ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಇತ್ತ ರಾಜಕೀಯ ನಾಯಕರು ಒಬ್ಬರನ್ನೊಬ್ಬರು ಟೀಕಿಸುವ ಭರದಲ್ಲಿ ನಿರತರಾಗಿದ್ದಾರೆ. ಅದರಂತೆ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ, ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ನಿಂದಿಸಿದ್ದಕ್ಕೆ ತಿರುಗೇಟು ನೀಡಿದ ರಾಜಣ್ಣ, ಚುನಾವಣೆಗೆ ಆರು ತಿಂಗಳಿರುವಾಗ ಬಂದು ಹೀಗೆಲ್ಲ ಹೇಳಿಕೆ ಕೊಡುತ್ತಾನೆ. ನಾಲ್ಕೂವರೆ ವರ್ಷ ಮಲಗಿರುತ್ತಾನೆ. ಅದೆಲ್ಲಿರುತ್ತಾನೋ, ಈಗ ಬಂದು ಹಿಂದುತ್ವ ಹಿಂದುತ್ವ ಎಂದು ಚುನಾವಣೆ ಮುಗಿದ ನಂತರ ಪತ್ತೆ ಇರುವುದಿಲ್ಲ ಎಂದು ಟೀಕಿಸಿದರು. ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ ಎಂದಿದ್ದಾರೆ.