ಗದಗ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಲಾರಿ ಪಲ್ಟಿಯಾದ ರಭಸಕ್ಕೆ ಸಿಲಿಂಡರ್‌ಗಳು ರಸ್ತೆಯುದ್ದಕ್ಕೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.ಭಾರತ್ ಗ್ಯಾಸ್ ಕಂಪನಿಗೆ ಸೇರಿದ ಈ ಲಾರಿಯು ಹುಬ್ಬಳ್ಳಿಯಿಂದ ರೋಣ ಮತ್ತು ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಸಿಲಿಂಡರ್‌ಗಳನ್ನು ಹೊತ್ತು ಸಾಗುತ್ತಿತ್ತು.

ರೋಣ ಪಟ್ಟಣದ ಸಮೀಪವಿರುವ ತಿರುವಿನಲ್ಲಿ ಮುಂದಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ಲಾರಿ ರಸ್ತೆ ಪಕ್ಕದ ಗುಂಡಿಗೆ ಇಳಿದಿದೆ. ತಕ್ಷಣವೇ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ.

ಲಾರಿ ಉರುಳಿದ ತಕ್ಷಣ ನೂರಾರು ಸಿಲಿಂಡರ್‌ಗಳು ಜಮೀನಿನ ತುಂಬೆಲ್ಲಾ ಹರಡಿಕೊಂಡವು. ಗ್ಯಾಸ್ ಸಿಲಿಂಡರ್‌ಗಳಾದ ಕಾರಣ ಎಲ್ಲಿ ಸ್ಫೋಟಗೊಳ್ಳುತ್ತದೆಯೋ ಎಂಬ ಆತಂಕ ಸುತ್ತಮುತ್ತಲ ಜನರಲ್ಲಿ ಮನೆ ಮಾಡಿತ್ತು. ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಸ್ಫೋಟಗೊಳ್ಳದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ಹಾಗೂ ಆಸ್ತಿಪಾಸ್ತಿ ಹಾನಿ ತಪ್ಪಿದಂತಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ನಂತರ ರೋಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.