ದೊಡ್ಡಬಳ್ಳಾಪುರ: ತಾಲ್ಲೂಕಿನ ಜಿಂಬೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಅಪರಿಚಿತ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಮಾರಸಂದ್ರದ ನಿವಾಸಿ ರಾಮಾಂಜಿನಪ್ಪ(46) ಮೃತರು. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಶನಿವಾರ ಕುಟುಂಬದವರಿಗೆ ಆರೋಗ್ಯ ಸರಿ ಇಲ್ಲ ಎಂದು ಪಕ್ಕದ ಮನೆಯ ಸುರೇಶ್ ಅವರಿಂದ ರಾಮಾಂಜಿನಪ್ಪ ಕಾರು ಪಡೆದುಕೊಂಡು ಬಂದಿದ್ದರು. ನಂತರ ಕಾರು ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿ ಮಹಿಳೆಯ ಅಸ್ಥಿಪಂರಜ ಪತ್ತೆಯಾಗಿತ್ತು.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಕಾರಿನ ಮಾಲೀಕ ಸುರೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ. ಆದರೆ ಕಾರಿನಲ್ಲಿ ಸುಟ್ಟು ಹೋಗಿರುವ ಮಹಿಳೆ ಬಗ್ಗೆ ಇನ್ನು ನಿಖರವಾದ ಮಾಹಿತಿ ದೊರೆತಿಲ್ಲ. ಕಾರು ಬೆಂಕಿಗೆ ಆಹುತಿಯಾದ ಸ್ಥಳದ ಸಮೀಪ ಇರುವ ನೀಲಗಿರಿ ತೋಪಿನಲ್ಲಿ ಮೊಬೈಲ್ ಫೋನ್ ಮತ್ತು ಸ್ವಲ್ಪ ದೂರದಲ್ಲಿ ಅಂಗಿ ಪತ್ತೆಯಾಗಿತ್ತು.