ಇಸ್ರೇಲ್: ಕುವೈತ್‌ನ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ ನಡೆಸಿದ್ದು, ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದು, ಸ್ಥಳದಲ್ಲಿ ಒಂದು ಕಟ್ಟಡಕ್ಕೆ ಹಾನಿಯಾಗಿದೆ ಎಂದು ಗಲ್ಫ್ ರಾಜ್ಯದ ವಿದ್ಯುತ್ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಈ ದಾಳಿಯಿಂದಾಗಿ ಘಟಕದ ಸೇವಾ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ ಮತ್ತು ತೈಲ ಸ್ಥಾವರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಈ ಘಟನೆಯು ಪರ್ಷಿಯನ್ ಕೊಲ್ಲಿಯ ರಾಷ್ಟ್ರಗಳಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಇಸ್ರೇಲ್ ಮತ್ತು ನೆರೆಯ ಗಲ್ಫ್ ಅರಬ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿ ನಡೆಸಿರುವ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮುಂದುವರಿಸಿವೆ. ಈ ದಾಳಿಯಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ವಿಶ್ವದ ವ್ಯಾಪಾರದ ಸುಮಾರು 12% ಸಾಮಾನ್ಯವಾಗಿ ಹಾದುಹೋಗುವ ಕೆಂಪು ಸಮುದ್ರದ ಆಚೆಯ ಬಾಬ್ ಎಲ್-ಮಂಡೇಬ್ ಜಲಸಂಧಿಯಲ್ಲಿ ಹೌತಿಗಳು ಮತ್ತೊಮ್ಮೆ ಹಡಗುಗಳನ್ನು ಗುರಿಯಾಗಿಸಿಕೊಂಡರೆ ಜಾಗತಿಕ ಸಾಗಣೆಗೆ ಮತ್ತಷ್ಟು ಹಾನಿಯಾಗಬಹುದು.
ಅಮೆರಿಕ ಒಂದೆಡೆ ಯುದ್ಧ ವಿರಾಮದ ಬಗ್ಗೆ ಮಾತನಾಡುತ್ತಿದ್ದರೆ, ಇಸ್ರೇಲ್ ದಾಳಿಯನ್ನು ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೊಲ್ಲಿರಾಷ್ಟ್ರಗಳ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈಗಾಗಲೇ ಎರಡು ಬಾರಿ ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ ಇರಾನ್ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್‌ಗಳಿಗೆ ಡ್ರೋನ್ ದಾಳಿ ನಡೆಸಿದೆ.
ಬೆಂಕಿಯನ್ನು ನಂದಿಸಲು ಕುವೈತ್ ಅಗ್ನಿಶಾಮಕ ತಂಡಗಳು, ಕುವೈತ್ ಸೇನೆ, ರಾಷ್ಟ್ರೀಯ ಗಾರ್ಡ್ ಮತ್ತು ತೈಲ ವಲಯದ ಘಟಕಗಳು ಹರಸಾಹಸ ಪಡುತ್ತಿದ್ದರೂ ಸಂಜೆಯವರೆಗೆ ನಂದಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

