ಬೆಂಗಳೂರು: ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಗೊಂದಲದ ನಡುವೆ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆಯೂ ತೀವ್ರಗೊಂಡಿದೆ. ಅದರಲ್ಲೂ ಮಾಜಿ ಸಚಿವ ವಿ. ಸೋಮಣ್ಣ ನೀಡಿರುವ ಹೇಳಿಕೆಯೂ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನಿಲುವಿನ ಕುರಿತಾಗಿ ಕುತೂಹಲ ಕೆರಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡದೇ ಹೋದರೆ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ವಿಜಯನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 365 ದಿನವೂ ಜನರ ನಡುವೆ ಇದ್ದು, ಜನ ಸಂಘಟನೆ ಮಾಡಿದ ಅನುಭವವಿದೆ. ಆದ್ದರಿಂದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಮಾನ ಕೊಡಿ ಎಂದು ಹೇಳಿದ್ದೇನೆ ಎಂದರು.
ಕಳೆದ 40 ವರ್ಷಗಳಿಂದ ರಾಜ್ಯ ರಾಜಕಾರಣದ ಆಗುಹೋಗು ನನಗೆ ಗೊತ್ತು. ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುವೆ. ಕೊಡದೇ ಹೋದರೆ ಕಾರ್ಯಕರ್ತರ ಸಭೆ ಕರೆದು ಮುಂದಿನ ತೀರ್ಮಾನ ಪ್ರಕಟ ಮಾಡುತ್ತೇನೆ ಎಂದು ಹೇಳಿದ್ದಾರೆ.