. ಆದ್ದರಿಂದ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅನಿಲದ ದರವನ್ನು ಕಡಿಮೆ ಮಾಡುವಂತೆ ಆಟೋ ಚಾಲಕರು ಆಗ್ರಹಿಸಿದ್ದಾರೆ.

