ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹ್ಯೂಮಾನಿಟಿಸ್ ವತಿಯಿಂದ ‘ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿ ಮತ್ತು ಸಮಾವೇಶಿತ ಸಮಾಜಗಳ ಉತ್ತೇಜನ’ ಎಂಬ ವಿಷಯದ ಮೇಲೆ ಜನವರಿ 28 ಮತ್ತು 29, 2026 ರಂದು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮವು ಜನವರಿ 28, 2026 ರಂದು ಬೆಳಿಗ್ಗೆ 10 ಗಂಟೆಗೆ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಹೆಚ್. ವಿ. ದರ್ಶನ್, ಐಎಎಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ರೆ. ಫಾ. ಡಯನೀಶಿಯಸ್ ವಾಜ್, ಎಸ್.ಜೆ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮಂತ್ರಯಾ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಸ್ಥೆಯ ಸ್ಥಾಪಕಿ ಹಾಗೂ ಅಧ್ಯಕ್ಷರು, ಅಮೆರಿಕದ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ಆಮ್ರೆಸ್ಟ್ ಇದರ ಹಿರಿಯ ಸಂಶೋಧಕಿ ಡಾ. ಶಾಂತಿ ಎಂ. ಡಿಸೋಜಾರವರು ಸಮ್ಮೇಳನದ ದಿಕ್ಸೂಚಿ ಭಾಷಣವನ್ನು ನೀಡಲಿದ್ದಾರೆ.
ಸಮ್ಮೇಳನದಲ್ಲಿ ರಾಷ್ಟ ಮತ್ತು ಅಂತರರಾಷ್ಟ್ರೀಯ ಮಟ್ಟದ ಗಣ್ಯ ವಿದ್ವಾಂಸರು, ಮುಖ್ಯವಾಗಿ ಡಾ. ಕೃಷ್ಣರಾಜ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ಬೆಂಗಳೂರು, ರೆ. ಡಾ. ಜೋಕಿಂ ಅಂದ್ರಾಡೆ, ಪಾಂಟಿಫಿಕಲ್ ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಪರಾನಾ, ಬ್ರೆಜಿಲ್, ಡಾ. ಯೂಟೆ ರಿಟ್ಸ್-ಡಾಯ್ಚ್, ಬಿಂಗ್ಹ್ಯಾಮ್ಟನ್ ಯೂನಿವರ್ಸಿಟಿ ಆಫ್ ಅಮೆರಿಕಾ, ಡಾ. ಅಲೆಕ್ಸಾಂಡ್ರು ಬಾಲಾಸ್, ಸನ್ನಿ ಕಾರ್ಟ್‍ಲ್ಯಾಂಡ್, ನ್ಯೂಯಾರ್ಕ್, ಅಮೆರಿಕಾ, ಮುಂತಾದವರು ಭಾಗವಹಿಸಲಿದ್ದಾರೆ.
ಸಮ್ಮೇಳನದ ಎರಡನೇ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶ್ರೀ ರಾಜು ಕೆ., ಕೆಎಎಸ್ ಅವರು ಶಾಂತಿಪರ ಸಮಾಜಗಳ ಉತ್ತೇಜನಕ್ಕಾಗಿ ಸಂಸ್ಥೆಗಳ ಬಲವರ್ಧನೆ ವಿಷಯದ ಮೇಲೆ ಮಾತನಾಡಲಿದ್ದಾರೆ. ಇತರ ಪ್ಯಾನಲ್ ಸದಸ್ಯರಾಗಿ ಲೆಪಿ, ಕೊಚ್ಚಿ ಸಂಸ್ಥೆಯ ಸಹ ನಿರ್ದೇಶಕ ರೆ. ಫಾ. ರೋಸನ್ ರಾಯ್ ಎಸ್.ಜೆ. ಅವರು ಉನ್ನತ ಶಿಕ್ಷಣದಲ್ಲಿ ಶಾಂತಿ ಕಥನಗಳ ಬೆಳವಣಿಗೆ ದಾರಿಗಳು ಮತ್ತು ವಿಧಾನಗಳು ವಿಷಯದ ಮೇಲೆ, ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ರಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಾಜರಾಮ್ ತೋಲ್ಪಾಡಿ ಅವರು ಹಿಂಸೆ ಮತ್ತು ಅಹಿಂಸೆ: ಸುಸ್ಥಿರ ಸಮಾಜದತ್ತ ವಿಷಯದ ಮೇಲೆ, ಹಾಗೂ ಮಕ್ಕಳ ಮನೋವೈಜ್ಞಾನಿಕ ತಜ್ಞೆ ಡಾ. ರುಕ್ಸಾನಾ ಹಸನ್ ಅವರು ಶಾಂತಿ ಸಮುದಾಯಗಳು ಮತ್ತು ಶಾಂತಿಯುತ ಸಮಾಜ ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ತಾಂತ್ರಿಕ ಅಧಿವೇಶನಗಳು ಮತ್ತು ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ನಡೆಯಲಿದೆ.
ಜನವರಿ 29, 2026 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸಿಪಿ ಗೀತಾ ಡಿ. ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಆಯ್ದ ಸಂಶೋಧನಾ ಪ್ರಬಂಧಗಳನ್ನು ಐ.ಎಸ್.ಬಿ.ಎನ್/ ಐಎಸ್ಎಸ್ಎನ್ ಹೊಂದಿದ ಸಮ್ಮೇಳನ ಪ್ರಬಂಧ ಸಂಕಲನದಲ್ಲಿ ಪ್ರಕಟಿಸಲಾಗುತ್ತದೆ. ಕೆಲವು ಆಯ್ದ ಪ್ರಬಂಧಗಳನ್ನು ಡಿಒಐ ಹೊಂದಿದ ಪಿಯರ್ ರಿವ್ಯೂ ಜರ್ನಲ್‍ಗಳಲ್ಲಿ ಪ್ರಕಟಿಸುವ ಯೋಜನೆಯೂ ಇದೆ.
ಈ ಸಮ್ಮೇಳನವನ್ನು ಸೋಫಿಯಾ ವಿಶ್ವವಿದ್ಯಾಲಯ, ಟೋಕಿಯೋ (ಜಪಾನ್), ಸನ್ನಿ ಕಾರ್ಟ್ ಲ್ಯಾಂಡ್ (ಅಮೆರಿಕಾ), ಮತ್ತು ಪಾಂಟಿಫಿಕಲ್ ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಪರಾನಾ (ಬ್ರೆಜಿಲ್) ಸೇರಿದಂತೆ ಅಂತರರಾಷ್ಟ್ರೀಯ ಅಕಾಡೆಮಿಕ್ ಪಾಲುದಾರರ ಸಹಯೋಗದಲ್ಲಿ ಹಾಗೂ ಗ್ಲೋಬಲ್ ಡಿಗ್ರೀಸ್ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ.
ಈ ಸಮ್ಮೇಳನವು ಸಂಯುಕ್ತ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿ ಗುರಿ–16 (ಎಸ್.ಡಿ.ಜಿ. 16) ಇದಕ್ಕೆ ಅನುಗುಣವಾಗಿದ್ದು, ಶಾಂತಿಯುತ, ನ್ಯಾಯಸಮ್ಮತ, ಸಾಮರಸ್ಯತೆ ಮತ್ತು ಸಮಾವೇಶಿತ ಸಮಾಜಗಳ ನಿರ್ಣಯದ ಕುರಿತು ಚರ್ಚೆ ನಡೆಸಲಿದೆ. ದೇಶ-ವಿದೇಶಗಳ ಶಿಕ್ಷಣ ತಜ್ಞರು, ಸಂಶೋಧಕರು, ನೀತಿ ರೂಪಕರು, ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಶಾಂತಿ ನಿರ್ಮಾಣ, ಸಮಾವೇಶಿತ ಸಂಸ್ಥೆಗಳು, ಮಾನವ ಹಕ್ಕುಗಳು, ಆಡಳಿತ ಹಾಗೂ ಸಾಮಾಜಿಕ ಸಾಮರಸ್ಯತೆಯನ್ನು ಬೆಳೆಸುವಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪಾತ್ರದ ಕುರಿತು ಮಂಡಿಸಲಿದ್ದಾರೆ.

