News Karnataka Kannada
Wednesday, April 17 2024
Cricket
ತುಮಕೂರು

ತುಮಕೂರು: ಗೃಹ ಸಚಿವರಿಂದ ’ಸ್ಮಾರ್ಟ್ ಸಿಟಿ’ ಯೋಜನೆಗಳ ಪ್ರಗತಿ ಪರಿಶೀಲನೆ

Home Minister to review progress of 'Smart City' projects
Photo Credit : News Kannada

ತುಮಕೂರು: ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರಿಂದು ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿಂದು ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್ ಬಸ್‌ನಿಲ್ದಾಣ ಮುಂದಿನ ನವೆಂಬರ್  ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಕೆಎಸ್‌ಆರ್‌ಟಿಸಿ ಮತ್ತು ಸ್ಮಾರ್ಟ್ ಸಿಟಿ ಎಂಡಿ ಅವರಿಗೆ  ಸೂಚಿಸಿದರು.  ಅಂತೆಯೇ, ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ’ಸೆಂಟ್ರಲೈಸ್ಡ್ ಸೆಂಟರ್’ಅನ್ನು ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು.

ನಗರದ ಎಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲಿ  ಮತ್ತು ಪ್ರಮುಖ ರಸ್ತೆಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿ ವೈಫೈ ಸಂಪರ್ಕಗಳು ಇರಬೇಕು. ಈಗ ಸ್ಮಾರ್ಟ್ ಸಿಟಿ ವತಿಯಿಂದ 6 ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವೈಫೈ ಸಂಪರ್ಕ ಇದ್ದು, ಇದನ್ನು ಹೆಚ್ಚಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಅವರಿಗೆ ಸೂಚಿಸಿದರು.

ತುಮಕೂರು ನಗರವನ್ನು ಪ್ರವೇಶಿಸುವ ಜನರಿಗೆ ನಗರದ ಸೌಂದರ್ಯ ಎದ್ದು ಕಾಣಬೇಕು.   ಎಲ್ಲಾ ಮುಖ್ಯ ದ್ವಾರಗಳಲ್ಲಿ ಕಲ್ಪತರು ನಾಡಿಗೆ ಪ್ರವೇಶ ಎಂಬ ನಾಮಫಲಕವಿರಬೇಕು.

ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟವುಳ್ಳ ಜಿಮ್‌ವೊಂದನ್ನು ನಿರ್ಮಿಸಬೇಕು. ನಗರದ 4 ದಿಕ್ಕಿನಲ್ಲಿ ಸುಸಜ್ಜಿತವಾದ ಎಲ್ಲಾ ವೈದ್ಯಕೀಯ ಉಪಕರಣಗಳನ್ನೊಳಗೊಂಡ ಆಂಬುಲೆನ್ಸ್‌ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಿಂಂದ ನೀಡಬೇಕು.

ನಗರದ ಧೋಬಿಘಾಟ್‌ನಲ್ಲಿ ಅತ್ಯಾಧುನಿಕ ಬಟ್ಟೆ ತೊಳೆಯುವ ಯಂತ್ರ ಹಾಗೂ ಡ್ರೈಯರ್‌ಗಳನ್ನು ಇರಿಸಬೇಕು. ಕೊಳಚೆ ನೀರು ಕಾಮಗಾರಿಯನ್ನು ಪೂರ್ಣಗೊಳಿಸದ ಹೊರತು ಅಮಾನಿಕೆರೆಯಿಂದ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಿಲ್ಲ. ಅಮಾನಿಕೆರೆ ಮುಂಭಾಗದ ಗ್ಲಾಸ್ ಹೌಸ್ ಸುತ್ತ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಮತ್ತು ಸ್ಮಾರ್ಟ್ ಸಿಟಿಯಿಂದ ನಿರ್ಮಿಸಲಾದ ಎಲ್ಲಾ ಕಾಮಗಾರಿಗಳ ನಿರ್ವಹಣೆಗೆ ಪ್ರಾಯೋಜನೆ ಮಾಡಿಕೊಳ್ಳಬೇಕು.  ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಳಿಕೆಯಾಗಿರುವ 8 ಕೋಟಿ ರೂ. ಅನುದಾನವನ್ನು ಉಪಯುಕ್ತ ಕೆಲಸಗಳಿಗೆ ಬಳಸುವಂತೆ ಸೂಚಿಸಿದರು.

ಸುಸಜ್ಜಿತ ಬಡಾವಣೆ ನಿರ್ಮಿಸಲು ಸೂಚನೆ: ತುಮಕೂರಿನಲ್ಲಿ ಟೂಡಾ ಅಸ್ಥಿತ್ವಕ್ಕೆ ಬಂದಾಗಿನಿಂದ ಹೇಳಿಕೊಳ್ಳುವಂತಹ ಯಾವುದೇ ಬಡಾವಣೆ ನಿರ್ಮಾಣವಾಗಿರುವುದಿಲ್ಲ. ಜನರಿಗೆ ಕಡಿಮೆ ದರದಲ್ಲಿ ಉತ್ತಮ ನಿವೇಶನ ನೀಡುವುದು ಟೂಡಾ ಉದ್ದೇಶವಾಗಿದೆ. ನಗರದಿಂದ 2 ಕಿ.ಮೀ. ದೂರದಲ್ಲಿ ಕನಿಷ್ಠ 1ಸಾವಿರ ನಿವೇಶನ ರೂಪಿಸುವ ಸಂಬಂಧ ಇನ್ನೊಂದು ವಾರದೊಳಗಾಗಿ ಕರಡು ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಟೂಡಾ ಆಯುಕ್ತ ಜಾಧವ್ ಅವರಿಗೆ ಸಚಿವರು ಸೂಚಿಸಿದರು.

ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಮೆಟ್ರೋ ರೈಲು ವಿಸ್ತರಿಸುವ ಯೋಜನೆಯಿದ್ದು, ಯೋಜನೆ ಜಾರಿಗೊಂಡಲ್ಲಿ ಈ ಪ್ರದೇಶವೊಂದರಲ್ಲೇ 5ಲಕ್ಷದವರೆಗಿನ ಜನಸಂಖ್ಯೆಯನ್ನು ನಿರೀಕ್ಷಿಸಬಹುದಾಗಿದೆ. ಮುಂದಿನ 10 ವರ್ಷಗಳಲ್ಲಿ ತುಮಕೂರಿನ ಜನಸಂಖ್ಯೆ 25ಲಕ್ಷ ದಾಟುತ್ತದೆ.  ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಸುಸಜ್ಜಿತ ಬಡಾವಣೆ ಇರಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸೂಚಿಸಿದರು.

ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣವಾಗಿರುವ ಅತಿಥಿಗೃಹಗಳು ಸ್ವಚ್ಛವಾಗಿರುವಂತೆ ನಿರ್ವಹಣೆ ಮಾಡಬೇಕು.  ಈ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಒದಗಿಸಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಮಲತಾ ಅವರಿಗೆ ಸೂಚಿಸಿದರು.

ಕೆಸ್ತೂರು-ಕೋರಾ ರಸ್ತೆ ನಿರ್ಮಿಸಲು ಒಂದು ವರ್ಷದ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತು.  ಆದರೆ ಇದುವರೆಗೂ ರಸ್ತೆಯಾಗಿರುವುದಿಲ್ಲ.  ಗುತ್ತಿಗೆದಾರ ಜೆಲ್ಲಿ ಸುರಿದ ಕಾರಣ ಜನರು ಓಡಾಡಲೂ ಆಗದೆ ಕಷ್ಟಪಡುತ್ತಿದ್ದಾರೆ.  ಆದುದರಿಂದ ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಮಲತಾ ಅವರಿಗೆ ಸೂಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು