News Karnataka Kannada
Monday, April 29 2024
ತುಮಕೂರು

ನಾನು ದಲಿತ ಎಂಬ ಕಾರಣಕ್ಕೆ ದೇವಸ್ಥಾನದ  ಒಳಗೆ ಬಿಟ್ಟುಕೊಳ್ಳುವುದಿಲ್ಲ; ಪರಮೇಶ್ವರ್‌

ನಮ್ಮನ್ನ ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಕೇಳಿದ್ದಾರೆ.
Photo Credit :

ಕೊರಟಗೆರೆ (ಏ.15) : ನಾನು ದಲಿತ ಎಂಬ ಕಾರಣಕ್ಕೆ ದೇವಸ್ಥಾನದ  ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಬಹಿರಂಗವಾಗಿ ತಮ್ಮ ಬೇಸರ ಹೊರ ಹಾಕಿದ್ದಾರೆ.

ಕೊರಟಗೆರೆ ಪಟ್ಟಣದ ಪಂಚಾಯ್ತಿ ಆವರಣದಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ. ಆದರೂ ನನ್ನನ್ನು ದೇವಸ್ಥಾನದೊಳಗೆ ಸೇರಿಸುವುದಿಲ್ಲ. ವಿದೇಶಕ್ಕೆ ಹೋಗಿ ಬಂದಿದ್ದೇನೆ, ರಾಜ್ಯದಲ್ಲಿ ನಂಬರ್‌ 2 ಆಗಿದ್ದೇನೆ. ಆದರೂ ನನಗೆ ದೇವಸ್ಥಾನಕ್ಕೆ ಸೇರಿಸುವುದಿಲ್ಲ. ನಾನು ದೇವಸ್ಥಾನಕ್ಕೆ ಹೋದರೆ ಎಲ್ಲಿ ಒಳಗೆ ಬಂದು ಬಿಡುತ್ತೇನೋ ಅಂತಾ ಮಂಗಳಾರತಿ ತಟ್ಟೆತಂದು ಬಿಡುತ್ತಾರೆ. ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ ಎಂದರೆ ಏನು ಹೇಳುವುದು ಎಂದು ತಮ್ಮ ಬೇಸರವನ್ನು ಹೊರ ಹಾಕಿದರು.

ಯಾವ ಸಮಾನತೆಯ ಮಾತುಗಳನ್ನು ಆಡುತ್ತಿದ್ದೇವೆ ಎಂಬುದನ್ನು ಯೋಚಿಸಿ ಎಂದ ಪರಮೇಶ್ವರ್‌ ಇವತ್ತು ಮೀಸಲಾತಿ ಇಲ್ಲದೇ ಹೋಗಿದ್ದರೆ, ನಿಮ್ಮ ಹಕ್ಕುಗಳಿಗೆ ಸಂವಿಧಾನದಲ್ಲಿ ಶಕ್ತಿ ಕೊಡದೇ ಇದ್ದರೆ ಹೇಗೆ ಜೀವನ ಮಾಡುತ್ತಿದ್ದೀರಿ. ಹಕ್ಕಿ, ಪಕ್ಷಿಗಳು, ನಾಯಿ ಹೋಗಿ ಕೆರೆ ನೀರು ಕುಡಿಯುತ್ತೆ. ಆದರೆ ದಲಿತ ಹೋಗಿ ನೀರು ಮುಟ್ಟಂಗಿಲ್ಲ ಅಂತಹ ಪರಿಸ್ಥಿತಿಯನ್ನು ಈಗಲೂ ನೋಡುತ್ತೇವೆ ಅಂದರೆ ಏನು ಹೇಳುವುದು. ಬಾವಿಯಲ್ಲಿ ನೀರು ಸೇದಲು ಹೋದಾಗ ಗಲಾಟೆಗಳು ಆಗಿವೆ. ಅಂತರ್ಜಾತಿ ವಿವಾಹವಾದರೆ ಜಾತಿಯತೆ ಹೋಗುತ್ತೇ ಅಂದ ಬಸವಣ್ಣ ಅಂರ್ತಜಾತಿ ವಿವಾಹ ಮಾಡಿಸಿದ್ದರು. ಇವತ್ತು ಅಂತರ್ಜಾತಿ ವಿವಾಹ ಮಾಡಿಸಿದರೆ ನೇಣು ಹಾಕುತ್ತಾರೆ, ಮರ್ಯಾದಾ ಕೊಲೆಯಾಗುತ್ತದೆ. ಇಂತಹದ್ದನ್ನು ಬದಲಾವಣೆ ಮಾಡಬೇಕಾಗಿದೆ ಎಂದರು.

ಸಂವಿಧಾನದಿಂದ ದಲಿತರು, ಮಹಿಳೆಯರಿಗೆ ಉನ್ನತ ಹುದ್ದೆ: ದೇಶದ ಜಾತಿ ವ್ಯವಸ್ಥೆಯಲ್ಲಿನ ನೋವನ್ನು ಸ್ವತಃ ಅನುಭವಿಸಿದ್ದ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿದ್ದರಿಂದಲೇ ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ದೇಶದ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ಹೇಳಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್‌ ಹಾಗೂ ಜಗಜೀವನರಾಂರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಸಮಸ್ಯೆ ನಿವಾರಿಸಿದ ಮಹಾನ್‌ ಮುತ್ಸದ್ದಿ ನಾಯಕರು ಬಾಬು ಜಗಜೀವನರಾಂ. ಮಾಜಿ ಉಪ ಪ್ರಧಾನಿ ಮತ್ತು ಕೃಷಿ ಸಚಿವರಾಗಿದ್ದ ಅವರ ಆಡಳಿತ ಅವಧಿಯಲ್ಲಿ ಮಾಡಿದ ಸೇವೆ ಸದಾ ಸ್ಮರಿಸುವಂತೆ ಮಾಡಿದೆ. ಬಸವ, ಬುದ್ಧ ವಿಚಾರಧಾರೆಗಳೊಂದಿಗೆ ಪ್ರೇರಿತರಾದ ಅವರು ದೇಶ ಕಟ್ಟಕಡೆಯ ಸಮುದಾಯದ ಹಿತರಕ್ಷಣೆಗಾಗಿ ಶ್ರಮಿಸಿದವರು. ಕೃಷಿ ಕ್ಷೇತ್ರದಲ್ಲಿ ಅನೇಕ ವೈಜ್ಞಾನಿಕ ಬದಲಾವಣೆಗಳ ಮೂಲಕ ದೇಶದ ಆಹಾರ ಸಮಸ್ಯೆ ನಿವಾರಿಸುವ ಮಹತ್ವದ ನಿರ್ಣಯ ಅವರನ್ನು ಅಜಾರಾಮರಗೊಳ್ಳುವಂತೆ ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ.ಓ.ನಾಗರಾಜು ಮತ್ತು ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಲ್‌.ರುದ್ರೇಶ್‌ ಮಾತನಾಡಿ, ದೇಶದಲ್ಲಿ ಉತ್ತಮ ಸಂವಿಧಾನ ರಚನೆ ಮಾಡುವ ಮೂಲಕ ದೇಶದ ದಲಿತರ ರಕ್ಷಣೆಗೆ ಹಾಗೂ ಅವರ ಅಭಿವೃದ್ಧಿಗೆ ಅಂಬೇಡ್ಕರ್‌ ಕಾರಣರಾಗಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ನಂತರ ಗ್ರಂಥವೆಂದರೆ ಭಾರತದ ಸಂವಿಧಾನ ಮಾತ್ರ. ಸಂವಿಧಾನ ರಕ್ಷಣೆ ನಮ್ಮೆಲ್ಲದ ಜವಾಬ್ದಾರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಕುರುಬರಳ್ಳಿ ಗ್ರಾಮದ ಜಿ.ಸೋಮಶೇಖರ್‌ ದಾಸ್‌ರನ್ನು ಶಾಸಕ ಪರಮೇಶ್ವರ್‌ ಸನ್ಮಾನಿಸಿ ಗೌರವಿಸಿದರು, ಕ್ರಾಂತಿಗೀತೆಗಳನ್ನು ಮಂಜುನಾಥ್‌ ಮತ್ತು ಶಿಕ್ಷಕ ಜಿ.ತಿಪ್ಪೇಸ್ವಾಮಿ ತಂಡದಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಾಹೀದಾ ಜಮ್‌ ಜಮ್‌, ತಾಪಂ ಆಡಳಿತಾಧಿಕಾರಿ ದೀಪಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಾವ್ಯ ಶ್ರೀರಮೇಶ್‌, ಉಪಾಧ್ಯಕ್ಷೆ ಕೆ.ವಿ.ಭಾರತಿಸಿದ್ಧ ಮಲ್ಲಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ನಟರಾಜು, ಸದಸ್ಯರಾದ ಕೆ.ಆರ್‌.ಓಬಳರಾಜು, ಕೆ.ಎನ್‌.ಲಕ್ಷ್ಮೇನಾರಾಯಣ್‌, ನಾಗರಾಜು, ನಂದೀಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಎಂ.ರುದ್ರೇಶ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೃಷ್ಣಮೂರ್ತಿ, ತಾಪಂ ಕಾರ್ಯನಿರ್ವಹಾಧಿಕಾರಿ ಡಾ.ಡಿ.ದೊಡ್ಡಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್‌, ಪಪಂ ಮುಖ್ಯಾಧಿಕಾರಿ ಭಾಗ್ಯ, ಆರಕ್ಷಕ ವೃತ್ತ ನಿರೀಕ್ಷಕ ಸಿದ್ಧರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಕೆ.ಉಮಾದೇವಿ, ಕೃಷಿ ಅಧಿಕಾರಿ ನಾಗರಾಜು, ನಗರಸಭಾ ಮಾಜಿ ಉಪಾಧ್ಯಕ್ಷ ವಾಲೇಚಂದ್ರಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್‌, ಅರಕೆರೆ ಶಂಕರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಮ್ಮ ಅರಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು