ಬೀದರ್ : ಗುಡುಗು ಸಹಿತ ಮಳೆಗೆ ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.
ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28) ಮೃತಪಟ್ಟ ದುರ್ದೈವಿಗಳು. ಗುರುವಾರ ಸಂಜೆ (ಏಪ್ರಿಲ್ 23) ಇಬ್ಬರೂ ಯುವಕರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಳೆ ಶುರುವಾದ ಕಾರಣ, ಮಳೆಯಿಂದ ರಕ್ಷಣೆ ಪಡೆಯಲು ಜಮೀನಿನಲ್ಲಿದ್ದ ಮಾವಿನ ಮರದ ಕೆಳಗೆ ಹೋಗಿ ನಿಂತಿದ್ದರು. ದುರದೃಷ್ಟವಶಾತ್ ಅದೇ ಮಾವಿನ ಮರದ ಮೇಲೆ ಸಿಡಿಲು ಅಪ್ಪಳಿಸಿದ್ದು, ಮರದ ಕೆಳಗೆ ನಿಂತಿದ್ದ ಇಬ್ಬರೂ ಯುವ ರೈತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ಭರಿಸಲಾಗದ ನಷ್ಟ ಉಂಟಾಗಿದೆ. ಖಟಕ್ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

