ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರು, ದೆಹಲಿಯಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ರಿತೇಶ್ ಪಾಂಡೆ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದ್ದು, ಸದ್ಯ ರಹಸ್ಯ ಸ್ಥಳದಲ್ಲಿ ಇರಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲು ಬಳಕೆಯಾಗಿದ್ದ ಮೊಬೈಲ್ ಫೋನ್​ನ್ನು ರಿತೇಶ್ ಪಾಂಡೆ ಹೆಸರಿನಲ್ಲಿ ಖರೀದಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಬಂಧಿತ ಆರೋಪಿಯಿಂದ ಮೊಬೈಲ್ ಫೋನ್ ಹಾಗೂ ಪ್ರಮುಖ ತಾಂತ್ರಿಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ​ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರ ಕೈವಾಡ ಇದೆ, ಇದರ ಹಿಂದಿರುವ ಷಡ್ಯಂತ್ರವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ತನಿಖೆ ಮುಂದುವರೆದಂತೆ ಮತ್ತಷ್ಟು ವ್ಯಕ್ತಿಗಳು ಕಾನೂನಿನ ಬಲೆಗೆ ಬೀಳುವ ಸಾಧ್ಯತೆಯಿದೆ.