ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಮಿನಿ ವೀರಪ್ಪನ್ ಗೋವಿಂದನ ಬಂಧನವಾಗಿದೆ.

ಅಕ್ಟೋಬರ್ 3 ರಂದು ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನಲ್ಲಿ ಹುಲಿ ಹತ್ಯೆ ನಡೆದಿತ್ತು. ದೈತ್ಯ ಹುಲಿ ಹತ್ಯೆ ಪ್ರಕರಣ ಬಳಿಕ ಗೋವಿಂದ ತಲೆ ಮರೆಸಿಕೊಂಡಿದ್ದ.

ಹಳೆಯ ಕೇಸ್ ಹಿನ್ನಲೆ ಮೈಸೂರು ನ್ಯಾಯಾಲಯಕ್ಕೆ ಗೋವಿಂದ ಹಾಜರಾಗಿದ್ದ. ಆರೋಪಿ ಗೋವಿಂದ ಬರುವ ವಿಚಾರ ತಿಳಿದು ಅಲರ್ಟ್ ಆಗಿದ್ದ ಅರಣ್ಯ ಇಲಾಖೆಯ ತಂಡ. ಈ ವೇಳೆ ಕಣ್ತಪ್ಪಿಸಿ ಮೈಸೂರು ನ್ಯಾಯಾಲಯ ಆವರಣದಿಂದ ಎಸ್ಕೇಪ್ ಆಗಿದ್ದ.

ಟ್ರೈನ್ ಹತ್ತಿ ಬೇರೆಡೆ ಹೋಗಲೂ ಯತ್ನಿಸಿದ್ದ. ಆರೋಪಿಯನ್ನು ಬೆನ್ನತ್ತಿದ ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕೆಡಿಪಿ ಸಭೆ ಹಾಗೂ ಸಚಿವರ ನೇತೃತ್ವದ ಸಭೆಯಲ್ಲಿ ಎರಡು ಬಾರಿ ಈ ಮಿನಿ ವೀರಪ್ಪನ್ ವಿಚಾರ ಪ್ರಸ್ತಾಪವಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯುವಂತೆ ಒತ್ತಾಯ ಕೇಳಿಬಂದಿತ್ತು.

ಕೊನೆಗೂ ದೈತ್ಯ ಹುಲಿಯ ತುಂಡು ಮಾಡಿದ್ದ ಆರೋಪಿ ಗೋವಿಂದನ ಬಂಧನವಾಗಿದೆ. ಅರಣ್ಯದಲ್ಲಿ ಶಿಕಾರಿ ಮಾಡೋದನ್ನೇ ಅಭ್ಯಾಸ ಮಾಡಿಕೊಂಡಿದ್ದ ಗೋವಿಂದ. ಗುಂಪು ಕಟ್ಟಿಕೊಂಡು ಹೋಗಿ ಶಿಕಾರಿ ಮಾಡ್ತಿದ್ದ ಆರೋಪಿ. ಈತನ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು, ಗಣೇಶ ಎಂಬುವವರ ಬಂಧನವಾಗಿತ್ತು. ಆರೋಪಿ ಗೋವಿಂದನನ್ನು ಬಂಧಿಸಿದ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.