ಚಾಮರಾಜನಗರ : ತಮಿಳುನಾಡಿನ ಹಾಸನೂರು- ಗೇರುಮಾಳಂ ನಡುವೆ ಚಿರತೆ ಓಡಾಟ ಕಂಡು ಬಂದಿದ್ದು ದ್ವಿಚಕ್ರ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು- ಗೇರುಮಾಳಂ ನಡುವೆ ಚಿರತೆಯೊಂದು ರಸ್ತೆ ಬದಿಯಲ್ಲಿ ತಿರುಗಾಡುವ ದೃಶ್ಯವನ್ನ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು – ಗೇರುಮಾಳಂ ಅರಣ್ಯ ಪ್ರದೇಶದಲ್ಲಿ ಇತ್ತೀಚಿಗೆ ಎಲ್ಲೆಂದರಲ್ಲಿ ಹುಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಅರೆಪಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವನ್ಯಜೀವಿಗಳ ಹಾವಳಿಗೆ ಸಾರ್ವಜನಿಕರು ಬೇಸತ್ತು ಹೋಗಿದ್ದು ತಮಿಳುನಾಡು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

