ಹಾವೇರಿ: ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ವರದಾಹಳ್ಳಿಯಲ್ಲಿ ಭಾನುವಾರ ನಡೆದಿದೆ. ಗಂಡನ ಮನೆಯಲ್ಲಿ ದಿನನಿತ್ಯ ಆಗುತ್ತಿದ್ದ ಭಿನ್ನಾಭಿಪ್ರಾಯ, ಕಲಹದಿಂದ ನೊಂದ 38 ವರ್ಷದ ಸವಿತಾ ನಾಗರಾಜ ಉಳ್ಳಾಗಡ್ಡಿ, ಮಗಳು ಕಾವ್ಯಾ ಇಬ್ಬರೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಮೂಲಕ ನದಿಯಲ್ಲಿ ಹುಡುಕಾಟ ಪ್ರಾರಂಭಿಸಿದ್ದರು. ಇದೀಗ ಕಾವ್ಯಾ ಅವರ ಮೃತದೇಹ ಪತ್ತೆಯಾಗಿದ್ದು, ಸವಿತಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

ಸವಿತಾ ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳಿದ್ದಾಳೆ. ಇತ್ತೀಚೆಗಷ್ಟೇ ಮಗಳು ಕಾವ್ಯಾ ನವೋದಯ ಪರೀಕ್ಷೆ ಪಾಸಾಗಿದ್ದಳು. ಪ್ರತಿಭಾವಂತೆಯಾಗಿದ್ದಳು. ಆದರೆ, ಮನೆಯಲ್ಲಿ ನಿತ್ಯ ಕಲಹ, ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ಮನನೊಂದು ತಾಯಿ ಸವಿತಾ ಅವರು ಕಾವ್ಯಾಳನ್ನು ಕರೆದುಕೊಂಡು ಬಂದು ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.