News Karnataka Kannada
Thursday, May 09 2024
ತುಮಕೂರು

ಕೇಂದ್ರ ಬರ ಅಧ್ಯಯನ ತಂಡದಿಂದ ತುಮಕೂರು ಜಿಲ್ಲೆಯ ಬರಪರಿಸ್ಥಿತಿ ಪರಿಶೀಲನೆ

Central Drought Study Team Reviews Drought Situation In Tumakuru District
Photo Credit : News Kannada

ತುಮಕೂರು: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ಅವರ ನೇತೃತ್ವದ ತಂಡ ಶುಕ್ರವಾರ ಜಿಲ್ಲೆಯ ವಿವಿದೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿತು.

ತುಮಕೂರು ಜಿಲ್ಲೆಯ ೯ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶ ಹಾಗೂ ಒಂದು ತಾಲ್ಲೂಕನ್ನು ಸಾಧಾರಣ ಬರಪೀಡಿತ ತಾಲ್ಲೂಕೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅರಸಾಪುರದ ಬಳಿ ಜಿಲ್ಲೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳನ್ನು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಅವರು ಬರಮಾಡಿಕೊಂಡರು.

ತಂಡವು ಮೊದಲಿಗೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿ ಗ್ರಾಮದ ಸರ್ವೆ ನಂಬರ್ ೬೭/೩ರ ನಾಗೇಂದ್ರ ಕುಮಾರ್ ಅವರು ೧.೧೪ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿರುವ ಶೇಂಗಾ, ತೊಗರಿ, ಅಲಸಂದೆ, ಜೋಳದ ಬೆಳೆಯನ್ನು ಪರಿಶೀಲಿಸಿತು. ರೈತ ನಾಗೇಂದ್ರಕುಮಾರ್ ಅವರು ನಾನು ಉಳುಮೆ ಮಾಡಿ ಬಿತ್ತನೆ ಮಾಡುವುದಕ್ಕೆ ೪೦೦೦೦ ರೂ. ಖರ್ಚಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬೆಳೆನಾಶವಾಗಿದೆ. ಇದರಿಂದ ದನಕರುಗಳಿಗೆ ಮೇವು ಸಹ ಆಗುವುದಿಲ್ಲ ಎಂದು ತಮ್ಮ ಅಳಲನ್ನು ಹೇಳಿದರು. ಅದೇ ಗ್ರಾಮದ ಸರ್ವೇ ನಂಬರ್ ೬೭/೨ರ ಭಾಗ್ಯಮ್ಮ ಅವರಿಗೆ ಸೇರಿದ ೧.೧೪ ಎಕರೆ ಕೃಷಿ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಮಳೆ ಕೊರತೆಯಿಂದ ಬೆಳೆ ನಷ್ಟವಾಗಿರುವುದನ್ನು ಪರಿಶೀಲಿಸಿ ರೈತರಿಗೆ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ನಂತರ ಮಧುಗಿರಿ ತಾಲ್ಲೂಕಿನ ಮಾಡಗಾನಹಟ್ಟಿ ಗ್ರಾಮದ ಸರ್ವೆ ನಂಬರ್ ೧೩/೧ರ ತಿಪ್ಪೇನರಸಯ್ಯ ಅವರಿಗೆ ಸೇರಿದ ಎರಡು ಎಕರೆ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಯನ್ನು ಪರಿಶೀಲಿಸಿದರು. ಬಿತ್ತನೆ ಮಾಡಿದಾಗಿನಿಂದಲೂ ಸರಿಯಾಗಿ ಮಳೆ ಬಾರದ ಕಾರಣ ಬೆಳೆ ಕುಂಠಿತವಾಗಿದೆ ಎಂದು ಹೇಳಿದರು.

ಅತಿವೃಷ್ಠಿಯಿಂದ ಬೆಳೆ ಹಾಳಾಗಿತ್ತು, ಆದರೆ ಈ ವ? ಮಳೆ ಸಕಾಲಕ್ಕೆ ಬಾರದೆ ಬೆಳೆ ನ?ವಾಗಿದೆ. ಆಗಾಗ್ಗೆ ಮಳೆ ಬಂದರೂ ಸಹ ಭೂಮಿಯ ಮೇಲ್ಭಾಗದ ಒಂದೆರಡು ಇಂಚು ಮಾತ್ರ ತೇವಗೊಂಡಿರುತ್ತದೆ. ಬೇರಿನವರೆಗೆ ತೇವಾಂಶ ಇರುವುದಿಲ್ಲ. ಮುಂದಿನ ಮುಂಗಾರಿನವರೆಗೆ ಜಾನುವಾರುಗಳಿಗೆ ನೀರು, ಮೇವು ಬೇಕು. ಬರಗಾಲದಿಂದ ಜನರ ರಕ್ಷಣೆ ಮಾಡುವಂತೆ ಮತ್ತು ತಾಲ್ಲೂಕಿನ ಸಮಗ್ರ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ರೈತರು ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾತ್ರ ಕಾಮಗಾರಿಗಳನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ರೈತರು ಈ ಸಂದರ್ಭ ಕೇಳಿಕೊಂಡರು.

ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ೯೭೫೩ ಹೆಕ್ಟೇರ್ ಕೃಷಿ ಭೂಮಿಯಲ್ಲಿ ೫೮೩೫ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ sಅಧಿಕಾರಿಗಳು ಕೇಂದ್ರ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಧುಗಿರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಶೇಂಗಾ, ರಾಗಿ, ಜೋಳದ ಜೊತೆಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದರೆ ಒಂದು ಶೇಂಗಾ ಗಿಡದಲ್ಲಿ ಸುಮಾರು ೭೦ ರಿಂದ ೮೦ ಕಾಯಿ ಇರುತ್ತಿತ್ತು, ಆದರೆ ಮಳೆ ನ?ದಿಂದ ಒಂದು ಗಿಡದಲ್ಲಿ ಈಗ ೫ ರಿಂದ ೧೦ ಕಾಯಿ ಇದೆ. ಅದು ಕೂಡ ಸರಿಯಾಗಿ ಇಲ್ಲ ಎಂದು ಹೇಳಿದರು.
ತದನಂತರ ಮಧುಗಿರಿ ತಾಲ್ಲೂಕಿನ ಕೈಮರ ಬಳಿ ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಗೋಕಟ್ಟೆ ಕಾಮಗಾರಿಯನ್ನು ಪರಿಶೀಲನೆಯನ್ನು ನಡೆಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು, ಜಿಲ್ಲೆಯ ೯ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಒಂದು ತಾಲ್ಲೂಕನ್ನ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ. ಅವರ ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಕೊರಟಗೆರೆ, ಮಧುಗಿರಿ, ಶಿರಾ ತಾಲ್ಲೂಕುಗಳ ಆಯ್ದ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶೇ.೬೯ರಷ್ಟು ಬಿತ್ತನೆಯಾಗಿದ್ದು, ಶೇ.೭೩ರಷ್ಟು ಬೆಳೆ ಹಾನಿಯಾಗಿದ್ದು, ಒಟ್ಟಾರೆ ೧೮೮೦ ಕೋಟಿ ನಷ್ಟವಾಗಿದ್ದು, ಇಳುವರಿ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ತಿಳಿಸಿದರು. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಒಂದು ಹೆಕ್ಟೇರ್‌ಗೆ ಬೆಳೆ ನಷ್ಟಕ್ಕೆ ೮,೫೦೦ ರೂ. ಪರಿಹಾರದಂತೆ ಒಟ್ಟು ೧೪೮ ಕೋಟಿ ರೂ. ಪರಿಹಾರ ನೀಡಲಾಗುವುದು. ರೈತರ ಮನವಿಯ ಮೇರೆಗೆ ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

೨೦೨೩ನೇ ಸಾಲಿನ ನೈರುತ್ಯ ಮುಂಗಾರು ಹಂಗಾಮಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಶೇ. ೪ರಷ್ಟು ಹಾಗೂ ಶೇ.೨೮ರಷ್ಟು ವಾಡಿಕೆಗಿಂತ ಸಾಧಾರಣ ಮಳೆಯಾಗಿದ್ದು, ಈ ಮಳೆ ಕೇವಲ ಒಂದೇ ವಾರ ಕೇಂದ್ರೀಕೃತವಾಗಿದ್ದು, ತದನಂತರ ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಶೇ.೭೩ರಷ್ಟು ಅತಿ ಕುಂಠಿತ ಮಳೆಯಿಂದ ಜಿಲ್ಲೆಯ ಎಲ್ಲಾ ೧೦ ತಾಲ್ಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂನ್ ಪ್ರಾರಂಭದಿಂದ ಪ್ರತಿ ತಾಲ್ಲೂಕಿನಲ್ಲೂ ಕನಿಷ್ಟ ೩ ವಾರ ಒಣಗಿದ ಪರಿಸ್ಥಿತಿ ಎದುರಾಗಿದ್ದು, ಎಲ್ಲಾ ೧೦ ತಾಲ್ಲೂಕುಗಳಲ್ಲಿ ಸಾಧಾರಣದಿಂದ ತೀವ್ರ ಪ್ರಮಾಣದ ತೇವಾಂಶ ಕೊರತೆ ಉಂಟಾಗಿದೆ ಹಾಗೂ ಕೆರೆ-ಕಟ್ಟೆ ಮತ್ತು ಅಂತರ್ಜಲದ ಮಟ್ಟವು ಕಡಿಮೆಯಾಗಿರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ೩,೧೪,೬೩೦ ಹೆಕ್ಟೇರ್‌ನಲ್ಲಿ ೨,೧೯,೫೫೪ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದ್ದು, ಕುಂಠಿತ ಮಳೆಯಿಂದ ಶೇ. ೩೦ರಷ್ಟು ಬಿತ್ತನೆ ಕಡಿಮೆಯಾಗಿದೆ ಹಾಗೂ ಒಣ ಪರಿಸ್ಥಿತಿಯಿಂದ ೧,೮೦,೪೨೨ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, ಒಟ್ಟು ೧,೦೮,೬೨೨.೦೬ ರೂ.ಗಳಷ್ಟು ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದರು.

ತದನಂತರ ತಂಡವು ಡಿ.ವಿ.ಹಳ್ಳಿ, ಕಂಬದಹಳ್ಳಿ, ಡಿ.ವಿ.ಹಳ್ಳಿ ಬಳಿಯ ಬೆಲ್ಲದಮಡು ಗೇಟ್ ಬಳಿಯ ಬೆಳೆ ಹಾನಿಯಾದ ರೈತರ ಪ್ರದೇಶಗಳಿಗೆ ತಂಡವು ಭೇಟಿ ನೀಡಿತು. ಈ ಸಂದರ್ಭ ಎಂ.ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕರಣ್ ಚೌದರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು