ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಠಾಣಾ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಶನಿವಾರ ತಡರಾತ್ರಿ ತಾಯಿ ಪವಿತ್ರಾ (26) ಅವರು ಮಕ್ಕಳಾದ 4 ವರ್ಷದ ನಿವೇದ್ ಹಾಗೂ ಒಂದೂವರೆ ವರ್ಷದ ನಿರ್ಮಲ್‍ಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪಾವಗಡದ ಪ್ರಶಾಂತ್ ಹಾಗೂ ಪವಿತ್ರಾ ದಂಪತಿ ಆರು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲಸಿದ್ದರು. ಪ್ರಶಾಂತ್, ಮೊಬೈಲ್ ಶೋರೂಂನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ. ಪವಿತ್ರಾ ಗೃಹಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಆಗಾಗ್ಗೆ ಗಲಾಟೆಯಾಗಿತ್ತು. ಅದೇ ರೀತಿ ಶನಿವಾರವೂ ಜಗಳವಾಗಿತ್ತು. ಇದರಿಂದ ಮನನೊಂದ ಪವಿತ್ರಾ, ಮನೆಯಲ್ಲಿದ್ದ ಇಲಿ ಪಾಷಾಣವನ್ನು ನೀರಿಗೆ ಬೆರೆಸಿ ಮಕ್ಕಳಿಗೆ ಕುಡಿಸಿದ್ದಾರೆ. ನಂತರ ಅವರೂ ಕುಡಿದಿದ್ದಾರೆ. ಪ್ರಶಾಂತ್, ಭಾನುವಾರ ನಿದ್ದೆಯಿಂದ ಎಚ್ಚರಗೊಂಡಾಗ ಅಸ್ವಸ್ಥರಾಗಿದ್ದ ಪತ್ನಿಯನ್ನು ವಿಚಾರಿಸಿದಾಗ ಕೃತ್ಯ ಬಯಲಾಗಿದೆ.

ತಕ್ಷಣ ಸ್ಥಳೀಯರ ಸಹಾಯದಿಂದ ಮೂವರನ್ನೂ ಪ್ರಶಾಂತ್ ಯಶವಂತಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಕ್ಕಳಿಬ್ಬರೂ ಮೃತಪಟ್ಟಿರುವುದಾಗಿವೈದ್ಯರು ತಿಳಿಸಿದರು. ಪವಿತ್ರಾ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಶವಂತಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ಪ್ರಶಾಂತ್ ಅವರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.